Thursday, December 12, 2024

40 ಕಿಮೀ ಸುರಂಗ ರಸ್ತೆಗಳ ನಿರ್ಮಾಣಕ್ಕೆ 19,000 ಕೋಟಿ ರೂ. ಸಾಲ ಪಡೆಯಲು ಮುಂದಾದ ಬಿಬಿಎಂಪಿ

Most read

ಬೆಂಗಳೂರು: ಬೆಂಗಳೂರಿನಲ್ಲಿ 40 ಕಿಲೋ ಮೀಟರ್ ಉದ್ದದ ಸುರಂಗ ಮಾರ್ಗ ನಿರ್ಮಾಣಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) 19,000 ಕೋಟಿ ರೂ.ಗಳ ಸಾಲವನ್ನು ಪಡೆಯಲು ಮುಂದಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ 73 ಕಿಮೀ ಉದ್ದದ ಫೆರಿಫೆರಲ್ ರಿಂಗ್ ರಸ್ತೆಯ ನಿರ್ಮಾಣಕ್ಕೆ ಹುಡ್ಕೊದಿಂದ 27,೦೦೦ ಕೋಟಿ ರೂ. ಸಾಲ ಪಡೆಯಲು ಬಿಬಿಎಂಪಿಗೆ ಗ್ಯಾರಂಟಿ ನೀಡಲು ಸರ್ಕಾರ ಒಪ್ಪಿದೆ. ಈ ಎರಡೂ ಯೋಜನೆಗಳಿಗೆ ಬಿಬಿಎಂಪಿ 46,೦೦೦ ಕೋಟಿ ರೂ. ಸಾಲ ಎತ್ತುತ್ತಿದೆ. ನಗರ ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕಾಗಿ ಇತ್ತೀಚಿನ ವರ್ಷಗಳಲ್ಲಿ ಇದು ಅತಿ ದೊಡ್ಡ ಸಾಲದ ಮೊತ್ತ ಎಂದು ಹೇಳಲಾಗುತ್ತಿದೆ.

40 ಕಿಮೀ ಉದ್ದದ ಸುರಂಗ ಮಾರ್ಗದಲ್ಲಿ ಹೆಬ್ಬಾಳ ಮೇಲ್ಸೇತುವೆಯಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗಿನ 18 ಕಿಮೀ ಮಾರ್ಗವು ಉತ್ತರ-ದಕ್ಷಿಣ ಕಾರಿಡಾರ್ ಸಂಪರ್ಕಿಸಲಿದೆ. 22 ಕಿಮೀ ಉದ್ದದ ಮಾರ್ಗವು ಪೂರ್ವ ಪಶ್ಚಿಮ ಭಾಗವನ್ನು ಸಂಪರ್ಕಿಸಲಿದೆ. ಪೂರ್ವದಲ್ಲಿ ಕೆ.ಆರ್.ಪುರ ಮತ್ತು ಪಶ್ಚಿಮ ಭಾಗದಲ್ಲಿ ಮೈಸೂರು ರಸ್ತೆಯನ್ನು ಸಂಪರ್ಕಿಸಲಿದೆ.

ಸುರಂಗ ರಸ್ತೆಗೆ ಯೋಜನೆಗೆ ಖಾತ್ರಿ ನೀಡಲು ರಾಜ್ಯ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಈ ಯೋಜನೆಗೆ ಒಪ್ಪಿಗೆ ಪಡೆದುಕೊಳ್ಳಲು ಈ ವಿಷಯ ಕುರಿತು ಶೀಘ್ರವೇ ಸಚಿವ ಸಂಪುಟದಲ್ಲಿ ಚರ್ಚೆ ನಡೆಯಲಿದೆ ಎಂದು ಗೊತ್ತಾಗಿದೆ. ಕಳೆದ ಆಗಸ್ಟ್ ನಲ್ಲಿಯೇ ಸಚಿವ ಸಂಪುಟ ಈ ಯೋಜನೆಗೆ ಹಸಿರು ನಿಶಾನೆ ತೋರಿಸಿದ್ದರೂ ಸಾರ್ವಜನಿಕ – ಖಾಸಗಿ ಸಹಭಾಗಿತ್ವ (ಪಿಪಿಪಿ) ಆಧಾರದಲ್ಲಿ ಸುರಂಗ ರಸ್ತೆ ಯೋಜನೆಯನ್ನು ಕೈಗೊಳ್ಳಲು ಸಾಧ್ಯವೇ ಎಂದು ಪರಿಶೀಲಿಸಲು ನಿರ್ದೇಶನ ನೀಡಿದೆ.

ಬಲ್ಲ ಮೂಲಗಳ ಪ್ರಕಾರ ಸಾಲ ಪಡೆದು ಸುರಂಗ ರಸ್ತೆಯನ್ನು ನಿರ್ಮಿಸಲು ಪಾಲಿಕೆ ಆಸಕ್ತಿ ತೋರಿಸಿದೆ. ಬಿಬಿಎಂಪಿ ಮೂಲಗಳ ಪ್ರಕಾರ ವಿಸ್ತೃತ ವರದಿ (DPR) ಸಿದ್ಧವಾಗಿದೆ. ಸರ್ಕಾರ ಆರು ಪಥಗಳ ಅವಳಿ ಸುರಂಗ ಮಾರ್ಗವನ್ನು ನಿರ್ಮಿಸಲು ಮುಂದಾಗಿದೆ.

More articles

Latest article