ಬೆಂಗಳೂರು: ಆದಾಯಕ್ಕಿಂತ ಅತಿ ಹೆಚ್ಚು ಆಸ್ತಿ ಗಳಿಕೆ ಮಾಡಿದ ವಿವಿಧ ಇಲಾಖೆಗಳಲ್ಲಿ ಆಯಕಟ್ಟಿನ ಹುದ್ದೆಗಳಲ್ಲಿರುವ ನಾಲ್ವರು ಹಿರಿಯ ಅಧಿಕಾರಿಗಳ ನಿವಾಸ ಸೇರಿ 25 ಸ್ಥಳಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಬೃಹತ್ ಕಾರ್ಯಾಚರಣೆ ನಡೆಸಿದ್ದಾರೆ.
ಬೆಂಗಳೂರು ನಗರ ಯೋಜನಾ ನಿರ್ದೇಶಕ ಎನ್.ಕೆ. ತಿಪ್ಪೇಸ್ವಾಮಿ, ಮಂಗಳೂರಿನ ಭೂ ಹಾಗೂ ಗಣಿ ವಿಜ್ಞಾನ ಇಲಾಖೆಯ ವಿಜ್ಞಾನಿ ಎಂ.ಸಿ. ಕೃಷ್ಣವೇಣಿ, ಬೆಂಗಳೂರಿನ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್, ಬೆಂಗಳೂರಿನ ಅಬಕಾರಿ ಜಂಟಿ ಆಯುಕ್ತರ ಕಚೇರಿಯ
ಎಸ್ ಪಿ, ಕೆ.ಮೋಹನ್ ಅವರ ನಿವಾಸ ಮತ್ತು ಸಂಬಂಧಪಟ್ಟ ಪ್ರದೇಶಗಳಲ್ಲಿ ದಾಳಿ ನಡೆದಿದೆ.
ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಮಂಗಳೂರು ಮತ್ತು ಮಂಡ್ಯದ 25 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆದಿದೆ. ಅಧಿಕಾರಿಗಳ ನಿವಾಸ, ಅವರ ಜತೆ ನಂಟು ಹೊಂದಿರುವವರ ನಿವಾಸಗಳು ಮತ್ತು ಬೇನಾಮಿ ವ್ಯಕ್ತಿಗಳ ಸ್ಥಳಗಳ ಮನೆಗಳ ಮೇಲೆ ದಾಳಿ ನಡೆದಿದೆ. ಈ ನಾಲ್ವರು ಅಧಿಕಾರಿಗಳ ಬಳಿ ಘೋಷಿತ ಆದಾಯಕ್ಕಿಂತ ರೂ. 26.66 ಕೋಟಿಗಳಷ್ಟು ಹೆಚ್ಚುವರಿ ಆಸ್ತಿ ಪತ್ತೆಯಾಗಿದೆ.
ಕೃಷ್ಣವೇಣಿ ಅವರ ಬಳಿ ಪತ್ತೆಯಾದ ಆಸ್ತಿಪಾಸ್ತಿ ವಿವರ: 3 ನಿವೇಶನಗಳು, ಬೆಂಗಳೂರಿನ ಯಲಹಂಕದಲ್ಲಿ 1 ಫ್ಲ್ಯಾಟ್, ನಿರ್ಮಾಣ ಹಂತದಲ್ಲಿರುವ 1 ವಾಣಿಜ್ಯ ಸಂಕೀರ್ಣ, 26 ಎಕರೆ ಕಾಫಿ ಪ್ಲಾಂಟೇಷನ್ ಸೇರಿದಂತೆ ಒಟ್ಟು ಸ್ಥಿರಾಸ್ತಿ 10.41 ಕೋಟಿ ರೂಪಾಯಿ. ರೂ. 56 ಸಾವಿರ ನಗದು, 66.71 ಲಕ್ಷ ಮೌಲ್ಯದ ಚಿನ್ನಾಭರಣಗಳು, 60 ಲಕ್ಷ ಬೆಲೆಬಾಳುವ ವಾಹನಗಳು, 24.40 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಪತ್ತೆ. ಒಟ್ಟು ಆಸ್ತಿಯ ಮೌಲ್ಯ 11.93 ಕೋಟಿ.
ಮಹೇಶ್ ಅವರ ಅಕ್ರಮ ಆಸ್ತಿ ವಿವರ: 25 ನಿವೇಶನಗಳು, 1 ವಾಸದ ಮನೆ, 25 ಎಕರೆ ಕೃಷಿ ಜಮೀನು ಸೇರಿದಂತೆ 4.76 ಕೋಟಿ ಮೌಲ್ಯದ ಸ್ಥಿರಾಸ್ತಿ; 1.82 ಲಕ್ಷ ನಗದು, 15 ಲಕ್ಷ ರೂ.ಮೌಲ್ಯದ ಚಿನ್ನಾಭರಣ, ರೂ.25 ಲಕ್ಷ ಮೌಲ್ಯದ ವಾಹನಗಳು, ರೂ. 1.71 ಕೋಟಿ ಮೌಲ್ಯದ ಇತರ ವಸ್ತುಗಳು. ಇವರ ಒಟ್ಟು ಆಸ್ತಿಯ ಮೌಲ್ಯ – 6.89 ಕೋಟಿ ರೂ.
ಮೋಹನ್.ಕೆ. ಅವರ ಅಕ್ರಮ ಸಂಪಾದನೆ ವಿವರ: 3 ನಿವೇಶ, 2 ವಾಸದ ಮನೆಗಳು, 2.25 ಎಕರೆ ಕೃಷಿ ಜಮೀನು ಸೇರಿದಂತೆ 3.22 ಕೋಟಿ ಮೌಲ್ಯದ ಸ್ಥಿರಾಸ್ತಿ; 44.58 ಲಕ್ಷ ಮೌಲ್ಯದ ಚಿನ್ನಾಭರಣ, 35 ಲಕ್ಷ ಮೌಲ್ಯದ ವಾಹನಗಳು, ಬ್ಯಾಂಕ್ ಎಫ್.ಡಿ 35 ಲಕ್ಷ ರೂ. ಇವರ ಒಟ್ಟು ಆಸ್ತಿಯ ಮೌಲ್ಯ – 4.37 ಕೋಟಿ ರೂ.
ತಿಪ್ಪೇಸ್ವಾಮಿ ಎನ್.ಕೆ. ಇವರ ಬಳಿ ಪತ್ತೆಯಾದ ಆಸ್ತಿ ವಿವರ: 1 ನಿವೇಶನ, 2 ವಾಸದ ಮನೆಗಳು, 7.5 ಎಕರೆ ಕೃಷಿ ಜಮೀನು, ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 2.50 ಕೋಟಿ ಮೌಲ್ಯದ ಸ್ಥಿರಾಸ್ತಿ; 8 ಲಕ್ಷ ನಗದು, 58.73 ಲಕ್ಷ ಮೌಲ್ಯದ ಚಿನ್ನಾಭರಣ, 29.10 ಲಕ್ಷ ಮೌಲ್ಯದ ವಾಹನಗಳು, 15 ಸಾವಿರ ರೂ ಮೌಲ್ಯದ ಇತರೆ ವಸ್ತುಗಳುಒಟ್ಟು ಆಸ್ತಿಯ ಮೌಲ್ಯ- 3.46 ಕೋಟಿ ರೂ.ಗಳು. ತಿಪ್ಪೆಸ್ವಾಮಿ ಅವರ ನಿವಾಸದಲ್ಲಿ 28 ಜೊತೆ ಕಿವಿಯೋಲೆ, 23 ಚಿನ್ನದ ಸರ. 15 ನೆಕ್ಲೇಸ್, 8 ಬ್ರ್ಯಾಂಡೆಡ್ ವಾಚ್, 89 ಲಕ್ಷ ನಗದು. 23 ಚಿನ್ನದ ಬಳೆ, ಚಿನ್ನದ ಉಂಗುರ, ಬೆಳ್ಳಿ ವಸ್ತುಗಳು ಪತ್ತೆಯಾಗಿವೆ. ಈ ಆಸ್ತಿಯನ್ನು ಕಂಡು
ಲೋಕಾಯುಕ್ತ ಅಧಿಕಾರಿಗಳೇ ದಂಗಾಗಿ ಹೋಗಿದ್ದಾರೆ.