ಬೆಂಗಳೂರು: ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಗೆ ರಾಜ್ಯಾದ್ಯಂತ 5,14,000 ನೋಂದಣಿಗಳಾಗಿದ್ದು ಈ ಪೈಕಿ 1,17,000 ಅರ್ಜಿಗಳು ಸ್ವೀಕೃತವಾಗಿವೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ತಿಳಿಸಿದ್ದಾರೆ. ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಹೂಡಿಯಲ್ಲಿರುವ ಕೆಪಿಟಿಸಿಎಲ್ನ ಮಾನವ ಸಂಪನ್ಮೂಲ ಕೇಂದ್ರದಲ್ಲಿ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಪಿಎಮ್ ಸೂರ್ಯ ಘರ್ ಯೋಜನೆಗೆ ಈವರೆಗೆ 5.14 ಲಕ್ಷ ನೋಂದಣಿಯಾಗಿದ್ದು, ಈ ಪೈಕಿ ಸುಮಾರು 1,17,000 ಅರ್ಜಿಗಳು ಸ್ವೀಕೃತವಾಗಿವೆ. ಈ ಯೋಜನೆಯನ್ನು ಕಾರ್ಯಗತಗೊಳಿಸಲು, ಎಮ್ಎನ್ಆರ್ ಇ ಪೋರ್ಟಲ್ ನಲ್ಲಿ 353 ಖಾಸಗಿ ಏಜೆನ್ಸಿಗಳು ನೋಂದಾಯಿಸಿಕೊಂಡಿವೆ ಎಂದು ಅವರು ವಿವರಿಸಿದರು.
ರಾಜ್ಯಾದ್ಯಂತ ಮನೆಗಳಲ್ಲಿ ಸೌರಶಕ್ತಿಯ ಬಳಕೆಯನ್ನು ಉತ್ತೇಜಿಸಲು ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ಸಮರ್ಥ ನಾಯಕತ್ವದಲ್ಲಿ ಯೋಜನೆಯನ್ನು ಉತ್ತೇಜಿಸುವ ಗುರಿ ಹೊಂದಿದ್ದೇವೆ. ಈ ಮೂಲಕ ಸಾಂಪ್ರದಾಯಿಕ ಇಂಧನ ಮೂಲಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ ಮತ್ತು ನವೀಕರಿಸಬಹುದಾದ ಇಂಧನದ ರಾಷ್ಟ್ರೀಯ ಗುರಿ ಸಾಧಿಸಲು ಕೊಡುಗೆ ನೀಡುತ್ತೇವೆ ಎಂದು ಹೇಳಿದರು. ಗ್ರಿಡ್ ಸಂಪರ್ಕಿತ ಮೇಲ್ಛಾವಣಿ ಸ್ಥಾವರಗಳಿಗೆ ಕೇಂದ್ರ ಸರ್ಕಾರವು 30,000 ರೂ. ರಿಂದ 78,000ರೂ. ವರೆಗೆ ಸಹಾಯಧನ ನೀಡುತ್ತದೆ ಮತ್ತು ಈ ಯೋಜನೆ ಅನುಷ್ಠಾನಕ್ಕೆ ಬ್ಯಾಂಕ್ ಗಳಿಂದ ಸಾಲ ಸೌಲಭ್ಯ ಸಹ ಇರುತ್ತದೆ ಎಂದು ಬೆಸ್ಕಾಂ ಎಂಡಿ ತಿಳಿಸಿದರು.
ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆ ಪಡೆಯಲು ಅಪಾರ್ಟ್ಮೆಂಟ್ ಫೆಡರೇಶನ್ಗಳಿಗೆ ಬ್ಯಾಂಕ್ಗಳಿಂದ ಸಾಲ ಪಡೆಯಲು ಇರುವ ಸಮಸ್ಯೆಗಳ ಕುರಿತು ಕಾರ್ಯಾಗಾರದಲ್ಲಿ ಅಪಾರ್ಟ್ ಮೆಂಟ್ ಫೆಡರೇಷನ್ ಪ್ರತಿನಿಧಿಗಳು ಕಳವಳ ವ್ಯಕ್ತಪಡಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಬೆಸ್ಕಾಂ ಎಂಡಿ, ಈ ಯೋಜನೆಯ ಸಾಲ ಸೌಲಭ್ಯದ ಬಗ್ಗೆ ಗ್ರಾಹಕರಿಗೆ ಸ್ಪಷ್ಟ ಮಾಹಿತಿ ನೀಡುವಂತೆ , ರಾಜ್ಯ ಮಟ್ಟದ ಬ್ಯಾಂಕರ್ಗಳ ಸಮಿತಿ (ಎಸ್ಎಲ್ಬಿಸಿ) ಪ್ರತಿನಿಧಿಗೆ ಸೂಚಿಸಿದರು.
ಪ್ರಸ್ತುತ ಬ್ಯಾಂಕ್ ಗಳಿಂದ ಸಾಲ ಸೌಲಭ್ಯವು 65 ವರ್ಷ ವಯೋಮಿತಿಗೆ ಸೀಮಿತವಾಗಿರುತ್ತದೆ. 65 ವರ್ಷ ಮೇಲ್ಪಟ್ಟ ಗ್ರಾಹಕರು, ಸಾಲ ಸೌಲಭ್ಯವನ್ನು ಪಡೆಯಲು ಇಚ್ಛಿಸಿದಲ್ಲಿ ತಮ್ಮ ಕುಟುಂಬ ಸದಸ್ಯರನ್ನು ಜಂಟಿ ಅರ್ಜಿದಾರರನ್ನಾಗಿ ಸೇರಿಸಿ ಸಾಲವನ್ನು ಪಡೆಯಬಹುದು ಎಂದು ಎಸ್ ಎಲ್ ಬಿಸಿ ಪ್ರತಿನಿಧಿ ಮಾಹಿತಿ ನೀಡಿದರು. ಪಿಎಮ್ ಸೂರ್ಯ ಘರ್ ಯೋಜನೆಯಡಿಯಲ್ಲಿ ಸಾಲ ಪಡೆಯಲು ಬ್ಯಾಂಕ್ ಗಳಿಗೆ ಮೇಲಾಧಾರ ಭದ್ರತೆಯ ಅಗತ್ಯವಿರುವುದಿಲ್ಲ ಎಂದು ಬ್ಯಾಂಕರ್ ಗಳ ಪ್ರತಿನಿಧಿ ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸಿದರು.
ಯೋಜನೆಯಡಿಯಲ್ಲಿ ಬ್ಯಾಂಕ್ ಸಾಲ ಪಡೆಯಲು ಅರ್ಜಿ ಸಲ್ಲಿಸಿದಾಗ, ಬ್ಯಾಂಕ್ ಗಳು ತಮ್ಮನ್ನು ಎಮ್ ಎಸ್ ಎಮ್ ಇ ಎಂದು ಪರಿಗಣಿಸುತ್ತಿವೆ. ಆದರೆ ಅಪಾರ್ಟ್ ಮೆಂಟ್ ಫೆಡರೇಷನ್ ಗಳು ಎಮ್ ಎಸ್ ಎಮ್ ಇ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಅಪಾರ್ಟ್ ಮೆಂಟ್ ಫೆಡರೇಷನ್ ಪ್ರತಿನಿಧಿಗಳು ಬೆಸ್ಕಾಂ ಎಂಡಿ ಅವರ ಗಮನ ಸೆಳೆದರು.
ಇದಕ್ಕೆ ಪ್ರತಿಕ್ರಿಯಿಸಿದ ಎಸ್ ಎಲ್ ಬಿಸಿ ಪ್ರತಿನಿಧಿ, ಅಪಾರ್ಟ್ ಮೆಂಟ್ ಫೆಡರೇಷನ್ ಗಳಿಗೆ ಸಾಲ ನೀಡುವ ಬಗ್ಗೆ ಎಮ್ ಎನ್ ಆರ್ ಇ ನಿಂದ ಸ್ಪಷ್ಟ ನಿರ್ದೇಶನ ಇಲ್ಲದಿರುವ ಕಾರಣ, ಇದಕ್ಕೆ ಸಂಬಂಧಪಟ್ಟ ಮಾರ್ಗ ಸೂಚಿಗಳನ್ನು ಹೊರಡಿಸುವಂತೆ ಎಮ್ಎನ್ಆರ್ಇ ಯನ್ನುಕೋರಲಾಗಿದೆ ಎಂದು ಉತ್ತರಿಸಿದರು.
ರಾಜ್ಯದಲ್ಲಿ ಸುಮಾರು 37 ಲಕ್ಷ ಗೃಹ ಜ್ಯೋತಿಯೇತರ ಗ್ರಾಹಕರಿಗೆ ಯೋಜನೆಯನ್ನು ತಲುಪಿಸುವ ಉದ್ದೇಶದೊಂದಿಗೆ ರಾಜ್ಯದ ನೋಡಲ್ ಏಜೆನ್ಸಿಯಾದ ಬೆಸ್ಕಾಂ ಇದರ ತ್ವರಿತ ಅನುಷ್ಠಾನಕ್ಕೆ ಮುಂದಾಗಿದೆ. ಬೆಂಗಳೂರಿನ ವಿವಿಧ ಅಪಾರ್ಟ್ ಮೆಂಟ್ ಫೆಡರೇಷನ್ ಪ್ರತಿನಿಧಿಗಳು, ನೋಂದಾಯಿತ ಖಾಸಗಿ ಏಜೆನ್ಸಿಗಳ ಪ್ರತಿನಿಧಿಗಳು, ಎಸ್ ಎಲ್ ಬಿಸಿ ಪ್ರತಿನಿಧಿ, ಬೆಸ್ಕಾಂನ ತಾಂತ್ರಿಕ ನಿರ್ದೇಶಕ ರಮೇಶ್ ಹಾಗೂ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಪ್ರಧಾನಿ-ಸೂರ್ಯ ಘರ್ ಸಂದರ್ಭ: ಮುಫ್ತ್ ಬಿಜ್ಲಿ ಯೋಜನೆ
ಕೇಂದ್ರ ಸರ್ಕಾರದ ಮೇಲ್ಛಾವಣಿಯ ಸೌರ ವಿದ್ಯುತ್ ಯೋಜನೆ- ಪ್ರಧಾನಮಂತ್ರಿ ಸೂರ್ಯ್ ಘರ್ ಮುಫ್ತ್ ಬಿಜ್ಲಿ ಯೋಜನೆ ಆರಂಭಿಸಿದೆ.
2025-26 ರವರೆಗೆ ಒಟ್ಟು 750 ಶತಕೋಟಿ ರೂ. ವೆಚ್ಚದೊಂದಿಗೆ, ಈ ಯೋಜನೆಯು ದೇಶಾದ್ಯಂತ 10 ದಶಲಕ್ಷ ಮನೆಗಳಿಗೆ ಮಾಸಿಕ 300 ಯೂನಿಟ್ಗಳವರೆಗೆ ಉಚಿತ ವಿದ್ಯುತ್ ಒದಗಿಸುವ ಗುರಿ ಹೊಂದಿದೆ. ಈ ಯೋಜನೆಯು 2024ರ ಫೆಬ್ರವರಿಯಲ್ಲಿ ಆರಂಭವಾದ ಒಂದು ತಿಂಗಳೊಳಗೆ 10 ದಶಲಕ್ಷಕ್ಕೂ ಹೆಚ್ಚು ನೋಂದಣಿಗಳೊಂದಿಗೆ ಅಪಾರ ಜನಪ್ರಿಯತೆ ಪಡೆದುಕೊಂಡಿದೆ.
ಪ್ರಾರಂಭವಾದಾಗಿನಿಂದ, 6.3 ಲಕ್ಷ ಸ್ಥಾಪನೆಗಳು ಕೇವಲ 9 ತಿಂಗಳಲ್ಲಿ ಪೂರ್ಣಗೊಂಡಿವೆ. ಈ ಮೂಲಕ ಮಾಸಿಕ ಸ್ಥಾಪನೆ ದರ 70,000 ಆಗಿದೆ.
ಗ್ರಿಡ್-ಸಂಪರ್ಕಿತ ಛಾವಣಿಯ ಸೌರ ಛಾವಣಿಯ ಪ್ರಯೋಜನಗಳು
* ಹೆಚ್ಚುವರಿ ಸ್ಥಳಾವಕಾಶದ ಅಗತ್ಯವಿಲ್ಲ.
* 78,000 ರೂ. ವರೆಗೆ ಸರ್ಕಾರದ ಸಬ್ಸಿಡಿ.
* ವಿದ್ಯುತ್ ಬಿಲ್ ಹೊರೆ ತಪ್ಪುವುದು.
* ಪರಿಸರ ಸ್ನೇಹಿ ನವೀಕರಿಸಬಹುದಾದ ಇಂಧನದ ಬಳಕೆ
* ಕನಿಷ್ಠ ನಿರ್ವಹಣೆ ವೆಚ್ಚ.
* ಇಂಗಾಲದ ಹೊರಸೂಸುವಿಕೆ ತಗ್ಗುವುದು.
ಸಬ್ಸಿಡಿ
1. 1ಕಿ.ವ್ಯಾ – 2ಕಿ.ವ್ಯಾ ಸಾಮರ್ಥ್ಯದ ಘಟಕ 30,000-60,000 ರೂ.
2. 2 ಕಿ.ವ್ಯಾ. – 3 ಕಿ.ವ್ಯಾ. ಸಾಮರ್ಥ್ಯ 60,000- 78,000 ರೂ.
3. 3 ಕಿ.ವ್ಯಾ. ಗಿಂತ ಹೆಚ್ಚಿನ ಸಾಮರ್ಥ್ಯದ ಘಟಕ ಗರಿಷ್ಠ ಸಬ್ಸಿಡಿ 78,000 ರೂ.