ಬೆಂಗಳೂರು: ಸಿಂಧುತ್ವ ಪರಿಶೀಲನೆ ಮಾಡಿದ ನಂತರ 545 ಪಿಎಸ್‌ಐ ಹುದ್ದೆಗೆ ನೇಮಕಾತಿ ಆದೇಶ ನೀಡಲಾಗುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದ್ದಾರೆ. ಅಂತಿಮ ಪಟ್ಟಿಗೂ ಮುನ್ನವೇ ನೇಮಕಾತಿ ಆದೇಶ ನೀಡಲು ಸಾಧ್ಯವಿಲ್ಲ. ಆಯ್ಕೆಯಾದ ಅಭ್ಯರ್ಥಿಗಳ ದಾಖಲೆಗಳ ಸಿಂಧುತ್ವ ಪರಿಶೀಲನೆಗೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗಿದೆ. ಜಿಲ್ಲಾಧಿಕಾರಿಗಳು ಸಿಂಧುತ್ವ ಪರಿಸೀಲನೆ ನಡೆಸಿದ ನಂತರ ನೇಮಕಾತಿ ಆದೇಶ ನೀಡಲಾಗುತ್ತದೆ. ಆದರೂ ನಾನು ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ನೀವು ಆದೇಶ ಕೊಡಿ. ಆಮೇಲೆ ಸಿಂಧುತ್ವ ಪರಿಶೀಲನೆ ಮಾಡಬಹುದು. ಒಂದು ವೇಳೆ ತಪ್ಪಾಗಿದ್ದರೆ ಆಯ್ಕೆಯನ್ನು ರದ್ದುಪಡಿಸಬಹುದು ಎಂದು ಹೇಳೀದ್ದೇವೆ ಎಂದರು.
ಹಾಸನದಲ್ಲಿ ಸ್ವಾಭಿಮಾನಿ ಸಮಾವೇಶ ವಿಚಾರ ನನಗೆ ತಿಳಿದಿಲ್ಲ. ಸಮಾವೇಶ ಇದೆ ಎಂದು ಮಾತ್ರ ಗೊತ್ತು. ಪಕ್ಷದಿಂದ ಮಾಡ್ತಾರೋ. ಕಾರ್ಯಕರ್ತರಿಂದ ಮಾಡ್ತಾರೋ ಗೊತ್ತಿಲ್ಲ. ಯಾವುದೇ ಸಮಾವೇಶ ಮಾಡಲು ಯಾರೂ ಬೇಡ ಅನ್ನಲ್ಲ. ಆದರೆ ಕೆಲವು ಮಾರ್ಗಸೂಚಿಗಳ ಅಡಿಯಲ್ಲಿ ಮಾಡಲು ಅಡ್ಡಿ ಇಲ್ಲ ಎಂದರು. ಸಚಿವ ಸಂಪುಟ ಪುನಾರಚನೆ ಬಗ್ಗೆಯೂ ನನಗೆ ಮಾಹಿತಿ ಇಲ್ಲ. ಸಂಪುಟ ಪುನಾರಚನೆ ಬಿಟ್ಟ ಸಿಎಂಗೆ ಬಿಟ್ಟ ವಿಚಾರ. ಹೈಕಮಾಂಡ್ ನಾಯಕರ ಜೊತೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುತ್ತಾರೆ. ಅದಕ್ಕಿಂತ ಹೆಚ್ಚಿನ ಮಾಹಿತಿ ನನಗೆ ಗೊತ್ತಿಲ್ಲ ಎಂದು ಉತ್ತರಿಸಿದರು.
ಮುಸ್ಲಿಮರಿಗೆ ಮತದಾನದ ಹಕ್ಕು ತೆಗೆಯಬೇಕು ಎಂಬ ಚಂದ್ರಶೇಖರನಾಥ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು ಸಂವಿಧಾನದಲ್ಲಿ ಪ್ರತಿಯೊಂದು ಸಮುದಾಯ ಧರ್ಮಗಳಿಗೆ ಸಮಾನ ಅವಕಾಶ ಮತ್ತು ಹಕ್ಕು ಇರುತ್ತದೆ. ಸ್ವಾಮೀಜಿಗಳು ಸರಿಯಾಗಿ ನೋಡಿಕೊಂಡಿಲ್ಲ ಅನ್ನಿಸುತ್ತದೆ ಎಂದರು.