ಬೆಳಗಾವಿ: ಕಳೆದ ವರ್ಷ ವಿಧಾನಸಭಾ ಚುನಾವಣೆಗೂ ಮುನ್ನ ಅಂದಿನ ಬಸವರಾಜ ಬೊಮ್ಮಾಯಿ ಸರ್ಕಾರ, ಕರ್ನಾಟಕದಲ್ಲಿ ಮುಸ್ಲಿಮರಿಗೆ ಇದ್ದ ಶೇ. 4ರಷ್ಟು ಮೀಸಲಾತಿಯನ್ನು ರದ್ದು ಮಾಡಿ ಅದನ್ನು ಶೇ. 2ಕ್ಕೆ ಇಳಿಸಿತ್ತು. ಉಳಿದ ಶೇ. 2ರಷ್ಟು ಮೀಸಲಾತಿಯನ್ನು ಪಂಚಮಸಾಲಿ ಲಿಂಗಾಯತರಿಗೆ ನೀಡಿತ್ತು. ಆದರೆ, ಆ ನಿರ್ಧಾರದ ವಿರುದ್ಧ ಕಾನೂನು ಹೋರಾಟ ಆರಂಭವಾದಾಗ ಸುಪ್ರೀಂ ಕೋರ್ಟ್ ನಲ್ಲಿ ಬೊಮ್ಮಾಯಿ ಸರ್ಕಾರ, ಮುಸ್ಲಿಮರ ಶೇ. 4ರಷ್ಟು ಮೀಸಲಾತಿಯನ್ನು ರದ್ದುಗೊಳಿಸುವುದಿಲ್ಲ ಎಂದು ಅಫಿಡವಿಟ್ ಸಲ್ಲಿಸಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬೆಳಗಾವಿಯ ಸುವರ್ಣಸೌಧದಲ್ಲಿ ಆರಂಭವಾದ ಚಳಿಗಾಲದ ವಿಧಾನಸಭಾ ಅಧಿವೇಶನದ ಮೊದಲ ದಿನ ಪಂಚಮಸಾಲಿ ಮೀಸಲಾತಿ ವಿಚಾರ ಚರ್ಚೆಗೆ ಬಂದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಈ ವಿಷಯ ತಿಳಿಸಿದರು. ಬಿಜೆಪಿ ಸರ್ಕಾರ ಸಲ್ಲಿಸಿದ್ದ ಅಫಿಡವಿಟ್ ಪ್ರತಿಯನ್ನು ನಾಳೆ ತೋರಿಸುವುದಾಗಿ ಅವರು ತಿಳಿಸಿದರು
ಚರ್ಚೆಯಲ್ಲಿ ಭಾಗವಹಿಸಿದ ವಿಜಯಪುರ ಶಾಸಕ ಯತ್ನಾಳ್, ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಅವಕಾಶ ನೀಡಬೇಕು. ಪಂಚಮಸಾಲಿ ಸಮುದಾಯವನ್ನು 2 ಎಗೆ ಸೇರ್ಪಡೆ ಮಾಡಬೇಕು ಎಂಬ ಬೇಡಿಕೆಗೆ ಸರ್ಕಾರ ಸ್ಪಂದಿಸಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ “ಪಂಚಮಸಾಲಿ ಸಮುದಾಯವನ್ನು 2 ಎ ಸೇರ್ಪಡೆ ಮಾಡಲು ಹೋರಾಟ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಎರಡು ಬಾರಿ ಸಭೆ ನಡೆಸಿದ್ದೇನೆ. ಜಯಮೃತ್ಯುಂಜಯ ಸ್ವಾಮಿ ಹಾಗೂ ಇತರರ ಜೊತೆಗೆ ಸಭೆ ನಡೆಸಿದ್ದೇನೆ. ಸಭೆಯಲ್ಲಿ ಮೀಸಲಾತಿಗೆ ಅಡ್ಡ ಬರಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೇನೆ. ಮೀಸಲಾತಿಯನ್ನು ಕೆಟಗರಿ ಮಾಡಲಾಗಿದೆ. ಪಂಚಮಸಾಲಿ ಕ್ಯಾಟಗರಿ 3 ಬಿ ಅಡಿಯಲ್ಲಿದೆ. ಯಾರನ್ನಾದರೂ 2ಎ ಕ್ಯಾಟಗರಿಗೆ ಸೇರ್ಪಡೆ ಮಾಡಬೇಕಾದರೆ ಶಾಶ್ವತ ಹಿಂದುಳಿದ ಆಯೋಗದ ಮುಂದೆ ಅರ್ಜಿ ಹಾಕಬೇಕಾಗಿದೆ. ಇದನ್ನು ನಾನು ಸಭೆಯಲ್ಲಿ ತಿಳಿಸಿದ್ದೇನೆ ಎಂದರು.
ಈ ಹಿಂದೆ ಇದ್ದ ಬಿಜೆಪಿ ಸರ್ಕಾರ ಪಂಚಮಸಾಲಿಯನ್ನು 2 ಎ ಗೆ ಸೇರ್ಪಡೆ ಮಾಡಿಲ್ಲ. ಬದಲಾಗಿ, ಮುಸ್ಲಿಮರಿಗೆ 4 ಶೇ ಮೀಸಲಾತಿ ರದ್ದು ಮಾಡಿ 3 ಎ ಹಾಗೂ 3 ಬಿ ಗೆ ತಲಾ 2 ಶೇ. ಹಂಚಿದ್ದಾರೆ. ಇದರ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ಮುಸ್ಲಿಮರಿಗೆ 4 ಶೇ ಮೀಸಲಾತಿ ರದ್ದು ಮಾಡಲ್ಲ ಎಂದು ಹಿಂದಿನ ಸರ್ಕಾರ ಪ್ರಮಾಣ ಪತ್ರ ಸಲ್ಲಿಸಿದೆ ಎಂದರು.
ಆದರೆ ಮತ್ತೆ ಇದೀಗ 2 ಎ ಗೆ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ನಾನು ಹೊಸತಾಗಿ ಹೇಳುತ್ತಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ಏನು ನಡೆಯಿತು, ಹಿಂದಿನ ಸರ್ಕಾರ ಏನು ತೀರ್ಮಾನ ಮಾಡಿದೆ ಎಂಬುವುದನ್ನು ತಿಳಿಸಿದ್ದೇನೆ. ಸುಪ್ರೀಂ ಕೋರ್ಟ್ ಆದೇಶದ ಪ್ರತಿಯನ್ನು ನಾನು ಸದನದ ಮುಂದೆ ಇಡುತ್ತೇನೆ. ಎಲ್ಲರೂ ಕೂಡಾ ಆ ಆದೇಶವನ್ನು ಒಪ್ಪಿಕೊಳ್ಳುತ್ತಾರೆ ಎಂಬುವುದು ನನ್ನ ನಂಬಿಕೆ ಎಂದರು. ಇದೇ ಸಂದರ್ಭದಲ್ಲಿ ಪಂಚಮಸಾಲಿ ಸಮುದಾಯವನ್ನು ಒಬಿಸಿಗೆ ಸೇರ್ಪಡೆ ಮಾಡುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಿ ಎಂದು ಯತ್ನಾಳ್ ಮನವಿ ಮಾಡಿದರು.