ಸೈಬರ್‌ ವಂಚನೆಗಾಗಿ ವಿದ್ಯಾರ್ಥಿಗಳಿಂದ ಬ್ಯಾಂಕ್‌ ಖಾತೆ ಆರಂಭಿಸುತ್ತಿದ್ದ  ಜಾಲ ಪತ್ತೆ

Most read

ಬೆಂಗಳೂರು: ಸೈಬರ್ ಇನ್ವೆಸ್ಟ್‌ಮೆಂಟ್ ಮೂಲಕ ವಂಚನೆ ನಡೆಸಿ ಹಣ ಸಂಪಾದಿಸಲು ವಿದ್ಯಾರ್ಥಿಗಳಿಂದ ಬ್ಯಾಂಕ್ ಖಾತೆಗಳನ್ನು ಆರಂಭಿಸುತ್ತಿದ್ದ ಬೃಹತ್ ಜಾಲವನ್ನು ಬೆಂಗಳೂರಿನ ಆಗ್ನೇಯ ವಿಭಾಗದ ಸಿಇಎನ್ ಪೊಲೀಸರು ಭೇದಿಸಿದ್ದಾರೆ. ಈ ವಂಚನೆಯ ಜಾಲದ ಪ್ರಮುಖ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ರಾಜಸ್ಥಾನದ ಜೋದ್‌ಪುರದ ನಿವಾಸಿಗಳಾದ ಅಭಯ್, ಅರವಿಂದ್ ಹಾಗೂ ಬೊಮ್ಮನಹಳ್ಳಿಯ ಸವಾಯ್ ಸಿಂಗ್ ಮತ್ತು ಸವಾಯ್ ವಿಷ್ಣು ಅವರನ್ನು ಬಂಧಿಸಲಾಗಿದೆ  ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ತಿಳಿಸಿದ್ದಾರೆ.

ಅಭಯ್ ಮತ್ತು ಅರವಿಂದ್  ಈ ವಂಚನೆಯ ಪ್ರಮುಖ ಆರೋಪಿಗಳು. ರಾಜಸ್ತಾನದ ಉದಯಪುರದಲ್ಲಿ ಇವರು ವಾಸಿಸುತ್ತಿದ್ದ ಬಾಡಿಗೆ ಮನೆಯಿಂದ ವಿವಿಧ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ 34 ಬ್ಯಾಂಕ್ ಪಾಸ್‌ಬುಕ್‌ಗಳು, 106 ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳು, 39 ಬ್ಯಾಂಕ್ ಚೆಕ್ ಬುಕ್‌ಗಳು 19 ಮೊಬೈಲ್, 2 ಲ್ಯಾಪ್‌ಟಾಪ್ ಹಾಗೂ 20 ಸಿಮ್ ಕಾರ್ಡ್‌ಗಳು ಹಾಗೂ75 ಸಾವಿರ ನಗದು ಹಣವನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಈ ಖಾತೆಗಳೆಲ್ಲವೂ ವಿದ್ಯಾರ್ಥಿಗಳಿಂದ ಬಲವಂತವಾಗಿ ತೆರಸಲಾಗಿತ್ತು. ಈ ರೀತಿ ವಿದ್ಯಾರ್ಥಿಗಳಿಂದ ತೆರೆಸಿದ ಬ್ಯಾಂಕ್ ಖಾತೆಗಳನ್ನು ಉಪಯೋಗಿಸಿಕೊಂಡು, ಸೈಬರ್ ಇನ್ವೆಸ್ಟಮೆಂಟ್ ಮೂಲಕ ವಂಚಿಸಿ ಹಣ ಸಂಪಾದನೆ ಮಾಡುತ್ತಿದ್ದರು. ನಂತರ ವಿದ್ಯಾರ್ಥಿಗಳ ಖಾತೆಗೆ ಜಮಾ ಆಗುತ್ತಿದ್ದ ಹಣವನ್ನು ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಳ್ಳುತ್ತಿದ್ದರು.
ವಿದ್ಯಾರ್ಥಿಗಳ ಖಾತೆಗಳಿಂದ ಕ್ರಿಪ್ಟೋ ಕರೆನ್ಸಿ ಖರೀದಿಸಿ ಡಿಜಿಟಲ್ ವಾಲೆಟ್‌ಗಳಿಗೆ ವರ್ಗಾವಣೆ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ. ಈ ರೀತಿ ವರ್ಗಾವಣೆ ಮಾಡಿದ್ದರಿಂದ, ಆರೋಪಿಗಳಿಗೆ ಹೆಚ್ಚಿನ ಲಾಭಾಂಶ ದೊರೆತ್ತಿರುತ್ತದೆ. ಈ ಜಾಲದಲ್ಲಿ ಸಕ್ರಿಯವಾಗಿದ್ದ ಇತರೆ ಆರೋಪಿಗಳ ಬಂಧನಕ್ಕೆ ಶೋಧ ನಡೆಸಲಾಗಿದೆ.
ಕಳೆದ ತಿಂಗಳು ಆಗ್ನೇಯ ವಿಭಾಗದ ಸಿಇಎನ್ ಪೊಲೀಸರಿಗೆ ಅಪರಿಚಿತ ವ್ಯಕ್ತಿಗಳು ಸಂಪರ್ಕಿಸಿ ಅರೆಕಾಲಿಕ ಉದ್ಯೋಗ ಕೊಡಿಸುವುದಾಗಿ ನಂಬಿಸಿ, 12,42,250 ರೂ. ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡಿರುತ್ತಾರೆ ಎಂದು ಸಂತ್ರಸ್ತರು ದೂರು ಸಲ್ಲಿಸಿದ್ದರು. ವಿಚಾರಣೆ ನಡೆಸಿದಾಗ ಈ ಬ್ಯಾಂಕ್‌ ಖಾತೆ ಓರ್ವ ವಿದ್ಯಾರ್ಥಿ ಹೆಸರಿನಲ್ಲಿತ್ತು. ಆತನನ್ನು ವಿಚಾರಣೆ ಮಾಡಿದಾಗ ರಾಜಸ್ತಾನ ಮೂಲದ ವ್ಯಕ್ತಿಗಳು, ಕರೆನ್ಸಿ ಎಕ್ಸ್‌ ಚೇಂಜ್‌  ಮಾಡಲು ಬ್ಯಾಂಕ್ ಖಾತೆಗಳ ಆವಶ್ಯಕತೆಯಿದ್ದು, ನಿಮ್ಮ ಹೆಸರಿನಲ್ಲಿ  ಬ್ಯಾಂಕ್ ಖಾತೆಯನ್ನು ಮಾಡಿಸಿಕೊಟ್ಟರೆ ಲಾಭಾಂಶವನ್ನು ಕೊಡುವುದಾಗಿ ಅಮಿಷವೊಡ್ಡಿದ್ದರು. ಇದರಿಂದ ವಿದ್ಯಾರ್ಥಿ  ಬ್ಯಾಂಕ್ ಖಾತೆಯನ್ನು ಆರಂಭಿಸಿದ್ದ.

ಇದೇ ರೀತಿ ಹಲವಾರು ವಿದ್ಯಾರ್ಥಿಗಳಿಂದ ಬ್ಯಾಂಕ್ ಖಾತೆಗಳನ್ನು ತೆರೆಸಿ ಅವರ ಬ್ಯಾಂಕ್ ಖಾತೆಯ ಪಾಸ್‌ಬುಕ್, ಚೆಕ್‌ಬುಕ್, ಎಟಿಎಂ ಕಾರ್ಡ್ ಹಾಗೂ ಖಾತೆ ತೆರೆಯಲು ಬಳಸಿದ ಮೊಬೈಲ್ ಸಿಮ್ ಕಾರ್ಡ್ ಗಳನ್ನು ಆರೋಪಿಗಳು ಪಡೆದುಕೊಂಡಿದ್ದರು. ತನಿಖಾಧಿಕಾರಿಗಳ ತಂಡ ರಾಜಸ್ತಾನಕ್ಕೆ ತೆರಳಿ ಬ್ಯಾಂಕ್ ಖಾತೆಯನ್ನು ತೆರೆಸಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ ಬೆಂಗಳೂರಿಗೆ ಕರೆ ತಂದು ವಿಚಾರಣೆ ನಡೆಸಿದ್ದರು. ಆರೋಪಿಗಳು ನೀಡಿದ ಮಾಹಿತಿಯನ್ನು ಆಧರಿಸಿ ಇನ್ನಿಬ್ಬರು ಆರೋಪಿಗಳಾದ ಸವಾಯ್ ಸಿಂಗ್ ಹಾಗೂ ಸವಾಯ್ ವಿಷ್ಣು ನನ್ನು ಬೊಮ್ಮನಹಳ್ಳಿಯ ಪದ್ಮಾವತಿ ಪಿ.ಜಿ ಹಾಸ್ಟೆಲ್ ನಲ್ಲಿ ಬಂಧಿಸಲಾಗಿತ್ತು. ವಿಧ್ಯಾರ್ಥಿಗಳಿಂದ ಇನ್ನೂ ಹಲವಾರು ಬ್ಯಾಂಕ್ ಖಾತೆಗಳನ್ನು ಆರಂಭಿಸಲೆಂದೇ ಬೆಂಗಳೂರಿಗೆ ಬಂದಿರುವುದಾಗಿ ಬಾಯಿ ಬಿಟ್ಟಿದ್ದಾರೆ.

More articles

Latest article