ಬೆಂಗಳೂರು: ಬೆಂಗಳೂರು ಸೇರಿ ಕರ್ನಾಟಕದ 14 ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣ ಮುಂದುವರೆಯಲಿದೆ. ರಾಜಧಾನಿಯಲ್ಲಿ ಶನಿವಾರ ಕೆಲವು ಭಾಗಗಳಲ್ಲಿ ಮಳೆಯಾಗಿತ್ತು. ಆದರೆ ಮೋಡವಿದ್ದರೂ ಭಾನುವಾರ ಮಳೆಯಾಗಿಲ್ಲ.
ಭಾನುವಾರ ದಕ್ಷಿಣ ಒಳನಾಡಿನಲ್ಲಿ ಹಿಂಗಾರು ಮಳೆ ಸಾಮಾನ್ಯವಾಗಿದ್ದು ಕರಾವಳಿ ಕರ್ನಾಟಕ ಮತ್ತು ಉತ್ತರ ಒಳನಾಡಿನಲ್ಲಿ ದುರ್ಬಲವಾಗಿತ್ತು. ಕರ್ನಾಟಕ ದಕ್ಷಿಣ ಒಳಭಾಗದ ಕೆಲವು ಸ್ಥಳಗಳಲ್ಲಿ ಭಾನುವಾರ ಮಳೆಯಾಗಿದೆ. ದಕ್ಷಿಣ ಕನ್ನಡದ ಉಪ್ಪಿನಂಗಡಿಯಲ್ಲಿ, ಹಾಸನದ ಶ್ರವಣಬೆಳಗೊಳ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ಹಾಸನದ ಅರಕಲಗೂಡು, ಚಿಕ್ಕಬಳ್ಳಾಪುರದ ಚಿಂತಾಮಣಿ, ಮಂಡ್ಯ ಜಿಲ್ಲೆಯ ನಾಗಮಂಗಲ, ಕೋಲಾರದ ಕೆಲವೆಡೆ ಭಾನುವಾರ ತಲಾ 1 ಸೆಮೀನಷ್ಟು ಮಳೆಯಾಗಿದೆ. ಉತ್ತರ ಒಳಕರ್ನಾಟಕದ ಕೆಲವು ಭಾಗಗಳಲ್ಲಿ ಉಷ್ಠಾಂಶ ಇಳಿಕೆ ಆಗಿದೆ. ಕರಾವಳಿ ಕರ್ನಾಟಕ , ದಕ್ಷಿಣ ಒಳ ಕರ್ನಾಟಕದ ಮೇಲೆ, ಉತ್ತರ ಒಳ ಕರ್ನಾಟಕದ ಹೆಚ್ಚಿನ ಸ್ಥಳಗಳಲ್ಲಿ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ. ಭಾನುವಾರ ರಾಜ್ಯದಲ್ಲೇ ಗರಿಷ್ಠ ಉಷ್ಣಾಂಶ ಕಾರವಾರದಲ್ಲಿ 36.6 ಡಿಗ್ರಿ ಸೆಲ್ಸಿಯಸ್ ಮತ್ತು ಕಡಿಮೆ ಉಷ್ಣಾಂಶ 17.0 ಡಿಗ್ರಿ ಸೆಲ್ಸಿಯಸ್ ಧಾರವಾಡದಲ್ಲಿ ದಾಖಲಾಗಿದೆ.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಾಮರಾಜನಗರ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಲಘು ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳಕರ್ನಾಟಕ, ಕರಾವಳಿ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆ ಮತ್ತು ದಕ್ಷಿಣ ಒಳನಾಡು ಮತ್ತು ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣ ಹವಾಮಾನ ಇರಲಿದೆ. ಮುಂದಿನ 24 ಗಂಟೆಗಳಲ್ಲಿ ರಾಜ್ಯದಲ್ಲಿ ಒಣಹವೆ ಇರಲಿದ್ದು, ಹವಾಮಾನ ಇಲಾಖೆಯು ಮೀನುಗಾರರಿಗೆ ಯಾವುದೇ ಮುನ್ನೆಚರಿಕೆ ನೀಡಿಲ್ಲ.