ನವದೆಹಲಿ: ರೈತರಿಗೆ ದೀರ್ಘಾವಧಿವರೆಗೆ ಅಗ್ಗದ ಕೃಷಿ ಸಾಲ ಸೌಲಭ್ಯ ಕಲ್ಪಿಸಬೇಕು. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ ಕಿಸನ್) ಯೋಜನೆಯಡಿ ನೀಡುತ್ತಿರುವ ಹಣವನ್ನು ದುಪ್ಪಟ್ಟುಗೊಳಿಸಬೇಕು ಎಂದು ರೈತ ಸಂಘಟನೆಗಳು ಕೇಂದ್ರ ಸರ್ಕಾರದ ಮುಂದೆ ಬೇಡಿಕೆ ಇಟ್ಟಿವೆ.
ಕೇಂದ್ರ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಇಂದು ನಡೆದ ರೈತ ಸಂಘಟನೆಗಳು ಮತ್ತು ಕೃಷಿ ಅರ್ಥಶಾಸ್ತ್ರಜ್ಞರ ಜತೆ ಎರಡು ಗಂಟೆ ಕಾಲ ಸಭೆ ನಡೆಯಿತು. ಈ ಸಭೆಯಲ್ಲಿ ದೇಶದಲ್ಲಿ ಕೃಷಿ ವಲಯ ಎದುರಿಸುತ್ತಿರುವ ಬಿಕ್ಕಟ್ಟುಗಳನ್ನು ಕುರಿತು ಸಂಘಟನೆಗಳ ಮುಖಂಡರು ಸರ್ಕಾರದ ಗಮನ ಸೆಳೆದರು.
ಭಾರತ ಕೃಷಿಕ ಸಮಾಜ ಅಧ್ಯಕ್ಷ ಅಜಯ್ ವೀರ್ ಜಖರ್ ಮಾತನಾಡಿ ಕೃಷಿ ಉತ್ಪಾದಕತೆ ಹೆಚ್ಚಳ ಹಾಗೂ ರೈತರ ಕಲ್ಯಾಣಕ್ಕೆ ಹೆಚ್ಚಿನ ಒತ್ತು ನೀಡುವಂತೆ ಒತ್ತಾಯಿಸಿದರು. ಶೇ.1ರ ಬಡ್ಡಿ ದರದಲ್ಲಿ ಸಾಲ ನೀಡಬೇಕು. ಪ್ರಸ್ತುತ ಪಿಎಂ ಕಿಸಾನ್ ನಿಧಿಯಡಿ ನೀಡುತ್ತಿರುವ ವಾರ್ಷಿಕ 6 ಸಾವಿರ ರೂಗಳನ್ನು 12 ಸಾವಿರ ರೂ.ಗಳಿಗೆ ಹೆಚ್ಚಿಸಬೇಕು ಎಂದು ಗಮನ ಸೆಳೆದರು.
ಕಡಲೆ, ಸೋಯಾಬಿನ್ ಮತ್ತು ಸಾಸಿವೆ ಉತ್ಪಾದನೆಯನ್ನು ಹೆಚ್ಚಿಸಲು ಮುಂದಿನ 8 ವರ್ಷಗಳವರೆಗೆ 1 ಸಾವಿರ ಕೋಟಿ ರೂ. ಒದಗಿಸಬೇಕು. ಈ ಮೂಲಕ ಕೃಷಿ ಉತ್ಪನ್ನಗಳ ಇಳುವರಿ ಹೆಚ್ಚಲಿದ್ದು, ಆಮದು ಕಡಿಮೆಯಾಗಲಿದೆ ಎಂದು ತಿಳಿಸಿದರು. ಕೀಟನಾಶಕಗಳ ಮೇಲಿನ ಜಿಎಸ್ಟಿಯನ್ನು ಶೇ.18ರಿಂದ ಶೇ.5ಕ್ಕೆ ಇಳಿಸುವಂತೆ ಕೃಷಿ ವ್ಯಾಪಾರ ಸಮಿತಿ ಅಧ್ಯಕ್ಷ ಆರ್.ಜಿ. ಅಗರ್ವಲ್ ಆಗ್ರಹಪಡಿಸಿದರು.