ನವದೆಹಲಿ:, ಕ್ಯಾನ್ಸರ್‌ನಿಂದ ಬಳಲುತ್ತಿರುವ ತಮ್ಮ ಪತ್ನಿ ಮನೆ ಮದ್ದು ಸೇವಿಸಿ ಗುಣಮುಖರಾಗಿದ್ದಾರೆ ಎಂದು ಮಾಜಿ ಕ್ರಿಕೆಟ್ ಆಟಗಾರ ಹಾಗೂ ರಾಜಕಾರಣಿ ನವಜೋತ್ ಸಿಂಗ್ ಸಿಧು ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಈ ಹೇಳಿಕೆ ಅವರಿಗೆ ಈಗ ಮುಳುವಾಗತೊಡಗಿದೆ. ಛತ್ತೀಸ್‌ಗಢ ನಾಗರಿಕ ಸಮಾಜ (ಸಿಸಿಎಸ್) ಸಿಧು ಅವರ ಪತ್ನಿ ನವಜೋತ್ ಕೌರ್ ಅವರಿಗೆ 850 ಕೋಟಿ ರೂ. ಪರಿಹಾರ ಕೋರಿ ಲೀಗಲ್ ನೋಟಿಸ್ ಕಳುಹಿಸಿದ್ದು, ಕ್ಯಾನ್ಸರ್ ಚಿಕಿತ್ಸೆಯ ಪಥ್ಯಾಹಾರ ಕುರಿತು ವಿವರಣೆ ನೀಡುವಂತೆ ಸೂಚಿಸಿದೆ.
ಸಿಧು ಅವರು ತಮ್ಮ ಹೇಳಿಕೆಗೆ ಬಹಿರಂಗ ಕ್ಷಮೆಯಾಚಿಸಬೇಕು. ಇಲ್ಲವೇ ತಮ್ಮ ಹೇಳಿಕೆಗೆ ಒಂದು ವಾರದೊಳಗೆ ಪೂರಕ ವೈಜ್ಞಾನಿಕ ಪುರಾವೆಗಳನ್ನು ಸಲ್ಲಿಸಬೇಕು. ಒಂದು ವೇಳೆ ವಿಫಲವಾದಲ್ಲಿ ದಾರಿತಪ್ಪಿಸುವಂತಹ ಹೇಳಿಕೆ ನೀಡಿದ್ದಕ್ಕಾಗಿ 850 ಕೋಟಿ ರೂ ಪರಿಹಾರ ನೀಡಬೇಕಾಗುತ್ತದೆ ಎಂದೂ ನೋಟಿಸ್ನಲ್ಲಿ ಎಚ್ಚರಿಕೆ ನೀಡಲಾಗಿದೆ.
ನವೆಂಬರ್ 21ರಂದು ಸುದ್ದಿಗಾರರ ಜತೆ ಮಾತನಾಡಿದ್ದ ಸಿಧು ಅವರು, ತಮ್ಮ ಪತ್ನಿಗೆ ಕ್ಯಾನ್ಸರ್ ನಾಲ್ಕನೇ ಹಂತದಲ್ಲಿತ್ತು.ಆಕೆ ಇನ್ನು ಕೆಲವೇ ದಿನಗಳು ಮಾತ್ರ ಬದುಕುತ್ತಾರೆ ಎಂದು ವೈದ್ಯರು ಹೇಳಿದ್ದರು. ಬೇವು, ಅರಿಶಿಣ, ನಿಂಬೆ, ನೀರು, ಬೀಟ್ರೂಟ್ನಿಂದ ತಯಾರಿಸಿದ ಮನೆಮದ್ದು ಸೇವಿಸಿ ಗುಣಮುಖರಾಗಿದ್ದಾರೆ ಎಂದಿದ್ದರು. ಕ್ಯಾನ್ಸರ್ ಅನ್ನು ದೇಹದ ಉರಿಯೂತಕ್ಕೆ ಹೋಲಿಸಿದ್ದ ಸಿಧು, ಅಂತಹ ಉರಿಯೂತವು ಹಾಲು, ಗೋಧಿ (ಕಾರ್ಬೋಹೈಡ್ರೇಟ್) ಮೈದಾ ಮತ್ತು ಸಕ್ಕರೆಯಿಂದ ಉಂಟಾಗುತ್ತದೆ ಎಂದು ಪ್ರತಿಪಾದಿಸಿದ್ದರು.
ಸಕ್ಕರೆಯಿಂದ ಕ್ಯಾನ್ಸರ್ ವೃದ್ಧಿಸುತ್ತದೆ. ಹೀಗಾಗಿ ಕ್ಯಾನ್ಸರ್ ಮದ್ದಿಗಾಗಿ, ಆಯುರ್ವೇದ, ಅಮೆರಿಕ ಚಿಕಿತ್ಸೆ, ಭಾರತದಲ್ಲಿನ ಸಂಶೋಧನೆಗಳು ಎಲ್ಲವನ್ನೂ ನಾನು ಗಂಟೆಗಟ್ಟಲೆ ಓದಿದ್ದೇನೆ. ಸಕ್ಕರೆ, ಗೋಧಿ, ಮೈದಾ, ಗಾಳಿ ತುಂಬಿದ ಪಾನೀಯಗಳು, ಸಮೋಸಾ, ಜಿಲೇಬಿಯನ್ನು ತ್ಯಜಿಸಿದ್ದೆವು ಎಂದು ಹೇಳಿದ್ದರು.
ಅವರ ಈ ಹೇಳಿಕೆಯನ್ನು ವೈದ್ಯರು ಹಾಗೂ ಕ್ಯಾನ್ಸರ್ ತಜ್ಞರು ಒಪ್ಪದೆ ಅಸಮಾಧಾನ ವ್ಯಕ್ತಪಡಿಸಿದ್ದರು. ಯಾವುದೇ ಪುರಾವೆ ಇಲ್ಲದ ಇಂಥ ಹೇಳಿಕೆಯನ್ನು ಒಪ್ಪುವುದಿಲ್ಲ ಎಂದು ಪ್ರತಿಪಾದಿಸಿದ್ದರು.
ಇದೀಗ ಛತ್ತೀಸ್ಗಢ ನಾಗರಿಕ ಸಮಾಜದ ಸಂಚಾಲಕ ಡಾ. ಕುಲದೀಪ್ ಸೋಲಂಕಿ ಅವರು, ‘ಸಿಧು ದಂಪತಿ ಸುಳ್ಳು ಮಾಹಿತಿ ನೀಡುವ ಮೂಲಕ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಕ್ಯಾನ್ಸರ್ ಕುರಿತು ಸದ್ಯ ಇರುವ ಚಿಕಿತ್ಸೆಗಳ ಕುರಿತು ನಕಾರಾತ್ಮಕ ಮನೋಭಾವ ಬಿತ್ತುತ್ತಿದ್ದಾರೆ. ಇವರು ಹೇಳುವ ಮನೆಮದ್ದು ಸೇವಿಸುವುದರಿಂದ ಸಾವಿಗೆ ತುತ್ತಾಗುವ ಅಪಾಯವೂ ಹೆಚ್ಚಿರುತ್ತದೆ, ಎಂದು ತಿಳಿಸಿದ್ದಾರೆ.
ನೋಟಿಸ್ನಲ್ಲಿ ಸಿಧು ಪತ್ನಿ ಕೌರ್ ಅವರಿಗೆ ಸಿಸಿಎಸ್ ಮೂರು ಪ್ರಶ್ನೆಗಳನ್ನು ಕೇಳಿದೆ. ನಿಮ್ಮ ಆರೋಗ್ಯ ಮತ್ತು ಚೇತರಿಕೆ ಕುರಿತು ನಿಮ್ಮ ಪತ್ನಿ ನೀಡಿದ ಹೇಳಿಕೆಗಳನ್ನು ನೀವು ಅನುಮೋದಿಸುತ್ತೀರಾ? ನೀವು ಚಿಕಿತ್ಸೆಗಾಗಿ ಪಡೆದ ಅಲೋಪಥಿ ಔಷಧಗಳಿಂದ ಯಾವ ಪರಿಣಾಮವೂ ಉಂಟಾಗಿಲ್ಲ ಎಂದು ನಂಬುತ್ತೀರಾ? ನೀವು ನಿಮ್ಮ ಚೇತರಿಕೆಗಾಗಿ ಬೇವಿನ ಎಲೆ, ನಿಂಬೆ ನೀರು, ತುಳಸಿ ಮತ್ತು ಅರಿಶಿಣಗಳನ್ನು ಮಾತ್ರವೇ ಸೇವಿಸುತ್ತೀರಾ ಅಥವಾ ನೀವು ಅಲೋಪಥಿ ಔಷಧಗಳನ್ನೂ ಬಳಸುತ್ತೀರಾ ಎಂಬ ಪ್ರಶ್ನೆಗಳನ್ನು ಕೇಳಿದೆ.
ಸಿಧು ಅವರ ಹೇಳಿಕೆ ಅಲೋಪಥಿ ಔಷಧ ಹಾಗೂ ಚಿಕಿತ್ಸೆ ಕುರಿತು ಜನರ ಮನಸ್ಸಿನಲ್ಲಿ ಋಣಾತ್ಮಕ ಭಾವನೆಯನ್ನು ಮೂಡಿಸುವಂತಿದೆ. ಇವರ ಹೇಳಿಕೆಯಿಂದ ಕ್ಯಾನ್ಸರ್ ರೋಗಿಗಳು ಅರ್ಧದಲ್ಲಿಯೇ ಔಷಧ ತ್ಯಜಿಸಲು ಮುಂದಾಗಿದ್ದಾರೆ . ಇದರಿಂದ ಕ್ಯಾನ್ಸರ್ ರೋಗಿಗಳ ರ ಜೀವಕ್ಕೆ ಅಪಾಯ ಉಂಟಾಗುತ್ತಿದೆ ಎಂದೂ ನೋಟಿಸ್ ನಲ್ಲಿ ಹೇಳಲಾಗಿದೆ.