ಬೆಂಗಳೂರು: ಸಾಮಾಜಿಕ ಮಾಧ್ಯಮ ತಾಣಗಳಲ್ಲಿ ಪಶ್ಚಿಮಘಟ್ಟ ವ್ಯಾಪ್ತಿಯ ಉತ್ತರ ಕನ್ನಡ ಜಿಲ್ಲೆಯ ಜಿಲ್ಲೆಯ ಅಂಕೋಲ ತಾಲೂಕಿನ ನವಳಸ ಅರಣ್ಯ ವಿಭಾಗದಲ್ಲಿ ಹಳ್ಳಗಳು ಬರಿದಾಗಿ, ನೀರಿನ ಒರತೆ ಸಂಪೂರ್ಣ ಸ್ತಬ್ಧವಾಗಿರುವ ವಿಡಿಯೋ ವೈರಲ್ ಆಗಿದ್ದು, ಈ ಬಗ್ಗೆ ದಿನಪತ್ರಿಕೆಗಳಲ್ಲಿ ಸಚಿತ್ರ ವರದಿಗಳೂ ಪ್ರಕಟವಾಗಿವೆ. ರಾಜ್ಯದ ನೀರಿನ ಸುಸ್ಥಿರತೆಯ ಹಿನ್ನಲೆಯಲ್ಲಿ ಇದು ಅತ್ಯಂತ ಆಘಾತಕಾರಿಯಾಗಿದ್ದು, ಇದನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ.
ಸಾಮಾನ್ಯವಾಗಿ ಫೆಬ್ರವರಿ ಅಂತ್ಯದವರೆಗೆ ತುಂಬಿ ಹರಿಯುತ್ತಿದ್ದ ಈ ಹಳ್ಳಗಳು, ಈ ಬಾರಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದ್ದರೂ ಬತ್ತಿ ಹೋಗಿರುವುದು ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಜಲಕ್ಷಾಮದ ಮುನ್ಸೂಚನೆಯನ್ನು ನೀಡುವಂತಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ, ಪರಿಸರ ಇಲಾಖೆ ಮತ್ತು ಎಂಪ್ರಿಯ ಸಹಯೋಗದಲ್ಲಿ ತಜ್ಞರ ತಂಡವನ್ನು ರಚಿಸಿ ಈ ಬಗ್ಗೆ ಅಧ್ಯಯನ ನಡೆಸಿ ಪರಿಹಾರ ಮಾರ್ಗೋಪಾಯಗಳೊಂದಿಗೆ 3 ತಿಂಗಳ ಒಳಗಾಗಿ ವರದಿ ಸಲ್ಲಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಸಚಿವ ಈಶ್ವರ ಬಿ ಖಂಡ್ರೆ ಸೂಚಿಸಿದ್ದಾರೆ.