ಲೈಂಗಿಕ ದೌರ್ಜನ್ಯ; ಕೊನೆಗೂ POSH COMMITTEE ರಚಿಸಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ

Most read

ಬೆಂಗಳೂರು: ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಕನ್ನಡ ಚಿತ್ರರಂಗದ ಕೆಲವು ಸದಸ್ಯರು ಹಾಗೂ ಮಹಿಳಾ ಸಂಘಟನೆಗಳ ನಿರಂತರ ಒತ್ತಡಕ್ಕೆ ಮಣಿದಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೊನೆಗೂ ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ (POSH Act) ಸಮಿತಿ ರಚಿಸಿದೆ.

ಕೇರಳ ರಾಜ್ಯದಲ್ಲಿ ಚಿತ್ರರಂಗದ ಲೈಂಗಿಕ ದೌರ್ಜನ್ಯದ ಕುರಿತು ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ನೀಡಿದ ಬೆನ್ನಲ್ಲೇ ಕರ್ನಾಟಕದಲ್ಲಿಯೂ ಇಂತಹುದೊಂದು ಸಮಿತಿ ರಚಿಸಬೇಕು ಎಂಬ ಕೂಗು ಎದ್ದಿತ್ತು. ಆದರೆ ಈ ಬೇಡಿಕೆಯನ್ನು ವಾಣಿಜ್ಯ ಮಂಡಳಿ ಗಂಭೀರವಾಗಿ ಪರಿಗಣಿಸಿರಲಿಲ್ಲ. ಮೇಲಾಗಿ ಚಿತ್ರರಂಗದ ನಟ, ನಟಿಯರು, ನಿರ್ಮಾಪಕರು ನಿರ್ದೇಶಕರು ಅಷ್ಟಾಗಿ ಆಸಕ್ತಿ ತೋರಿರಲಿಲ್ಲ. ನಿರಂತರ ಒತ್ತಡ ಕೇಳಿ ಬಂದ ನಂತರ ಇದೀಗ ಹಿರಿಯ ನಿರ್ದೇಶಕಿ ಕವಿತಾ ಲಂಕೇಶ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಆದೇಶ ಹೊರಡಿಸಲಾಗಿದೆ.

ಸಮಿತಿಯ ಖಾಯಂ ಸದಸ್ಯರಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು, ಸದಸ್ಯರಾಗಿ ಹಿರಿಯ ನಟಿ ಪ್ರಮೀಳಾ ಜೋಶಾಯ್, ಮಹಿಳಾ ಹಕ್ಕುಗಳ ಹೋರಾಟಗಾರ್ತಿ ವಿಮಲಾ ಕೆ.ಎಸ್, ಹಿರಿಯ ವಕೀಲೆ ರಾಜಲಕ್ಷ್ಮಿ ಅಂಕಲಗಿ, ಟ್ರಾನ್ಸ್ ಜೆಂಡರ್ ಹೋರಾಟಗಾರರಾದ ಮಲ್ಲು ಕುಂಬಾರ್, ನಟಿ ಶೃತಿ ಹರಿಹರನ್, ಹಿರಿಯ ಪತ್ರಕರ್ತ ಮುರುಳೀಧರ್ ಖಜಾನೆ, ರಂಗಕರ್ಮಿ ಶಶಿಕಾಂತ ಯಡಹಳ್ಳಿ, ನಿರ್ಮಾಕಪಕರಾದ ಸಾ.ರಾ. ಗೋವಿಂದು, ಎನ್.‌ ಎಂ.ಸುರೇಶ್ ಸಮಿತಿಯಲ್ಲಿದ್ದಾರೆ.

ಸಮಿತಿ ರಚನೆ ಕುರಿತು ಮಾತನಾಡಿದ ಕವಿತಾ ಲಂಕೇಶ್, ಪಾಶ್ ಕಮಿಟಿ ರಚಿಸಬೇಕು ಎಂದು ನಾನು ಮತ್ತು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ವಾಣಿಜ್ಯ ಮಂಡಳಿ ಮೇಲೆ ಒತ್ತಡ ಹೇರಿದ್ದೆವು. ಇಂತಹುದೊಂದು ಸಮಿತಿಗಾಗಿ ಕಳೆದ ಐದು ವರ್ಷಗಳಿಂದ ಪ್ರಯತ್ನ ಮಾಡುತ್ತಲೇ ಇದ್ದರೂ ಸಾಧ್ಯವಾಗಿರಲಿಲ್ಲ. ಈಗ ಸಮಿತಿ ರಚನೆಯಾಗಿರುವುದು ಸಂತಸ ತಂದಿದೆ ಎಂದರು.

ದೌರ್ಜನ್ಯವಾದರೆ ಏನು ಮಾಡಬೇಕು ಎಂಬ ಬಗ್ಗೆ ಕೆಲಸ ಆರಂಭಿಸಬೇಕು. ಮೊದಲು ಅದಕ್ಕೊಂದು ಹೆಲ್ಪ್ ಲೈನ್ ಮಾಡಬೇಕು. ಏಕೆಂದರೆ, ಯಾರಿಗೆ ದೂರು ನೀಡಬೇಕು ಎಂಬ ಗೊಂದಲ ಇದ್ಧೇ ಇರುತ್ತದೆ. ಮೊದಲಿನಿಂದಲೂ ಈ ಸಮಸ್ಯೆ ಇದೆ. ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನ್ಯಾಯ ಸಿಗುವ ಸಾಧ್ಯತೆಗಳಿರಲಿಲ್ಲ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಪ್ರತಿಕ್ರಿಯಿಸಿ ಚಲನಚಿತ್ರ ವಾಣಿಜ್ಯ ಮಂಡಳಿ ಅಂತಿಮವಾಗಿ ಪಾಶ್ ಸಮಿತಿ ರಚಿಸಿರುವುದು ಹೆಮ್ಮೆಯ ಸಂಗತಿ. ಮೊದಲ ಬಾರಿಗೆ ಕನ್ನಡ ಚಿತ್ರೋದ್ಯಮದಲ್ಲಿ ಸಮಿತಿ ರಚನೆಯಾಗಿದೆ. ಚಿತ್ರರಂಗದಲ್ಲಿ ಕೆಲಸ ಮಾಡುವ ಯಾವುದೇ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದರೆ ದೂರು ನೀಡಿ, ನ್ಯಾಯ ಪಡೆಯಲು ಪಾಶ್ ಕಮಿಟಿ ರಚನೆಯಾಗಿದೆ ಎಂದು ಹೇಳಿದರು. ಆರಂಭದಲ್ಲಿ ಇಂತಹುದೊಂದು ಸಮಿತಿಗೆ ವಾಣಿಜ್ಯ ಮಂಡಳಿ ಅಪಸ್ವರ ಎತ್ತಿತ್ತು. ಅವರೊಂದಿಗೆ ಜಗಳ ನಡೆಸಿಯೇ ಸಮಿತಿ ರಚಿಸಲು ಒಪ್ಪಿಸಬೇಕಾಯಿತು. ಕನ್ನಡದ ನಟಿಯರು ಹಾಗೂ ಉಳಿದವರಿಗೆ ದೌರ್ಜನ್ಯವಾದಾಗ ನ್ಯಾಯ ಪಡೆಯಲು ಅವರದ್ದೇ ತಾಯಿ ಸಂಸ್ಥೆಯಲ್ಲಿ ಸಮಿತಿ ರಚನೆಯಾಗಿರುವುದು ಉತ್ತಮ ನಿರ್ಧಾರ ಎಂದು ತಿಳಿಸಿದರು.

More articles

Latest article