ಬೆಳಗಾವಿ; ಪ್ರತಿಭಟನೆಗೆ ಮುಂದಾದ ಎಂಇಎಸ್‌ ಮುಖಂಡರ ಬಂಧನ

Most read

ಬೆಳಗಾವಿ: ಇಲ್ಲಿನ ಸುವರ್ಣಸೌಧದಲ್ಲಿ ಆರಂಭವಾಗಿರುವ ಕರ್ನಾಟಕ ವಿಧಾನಮಂಡಲದ ಚಳಿಗಾಲದ ಅಧಿವೇಶನವನ್ನು ವಿರೋಧಿಸಿ ಸಂಭಾಜಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ  ಮಹಾರಾಷ್ಟ್ರ ಏಕೀಕರಣ ಸಮಿತಿಯ (ಎಂಇಎಸ್) ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.  ಎಂಇಎಸ್ ಮಹಾಮೇಳ ಆಯೋಜಿಸದಂತೆ ಪೊಲೀಸರು ಭಾರಿ ಭದ್ರತೆ ಏರ್ಪಡಿಸಿದ್ದರು. ಈ ನಿಟ್ಟಿನಲ್ಲಿ ಎಂಇಎಸ್‌ನ ಕಾರ್ಯಾಧ್ಯಕ್ಷ ಮನೋಹರ್ ಕಿಣೇಕರ್ ಮತ್ತು ಖಜಾಂಚಿ ಪ್ರಕಾಶ ಮಾರ್ಗಲೆ ಸೇರಿದಂತೆ ಕಾರ್ಯಕರ್ತರನ್ನು ರಾಮಲಿಂಗಖಿಂಡ್ ಗಲ್ಲಿಯಲ್ಲಿರುವ ಅವರ ಕಚೇರಿಯಿಂದ ಬಂಧಿಸಲಾಯಿತು.

ನಂತರ ಮಹಾರಾಷ್ಟ್ರ ಪರ ಘೋಷಣೆಗಳನ್ನು ಕೂಗುತ್ತಾ ಗುಂಪು ಗುಂಪಾಗಿ ಆಗಮಿಸಿದ ಕಾರ್ಯಕರ್ತರನ್ನು ಸಂಭಾಜಿ ವೃತ್ತದಲ್ಲಿ ಪೊಲೀಸರು ವಶಕ್ಕೆ ಪಡೆದರು. ಕೆಲ ಹೊತ್ತು ಸಂಭಾಜಿ ವೃತ್ತದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿ ಮಹಾರಾಷ್ಟ್ರ ಸಲ್ಲಿಸಿರುವ ಮೊಕದ್ದಮೆ ವಿಚಾರವಾಗಿ ಸುಪ್ರೀಂ ಕೋರ್ಟ್ ಇನ್ನೂ ತೀರ್ಪು ನೀಡಿಲ್ಲ. ಹೀಗಾಗಿ ಚಳಿಗಾಲದ ಅಧಿವೇಶನವನ್ನು ನಡೆಸಬಾರದು ಎಂದು ಎಂಇಎಸ್ ಆಗ್ರಹಪಡಿಸಿತ್ತು. ಜತೆಗೆ ಎಂಇಎಸ್‌ ಸಮಾವೇಶ ನಡೆಸಲು ಅನುಮತಿ ಕೋರಿತ್ತು. ಆದರೆ, ಬೆಳಗಾವಿ ಜಿಲ್ಲಾಡಳಿತ ಅನುಮತಿ ನೀಡಿರಲಿಲ್ಲ.

ಎಂಇಎಸ್ ಪ್ರತಿಭಟನೆ ನಡೆಸಬಹುದು ಎಂಬ ಮುನ್ನೆಚ್ಚರಿಕೆಯಿಂದ  ಸಂಭಾಜಿ ವೃತ್ತ, ಸಂಭಾಜಿ ಗಾರ್ಡನ್, ವ್ಯಾಕ್ಸಿನ್ ಡಿಪೋ ಮೈದಾನ ಹಾಗೂ ಶಿವಾಜಿ ಗಾರ್ಡನ್‌ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.  ಎಂಇಎಸ್ ಸಮಾವೇಶಕ್ಕೆ ಅನುಮತಿ ನೀಡಿಲ್ಲ.  ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಸಮಾವೇಶಕ್ಕೆ ಅನುಮತಿ ನೀಡಲಾಗುವುದಿಲ್ಲ ಎಂದು ಪೊಲೀಸ್‌ ಇಲಾಖೆ ಸ್ಪಷ್ಟಪಡಿಸಿದೆ.

More articles

Latest article