ಛತ್ತೀಸ್ಘಢ: ಕೋಳಿ ಫಾರಂ ಆರಂಭಿಸಲು 12 ಲಕ್ಷ ರೂ. ಸಾಲ ಕೊಡಿಸುವುದಾಗಿ ನಂಬಿಸಿ ಪ್ರತಿದಿನ ಉಚಿತವಾಗಿ ಕೋಳಿ ಮಾಂಸ ತಿಂದು ಮೋಸ ಮಾಡಿದ್ದಾನೆ ಎಂದು ಆರೋಪಿಸಿ ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾ (ಎಸ್ ಬಿಐ) ವ್ಯವಸ್ಥಾಪಕರೊಬ್ಬರ ವಿರುದ್ಧ ಕೃಷಿಕರೊಬ್ಬರು ದೂರು ನೀಡಿದ್ದಾರೆ.
ಈ ಘಟನೆ ಛತ್ತೀಸ್ಗಢ ರಾಜ್ಯದ ಬಿಲಾಸ್ಪುರ ಜಿಲ್ಲೆಯ ಮಸ್ತೂರಿ ಪಟ್ಟಣದಲ್ಲಿ ನಡೆದಿದೆ. ಪ್ರತಿದಿನ ಕೋಳಿ ಮಾಂಸ ತಂದುಕೊಡುತ್ತಿದ್ದ ರೈತನಿಗೆ ಮ್ಯಾನೇಜರ್ ಮೋಸ ಮಾಡುತ್ತಿದ್ದಾನೆ ಎನ್ನುವುದು ಅರಿವಿಗೆ ಬಂದಿದೆ. ನಂತರ ಅವರು ಮ್ಯಾನೇಜರ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು ಚರ್ಚೆಗೆ ಗ್ರಾಸವೊದಗಿಸಿದೆ.
ಮಸ್ತೂರಿ ಪಟ್ಟಣದ ರೈತ ರೂಪಚಂದ್ ಮನ್ಹರ್ ಎಂಬಾತ ಕೋಳಿ ಫಾರಂ ಹೊಂದಿದ್ದು, ತನ್ನ ವ್ಯವಹಾರವನ್ನು ಮತ್ತಷ್ಟು ವಿಸ್ತರಿಸಲು ಎಸ್ಬಿಐ ಶಾಖೆಯ ವ್ಯವಸ್ಥಾಪಕರನ್ನು ಸಂಪರ್ಕಿಸಿ ರೂ.12 ಲಕ್ಷ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಸಾಲ ನೀಡುವುದಾಗಿ ಭರವಸೆ ನೀಡಿದ್ದ ಮ್ಯಾನೇಜರ್ ಪ್ರತೀ ದಿನ ಬ್ಯಾಂಕ್ಗೆ ಕೋಳಿ ಮಾಂಸ ತಂದುಕೊಡುವಂತೆ ಹೇಳಿದ್ದಾನೆ. ಅದರಂತೆ ರೈತ ಪ್ರತಿದಿನ ಮ್ಯಾನೇಜರ್ಗೆ ಕೋಳಿ ಮಾಂಸ ತಂದುಕೊಟ್ಟಿದ್ದಾನೆ ಜತೆಗೆ ಶೇ. 10 ರಷ್ಟು ಕಮೀಷನ್ ಕೂಡ ನೀಡಿದ್ದಾರೆ. ರೈತ ಬೇರೆ ಕಡೆಯಿಂದ ಕೋಳಿ ಖರೀದಿ ಮಾಡುತ್ತಿದ್ದರು. ಹೀಗೆ 39 ಸಾವಿರ ರೂ. ಮೌಲ್ಯದ ಕೋಳಿ ಮಾಂಸವನ್ನು ಮ್ಯಾನೇಜರ್ ತಿಂದು ತೇಗಿದ್ದಾನೆ ಎಂದು ರೈತ ಆರೋಪಿಸಿದ್ದಾರೆ. ಈ ಸಂಬಂಧ ರೈತ ನೀಡಿರುವ ದೂರನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿ ಮ್ಯಾನೇಜರ್ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಎಸ್ಬಿಐ ಶಾಖೆ ಎದುರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರೈತ ಬೆದರಿಕೆ ಹಾಕಿದ್ದಾನೆ ಎಂದೂ ತಿಳಿದು ಬಂದಿದೆ.