ಛಾಯಾಚಿತ್ರ ಹಾಗೂ ವಿಡಿಯೋಗ್ರಾಫರ್‌ ನೇಣಿಗೆ ಶರಣು

Most read

ಛಾಯಾಚಿತ್ರ ಹಾಗೂ ವಿಡಿಯೋಗ್ರಫಿ ಮಾಡಿಕೊಂಡಿದ್ದ39 ವರ್ಷದ ಕಿರಣ್‌ ಎಂಬುವರು ನೆಲಮಂಗಲದ ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಇವರು ಮೂಲತಃ ಕೆ ಆರ್‌ ಪೇಟೆ ತಾಲೂಕಿನವರು ಎಂದು ತಿಳಿದು ಬಂದಿದೆ. ಹಲವು ವರ್ಷಗಳಿಂದ ಬೆಂಗಳೂರು ಉತ್ತರ ತಾಲ್ಲೂಕು ಕಡಬಗೆರೆ ಕ್ರಾಸ್ ಸಮೀಪ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ನಾಲ್ಕು ವರ್ಷಗಳ ಹಿಂದೆ ಚಿಕ್ಕಮಗಳೂರಿನ ನಿಶ್ಚಿತಾ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದರು. ಮೃತ ಯುವಕ ಹಿಂದೆ ಕೆಲವು ಸುದ್ದಿ ವಾಹಿನಿಗಳಲ್ಲಿ ಕ್ಯಾಮೆರಾಮೆನ್ ಆಗಿ ಕಾರ್ಯನಿರ್ವಹಿಸಿದ್ದರು.

ಫೋಟೊ ಎಡಿಟಿಂಗ್ ಮಾಡುವ ಕೆಲಸ ಇದೆ ಎಂದು ಹೇಳಿ ಮನೆಯ ಕೊಠಡಿಯಲ್ಲಿ ಬಾಗಿಲು ಹಾಕಿಕೊಂಡು, ಮದ್ಯ ಸೇವಿಸಿ ನೇಣಿಗೆ ಶರಣಾಗಿದ್ದಾರೆ ಎಂದು ಮಾದನಾಯಕನಹಳ್ಳಿ ಪೊಲೀಸರು ತಿಳಿಸಿದ್ದಾರೆ. ಗುರುವಾರ ಬೆಳಿಗ್ಗೆ ಪತ್ನಿ ಬಾಗಿಲು ತಟ್ಟಿದಾಗ ತೆಗೆಯಲಿಲ್ಲ. ನಂತರ, ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಅವರ ಸಮ್ಮುಖದಲ್ಲಿ ಬಾಗಿಲು ಒಡೆದು ಪರಿಶೀಲಿಸಿದಾಗ ನೇಣಿಗೆ ಶರಣಾಗಿರುವುದು ಗೊತ್ತಾಗಿದೆ.

ಮಾದನಾಯಕನಹಳ್ಳಿ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯಾವ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದಕ್ಕೆ ಯಾವುದೇ ಪುರಾವೆಗಳು ಸಿಕ್ಕಿಲ್ಲ ಎಂದು ಇನ್‌ಸ್ಪೆಕ್ಟರ್ ಮುರಳೀಧರ್ ತಿಳಿಸಿದ್ದಾರೆ.

More articles

Latest article