ನವದೆಹಲಿ: ಮುಂದಿನ ವರ್ಷ ನಡೆಯಲಿರುವ ದೆಹಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ವರಿಷ್ಠ ಅರವಿಂದ ಕೇಜ್ರಿವಾಲ್ ಅವರು, ರಾಜಧಾನಿಯ ಆಟೊ ಚಾಲಕರಿಗೆ 10 ಲಕ್ಷದ ವಿಮೆ ನೀಡುವ ಭರವಸೆ ನೀಡಿದ್ದಾರೆ.
ಕೊಂಡಲಿ ವಿಧಾನಸಭಾ ಕ್ಷೇತ್ರದ ಆಟೋ ಚಾಲಕನ ಕುಟುಂಬ ಸದಸ್ಯರ ಜೊತೆ ಮಧ್ಯಾಹ್ನದ ಊಟ ಮಾಡಿದ ಕೇಜ್ರಿವಾಲ್, ಆಟೊ ಚಾಲಕರ ಹೆಣ್ಣುಮಕ್ಕಳ ಮದುವೆಗೆ ರೂ.1 ಲಕ್ಷ ಸಹಾಯ ಧನದ ಭರವಸೆಯನ್ನೂ ನೀಡಿದ್ದಾರೆ. ಅಲ್ಲದೆ, ಆಟೋ ಚಾಲಕರಿಗೆ ವರ್ಷಕ್ಕೆ ಎರಡು ಬಾರಿ ತಲಾ 2,500 ನಂತೆ ಸಮವಸ್ತ್ರ ಭತ್ಯೆ, ‘PoochO’ ಆ್ಯಪ್ ರೀಲಾಂಚ್ ಮತ್ತು ಆಟೊ ಚಾಲಕರ ಮಕ್ಕಳಿಗೆ ಉಚಿತ ಕೋಚಿಂಗ್ ನೀಡುವ ಭರವಸೆ ನೀಡಿದ್ದಾರೆ.
70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ 2025ರ ಫೆಬ್ರುವರಿಯಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. 2020r ಚುನಾವಣೆಯಲ್ಲಿ ಎಎಪಿ 62 ಕ್ಷೇತ್ರಗಳಲಲಿ ಭರ್ಜರಿ ಜಯ ಸಾಧಿಸಿ ಪ್ರಚಂಡ ಬಹುಮತ ಪಡೆದಿತ್ತು. ಬಿಜೆಪಿ ಕೇವಲ 8 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿತ್ತು. ಸತತ ಮೂರನೇ ಬಾರಿಗೆ ಅಧಿಕಾರಕ್ಕೇರಲು ಎಎಪಿ ಶತಪ್ರಯತ್ನ ಮಾಡುತ್ತಿದೆ. ಈ ಭಾರಿ ಅವರು ಬಿಜೆಪಿ ಮತ್ತು ಕಾಂಗ್ರೆಸ್ ನ ಪ್ರಬಲ ಪೈಪೋಟಿಯನ್ನು ಎದುರಿಸಬೇಕಾಗಿದೆ.