ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಚಿತ್ರನಟ ದರ್ಶನ್ ತೂಗುದೀಪ ಅವರಿಗೆ ಹೈಕೋರ್ಟ್ ನೀಡಿರುವ ಮಧ್ಯಂತರ ಜಾಮೀನು ಆದೇಶ ರದ್ದುಪಡಿಸುವಂತೆ ಕೋರಿ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಈ ಹತ್ಯೆಯ ಪ್ರಕರಣದಲ್ಲಿ ದರ್ಶನ್ ಅವರು ಬಳ್ಳಾರಿ ಜೈಲಿನಲ್ಲಿ ಬಂಧಿಯಾಗಿದ್ದರು. ಆಗ ಅವರಿಗೆ ಬೆನ್ನುನೋವು ಕಾಣಿಸಿಕೊಂಡಿತ್ತು. ಚಿಕಿತ್ಸೆ ಪಡೆಯಲು ಜಾಮೀನು ನೀಡುವಂತೆ ಕೋರಿ ಹೈ ಕೋರ್ಟ್ ಮೊರೆ ಹೋಗಿದ್ದರು. ಅವರ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ ಆರು ವಾರಗಳ ಷರತ್ತುಬದ್ಧ ಜಾಮೀನು ನೀಡಿದೆ. ಬಳ್ಳಾರಿ ಜೈಲಿನಿಂದ ಬಿಡುಗಡೆಯಾದ ನಂತರ ದರ್ಶನ್ ಕೆಂಗೇರಿಯ ಬಿಜಿಎಸ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ನಡುವೆ ಪ್ರಕರಣದ ತನಿಖಾಧಿಕಾರಿಗಳು, ದರ್ಶನ್ ಜಾಮೀನು ರದ್ದು ಕೋರಿ ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲು ಗೃಹ ಇಲಾಖೆಗೆ ಮನವಿ ಸಲ್ಲಿಸಿದ್ದರು. ಇದೀಗ ಗೃಹ ಇಲಾಖೆ ಅನುಮತಿ ನೀಡಿದೆ. ಗೃಹ ಇಲಾಖೆ ನೀಡಿರುವ ಅನುಮತಿ ವಿಚಾರವನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಸ್ಪಷ್ಟಪಡಿಸಿದ್ದಾರೆ. ಶೀಘ್ರದಲ್ಲೇ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು. ಅದಕ್ಕೆ ಪೂರಕವಾಗಿ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.