ಭುವನೇಶ್ವರ: 2014 ರಿಂದೀಚೆಗೆ ಒಡಿಶಾದಲ್ಲಿ ನಡೆದ ಎನ್ ಕೌಂಟರ್ ಗಳಲ್ಲಿ 123 ಮಾವೋವಾದಿಗಳು ಹತ್ಯೆಗೀಡಾಗಿದ್ದಾರೆ. ಜತೆಗೆ 11 ಮಂದಿ ಭದ್ರತಾ ಸಿಬ್ಬಂದಿಯೂ ಅಸುನೀಗಿದ್ದಾರೆ ಎಂದು ಮುಖ್ಯಮಂತ್ರಿ ಮೋಹನ್ ಚರಣ್ ಮಾಂಝಿ ವಿಧಾನಸಭೆಗೆ ತಿಳಿಸಿದ್ದಾರೆ.
ಬಿಜೆಪಿ ಶಾಸಕರೊಬ್ಬರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ರಾಜ್ಯದಲ್ಲಿ 2014ರ ಜನವರಿ 1ರಿಂದ 2024ರ ನವೆಂಬರ್ 15ರ ವರೆಗೆ 219 ಎನ್ಕೌಂಟರ್ ಪ್ರಕರಣಗಳು ನಡೆದಿವೆ. ಈ ಘಟನೆಗಳಲ್ಲಿ 123 ಮಾವೋವಾದಿಗಳನ್ನು ಹತ್ಯೆಗೈಯಲಾಗಿದೆ ಎಂದು ತಿಳಿಸಿದರು.
2014ರಲ್ಲಿ-6, 2015ರಲ್ಲಿ-9, 2017ರಲ್ಲಿ- 7, 2018ರಲ್ಲಿ-19, 2019ರಲ್ಲಿ-8, 2020ರಲ್ಲಿ-16, 2021ರಲ್ಲಿ-7, 2022ರಲ್ಲಿ- 7, 2023ರಲ್ಲಿ ಮೂವರು ಹಾಗೂ ಪ್ರಸಕ್ತ ವರ್ಷದ ನವೆಂಬರ್ 15 ರವರೆಗೆ ಐವರು ಮಾವೋವಾದಿಗಳನ್ನು ಹತ್ಯೆಗೈಯಲಾಗಿದೆ. 2016ರಲ್ಲಿ ನಡೆದ ಪೊಲೀಸ್ ಎನ್ಕೌಂಟರ್ಗಳಲ್ಲಿ ಅತಿ ಹೆಚ್ಚು ಅಂದರೆ 36 ಮಾವೋವಾದಿಗಳು ಹತರಾಗಿದ್ದಾರೆ ಎಂದು ಮಾಹಿತಿ ನೀಡಿದರು. ಹುತಾತ್ಮರಾದ 11 ಮಂದಿ ಭದ್ರತಾ ಸಿಬ್ಬಂದಿಯಲ್ಲಿ 2015 ಮತ್ತು 2022ರಲ್ಲಿ ತಲಾ ಮೂವರು, 2020ರಲ್ಲಿ ಇಬ್ಬರು, 2016, 2017 ಮತ್ತು 2019 ರಲ್ಲಿ ತಲಾ ಒಬ್ಬರು ಹತರಾಗಿದ್ದಾರೆ, ಕಳೆದ ಎರಡು ವರ್ಷಗಳಲ್ಲಿ ಯಾವುದೇ ಭದ್ರತಾ ಸಿಬ್ಬಂದಿ ಮೃತಪಟ್ಟಿಲ್ಲ ಎಂದು ಹೇಳಿದ್ದಾರೆ.