Wednesday, December 11, 2024

ರೇಣುಕಾಸ್ವಾಮಿ ಕೊಲೆ ಪ್ರಕರಣ; ನಟ ದರ್ಶನ್‌ ಜಾಮೀನು ರದ್ದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಕೆ

Most read

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ 2ನೇ ಆರೋಪಿಯಾಗಿರುವ ಚಿತ್ರನಟ ದರ್ಶನ್ ಅವರಿಗೆ ಹೈಕೋರ್ಟ್ ಮಂಜೂರು ಮಾಡಿರುವ ಮಧ್ಯಂತರ ಜಾಮೀನು ರದ್ದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಬುಧವಾರ ಮೇಲ್ಮನವಿ ಸಲ್ಲಿಸಲಾಗಿದೆ. ಪ್ರಾಸಿಕ್ಯೂಷನ್ ಪರವಾಗಿ ವಕೀಲರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ದರ್ಶನ್ ಅವರಿಗೆ ಕರ್ನಾಟಕ ಹೈಕೋರ್ಟ್ ಷರತ್ತುಬದ್ಧ ಮಂಜೂರು ಮಾಡಿರುವ ಮಧ್ಯಂತರ ಜಾಮೀನು ರದ್ದು ಮಾಡುವಂತೆ ಅರ್ಜಿಯಲ್ಲಿ ಕೋರಲಾಗಿದೆ. ಈ ಅರ್ಜಿ ಡಿಸೆಂಬರ್‌ 6 ಅಥವಾ ಡಿ.9 ರಂದು ವಿಚಾರಣೆಗೆ ಬರುವ ಸಾಧ್ಯತೆಯಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಲ್ಲಿ ಬಂಧನವಾದ ನಂತರ ದರ್ಶನ್ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿ ಇದ್ದರು. ಅಲ್ಲಿ ಅವರಿಗೆ ವಿಶೇಷ ಆತಿಥ್ಯ ನೀಡಲಾಗುತ್ತಿದೆ ಎಂಬ ಆರೋಪದಡಿಯಲ್ಲಿ  ದರ್ಶನ್ ಅವರನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿತ್ತು. ಜೈಲಿನಲ್ಲಿದ್ದ ಅವಧಿಯಲ್ಲಿ ದರ್ಶನ್ ಗೆ ಬೆನ್ನು ನೋವು ಕಾಣಿಸಿಕೊಂಡಿತ್ತು. ವೈದ್ಯಕೀಯ ಚಿಕಿತ್ಸೆಗೆ ಜಾಮೀನು ನೀಡುವಂತೆ ದರ್ಶನ್ ಪರ ವಕೀಲರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ಪ್ರಬಲವಾದ ವಾದ ಮಂಡಿಸಿದ್ದರು. ಹೈಕೋರ್ಟ್ ಮಧ್ಯಂತರ ಆರೋಗ್ಯದ ಚಿಕಿತ್ಸೆಗಾಗಿಯೇ ಜಾಮೀನು ಮಂಜೂರು ಮಾಡಿತ್ತು. ಜಾಮೀನು ಸಿಕ್ಕ ನಂತರ ದರ್ಶನ್‌ ಕೆಂಗೇರಿಯ ಬಿಜಿಎಸ್‌ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಧ್ಯಂತರ ಜಾಮೀನು ಅವದಿಯೂ ಕೊನೆಯಾಗುತ್ತಾ ಬಂದಿದೆ.ಈ ಮಧ್ಯೆ ಹೈಕೋರ್ಟ್‌ ನಲ್ಲಿ ದರ್ಶನ್‌ ಅವರ ಸ್ನೇಹಿತೆ ಪವಿತ್ರಾಗೌಡ ಮೊದಲಾದ ಆರೋಪಿಗಳ ರೆಗ್ಯುಲರ್‌ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದೆ.

ಸುಪ್ರೀಂ ಕೋರ್ಟ್‌ ನಲ್ಲಿ ಮೇಲ್ಮನವಿ ಸಲ್ಲಿಸಲು ಗೃಹ ಇಲಾಖೆ ಅನುಮತಿ ನೀಡಿತ್ತು. ಅನುಮತಿ ಸಿಕ್ಕ ಬೆನ್ನಲ್ಲೇ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ಪೊಲೀಸ್‌ ಇಲಾಖೆ ಮೂಲಗಳು ತಿಳಿಸಿವೆ.



More articles

Latest article