ಬೆಳಗಾವಿ: ಕುಂದಾ ನಗರಿ ಬೆಳಗಾವಿಯ ವಡ್ಡರವಾಡಿಯಲ್ಲಿ ವೇಶ್ಯಾವಾಟಿಕೆ ಆರೋಪ ಹೊರಿಸಿ ಮಹಿಳೆಯೊಬ್ಬರ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿ ಸಾರ್ವಜನಿಕರ ಎದುರಿನಲ್ಲಿ ಆಕೆಯ ಬಟ್ಟೆ ಹರಿದು ಅವಮಾನಿಸಿರುವ ಘಟನೆ ನಡೆದಿದೆ. ನೆರೆ ಮನೆಯವರೇ ಹಲ್ಲೆ ಮಾಡಿದ್ದು, ಈ ಕೃತ್ಯದ ವಿಡಿಯೋ ಮೊಬೈಲ್ ಫೋನ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ. ಆರಂಭದಲ್ಲಿ ದೂರು ಸ್ವೀಕರಿಸಲು ಹಿಂದೇಟು ಹಾಕಿದ್ದ ಪೊಲೀಸರು ನಂತರ ದೂರು ದಾಖಲಿಸಿಕೊಂಡಿದ್ದಾರೆ. ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಡ್ಡರವಾಡಿಯ ಮನೆಯೊಂದರಲ್ಲಿ ನಾಲ್ವರು ವಯಸ್ಕರು ನಾಲ್ಕು ವರ್ಷಗಳಿಂದ ವಾಸವಾಗಿದ್ದಾರೆ. ಪಕ್ಕದಲ್ಲಿ ವಾಸವಿರುವ ಮತ್ತೊಂದು ಕುಟುಂಬದವರು, ಮಹಿಳೆಯ ವಿರುದ್ಧ ವೇಶ್ಯಾವಾಟಿಕೆಯ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಮನೆಗೆ ನುಗ್ಗಿ ತಾಯಿ ಮತ್ತು ಅಪ್ರಾಪ್ತ ವಯಸ್ಸಿನ ಮಗಳನ್ನು ಹೊರಗೆ ಎಳೆದು ಹಲ್ಲೆ ಮಾಡಿದ್ದಾರೆ.
ಸಂಬಂಧ ಪಡದವರು ಇವರ ಮನೆಗೆ ಬಂದು ಹೋಗುತ್ತಿರುತ್ತಾರೆ. ಈ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂದು ಆರೋಪಿಸಿ ನೆರೆ ಮನೆಯವರು ಜಗಳ ಆರಂಭಿಸಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿ ಮಹಿಳೆಯ ಬಟ್ಟೆ ಯನ್ನು ಹರಿದು ಕ್ರೌರ್ಯವನ್ನು ಮೆರೆಯಲಾಗಿದೆ. ಈ ಘಟನೆಯ ದೃಶ್ಯ ಮೊಬೈಲ್ ಫೋನ್ನಲ್ಲಿ ದಾಖಲಾಗಿದೆ.
ಸಮೀಪದ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಹಲ್ಲೆಗೊಳಗಾದ ಮಹಿಳೆಯು ದೂರು ನೀಡಲು ಹೋಗಿದ್ದರೂ ಪೊಲೀಸರು ದೂರು ಸ್ವೀಕರಿಸಿಲ್ಲ. ಎರಡು ದಿನಗಳ ನಂತರ ಮಹಿಳೆಯು ಜೀವ ಭಯ ಇದೆ, ರಕ್ಷಣೆ ಕೊಡಿ ಎಂದು ಮನವಿ ಬೆಳಗಾವಿ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಆಯುಕ್ತರ ಸೂಚನೆ ಮೇರೆಗೆ ಶುಕ್ರವಾರ ರಾತ್ರಿ ಮೂವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಬಿಎನ್ಎಸ್ ಕಾಯ್ದೆಯ ಸೆಕ್ಷನ್ 115(2), 3(5), 331, 352 ಹಾಗೂ 74 ರ ಅಡಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕಳೆದ ವರ್ಷ ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಿದ ಘಟನೆ ಮಾಸುವ ಮುನ್ನವೇ ಮತ್ತೊಂದು ಅಮಾನವೀಯ ಘಟನೆ ನಡೆದಿದೆ.