ತುಮಕೂರು: ಜಿಲ್ಲೆಯ ದಲಿತ ಮಹಿಳೆ ಕೊಲೆ ಪ್ರಕರಣದಲ್ಲಿ 21 ಸವರ್ಣೀಯ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತುಮಕೂರಿನ ಮೂರನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಪಾಲಪುರ ಗ್ರಾಮದ 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಲಾಗಿದೆ. ಹಾಗೆಯೇ ತಲಾ ಅಪರಾಧಿಗೆ 13,500 ರೂ. ದಂಡ ಸೇರಿ ಒಟ್ಟು 2 ಲಕ್ಷ 83 ಸಾವಿರದ 500 ರೂ. ದಂಡ ವಿಧಿಸಲಾಗಿದೆ.
ಈ ದಲಿತ ಮಹಿಳೆಯ ಹತ್ಯೆ ಪ್ರಕರಣ 2010ರಲ್ಲಿ ರಾಜ್ಯಾದ್ಯಂತ ಗಮನ ಸೆಳೆದಿತ್ತು. 2010ರ ಜೂನ್ 28ರಂದು ದಲಿತ ಮಹಿಳೆ ಡಾಬಾ ಹೊನ್ನಮ್ಮ ಅವರ ಮೇಲೆ ಚಪ್ಪಡಿ ಕಲ್ಲು ಎತ್ತಿಹಾಕಿ ಭೀಕರವಾಗಿ ಸರ್ವಣೀಯರು ಕೊಲೆ ಮಾಡಿದ್ದರು. ಪ್ರಕರಣ ಸಂಬಂಧ ಒಟ್ಟು 27 ಆರೋಪಿಗಳ ವಿರುದ್ಧ ಎಫ್ ಐಆರ್ ದಾಖಲಾಗಿತ್ತು. ಹಂದನಕರೆ ಠಾಣೆಯಲ್ಲಿ ಕೊಲೆ ಹಾಗೂ ಜಾತಿನಿಂದನೆ ಕೇಸ್ ದಾಖಲಾಗಿತ್ತು.
ಪ್ರಕರಣದ 27 ಆರೋಪಿಗಳ ಪೈಕಿ 6 ಆರೋಪಿಗಳು ಈಗಾಗಲೇ ಮೃತಪಟ್ಟಿದ್ದಾರೆ. ಉಳಿದ 19 ಪುರುಷರು, ಇಬ್ಬರು ಮಹಿಳೆಯರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಅಂದಿನ DySP ಶಿವರುದ್ರಪ್ಪ ತನಿಖೆ ನಡೆಸಿ ಚಾರ್ಜ್ ಶೀಟ್ ಸಲ್ಲಿಸಿದ್ದರು. 3ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ನ ನ್ಯಾ.ನಾಗಿರೆಡ್ಡಿ ಅವರು ಆದೇಶ ಹೊರಡಿಸಿದ್ದಾರೆ. ಸರ್ಕಾರಿ ಅಭಿಯೋಜಕರಾಗಿ ಜ್ಯೋತಿ ವಾದ ಮಂಡಿಸಿದ್ದರು.