ನವದೆಹಲಿ: ಭಾರತದಲ್ಲಿ ಪ್ರತಿ ಗಂಟೆಗೆ 52 ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, 20 ಮಂದಿ ಅಸು ನೀಗುತ್ತಿದ್ದಾರೆ. ರಸ್ತೆ ಸಾರಿಗೆ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಪ್ರತಿ ವರ್ಷ ರಸ್ತೆ ಅಪಘಾತಗಳ ಸಂಖ್ಯೆ ಮತ್ತು ಸಾವಿನ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಅಪಘಾತಗಳಲ್ಲಿ ಜೀವ ಕಳೆದುಕೊಳ್ಳುವ ಮೊದಲ 20 ದೇಶಗಳ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ.
ಇತ್ತೀಚೆಗೆ ಡೆಹ್ರಾಡೂನ್ ಕಾರು ಅಪಘಾತದಲ್ಲಿ 6 ಮಂದಿ ಯುವಕರು ಸಾವನ್ನಪ್ಪಿದ ಘಟನೆ ಮತ್ತು ಇಂದು ಉತ್ತರ ಪ್ರದೇಶದಲ್ಲಿ ಸಂಭವಿಸಿದ ಅಪಘಾತದಲ್ಲಿ 7 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ದುರಂತಗಳು ರಸ್ತೆ ಅಪಘಾತಗಳನ್ನು ನಿಯಂತ್ರಿಸುವ ತುರ್ತು ಕ್ರಮವನ್ನು ಪ್ರತಿಪಾದಿಸುತ್ತಿವೆ. ರಸ್ತೆ ಅಪಘಾತಗಳಲ್ಲಿ ಮೃತಪಡುವವರಲ್ಲಿ ಶೇ. 50 ಕ್ಕಿಂತ ಹೆಚ್ಚು ಮಂದಿ 18 ರಿಂದ 35 ವರ್ಷ ವಯಸ್ಸಿನವರಾಗಿದ್ದಾರೆ. ಅಪಘಾತಗಳಿಗೆ ಅತಿವೇಗವೇ ಮುಖ್ಯ ಕಾರಣ ಎಂಬುದನ್ನು ಈ ಅಧ್ಯಯನ ತೋರಿಸಿಕೊಟ್ಟಿದೆ.
ಇತ್ತೀಚಿನ ಅಂಕಿಅಂಶಗಳ ಪ್ರಕಾರ ಸುಮಾರು ಶೇ.70 ರಷ್ಟು ಅಪಘಾತಗಳು ಅತಿವೇಗದ ಚಾಲನೆಯಿಂದ ಸಂಭವಿಸುತ್ತಿವೆ. ಇದಕ್ಕಿಂತಲೂ ಮುಖ್ಯವಾಗಿ ದೇಶಕ್ಕೆ ಆಸ್ತಿಯಾಗಿರುವ 18 ರಿಂದ 45 ವರ್ಷದೊಳಗಿನ ಯುವಕರು ಹೆಚ್ಚು ಹೆಚ್ಚು ಬಲಿಯಾಗುತ್ತಿದ್ದಾರೆ. ಈ ರೀತಿ ಅಪಘಾತಗಳಿಗೆ ಬಲಿಯಾಗುವವರಲ್ಲಿ ಹೆಚ್ಚಿನವರು ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳು ಎನ್ನುವುದು ಮತ್ತಷ್ಟು ಆತಂಕ ಮೂಡಿಸಿದೆ.
ಅಪಘಾತಗಳನ್ನು ನಿಯಂತ್ರಿಸಲು ಮೊದಲನೆಯದಾಗಿ ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕಿದೆ. ಎರಡನೆಯದಾಗಿ ಮೂಲಸೌಕರ್ಯ, ನೇರವಲ್ಲದ ಬಾಗಿದ ರಸ್ತೆಗಳು, ತಡೆಗೋಡೆಗಳು ಅಪಘಾತಗಳಿಗೆ ಕೊಡುಗೆ ನೀಡುತ್ತಿವೆ. ಅಧ್ಯಯನಕ್ಕೆ ಅಪಘಾತದ ನಂತರದ ಪರಿಸ್ಥಿತಿಯೂ ಅಷ್ಟೇ ಮುಖ್ಯ. ಎಲ್ಲಿ ಮತ್ತು ಹೇಗೆ ಅಪಘಾತಗಳು ಸಂಭವಿಸುತ್ತವೆ ಎಂಬುದನ್ನು ವೈಜ್ಞಾನಿಕವಾಗಿ ಅಧ್ಯಯನ ನಡೆಸಿದರೆ ಅಪಘಾತಗಳನ್ನು ನಿಯಂತ್ರಿಸಲು ಸಾಧ್ಯವಾದೀತು.