ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಮತ್ತೊಮ್ಮೆ ಟೀಕಾಪ್ರಹಾರವನ್ನು ಮುಂದುವರೆಸಿದ್ದಾರೆ. 2014ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ‘ಸುಳ್ಳುಗಾರ’ ಮೋದಿ ಪರ ಪ್ರಚಾರ ಮಾಡಿದ್ದಕ್ಕಾಗಿ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತೇನೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಮೋದಿ ಅಕ್ಟರ್ ಎಂದಾದರೆ, ಆತನಿಗೆ ಸರಸ್ವವನ್ನೂ ಸಮರ್ಪಿಸುವ ಬೀರ್ಬಲ್ ಆಗಲು ನಾನು ಒಪ್ಪುವುದಿಲ್ಲ. ಪ್ರಧಾನಿಯಾದ ಮೊದಲ 15 ದಿನಗಳಲ್ಲಿ ವಿದೇಶಿ ಬ್ಯಾಂಕ್ಗಳಲ್ಲಿರುವ ಕಪ್ಪು ಹಣವನ್ನು ಮರಳಿ ಸ್ವದೇಶಕ್ಕೆ ತರುವುದಾಗಿ ಮೋದಿ ಭರವಸೆ ನೀಡಿದ್ದರು. ಅದು ಈವರೆಗೆ ಸಾಧ್ಯವಾಗಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ವಿರಾಟ್ ಹಿಂದೂಸ್ತಾನ್ ಸಂಗಮ್ (ವಿಎಚ್ಎಸ್) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಶೆಟ್ಟಿ ಅವರು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಪೌರತ್ವ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಹಂಚಿಕೊಂಡಿದ್ದರು. ಸುಬ್ರಮಣಿಯನ್ ಸ್ವಾಮಿ ಅವರು ರಾಹುಲ್ ಗಾಂಧಿ ಅವರ ಪೌರತ್ವದ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೋರಿ 2015ರಿಂದ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ. ಇದು ಈಗ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದೆ. ಮೋದಿ ಅವರು ರಾಹುಲ್ ಅವರನ್ನು ರಕ್ಷಿಸುತ್ತಿದ್ದಾರೆ ಎಂದು ಪೋಸ್ಟ್ನಲ್ಲಿ ಶೆಟ್ಟಿ ಹೇಳಿದ್ದರು.
ಜಗದೀಶ್ ಶೆಟ್ಟಿ ಅವರ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ಸ್ವಾಮಿ, ಪ್ರಧಾನಿ ಮೋದಿ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಭಾರತ-ಚೀನಾ ಗಡಿ ವಿವಾದದ ಬಗ್ಗೆ ಸುಳ್ಳು ಹೇಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ದೇಶದ್ರೋಹಕ್ಕೆ ಗುರಿಯಾಗುತ್ತಾರೆ ಎಂದು ಸುಬ್ರಮಣಿಯನ್ ಸ್ವಾಮಿ ಇತ್ತಿಚೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, 2020ರ ಏಪ್ರಿಲ್ನಿಂದ ಚೀನಾ 4,046 ಚದರ ಕಿಲೋ ಮೀಟರ್ ವಿವಾದಿತ ಲಡಾಖ್ ಪ್ರದೇಶವನ್ನು ವಶಪಡಿಸಿಕೊಂಡಿದೆ. ಆದರೆ, ಈ ಜೋಡಿ ಮಾತ್ರ ಯಾರೂ ಆಕ್ರಮಿಸಿಕೊಂಡಿಲ್ಲ ಎಂಬ ಸುಳ್ಳನ್ನೇ ಹೇಳಿಕೊಂಡು ಬರುತ್ತಿದೆ. ಭಾರತ-ಚೀನಾ ಗಡಿ ವಿವಾದ ಸಂಬಂಧ ಸತ್ಯ ಹೊರಬಿದ್ದರೆ ತಾವು ದೇಶದ್ರೋಹ ಆರೋಪಕ್ಕೆ ಗುರಿಯಾಗುತ್ತೇವೆ ಎನ್ನುವುದು ಮೋದಿ ಮತ್ತು ಅಮಿತ್ ಶಾ ಜೋಡಿಗೆ ತಿಳಿದಿರಲಿ ಎಂದು ಗುಡುಗಿದ್ದಾರೆ.