ಬೆಂಗಳೂರು: ಯುವ ಜನಾಂಗ ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂಬ ಹೇಳಿಕೆಯನ್ನು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ.
ಅವರು ಈ ಹಿಂದೆಯೂ ಯುವಕರು ವಾರಕ್ಕೆ 70 ಗಂಟೆ ದುಡಿಯಬೇಕು ಎಂದು ಹೇಳುವ ಮೂಲಕ ತೀವ್ರ ವಿವಾದಕ್ಕೆ ಒಳಗಾಗಿದ್ದರು. ಸಿಎನ್ಬಿಸಿ ಗ್ಲೋಬಲ್ ಲೀಡರ್ ಶಿಫ್ ಸಮ್ಮಿಟ್‌ನಲ್ಲಿ ಮಾತನಾಡಿರುವ ಅವರು ಮತ್ತೆ ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ.
1986 ರಲ್ಲಿ ಭಾರತದಲ್ಲಿ ಐಟಿ ಹಾಗೂ ಇತರ ಕೆಲವು ವಲಯಗಳಲ್ಲಿ ವಾರದ 6 ದಿನದ ಬದಲು 5 ದಿನ ಕೆಲಸ ಮಾಡುವ ನೀತಿ ತರಲಾಯಿತು. ಇದು ನನಗೆ ಶಾಕ್ ನೀಡಿತ್ತು ಎಂದು ಸ್ಮರಿಸಿದ್ದಾರೆ. ದಯವಿಟ್ಟು ಕ್ಷಮಿಸಿ. ಕೆಲಸದ ಅವಧಿ ಬಗ್ಗೆ ನಾನು ಸತ್ತರೂ ನನ್ನ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳುವುದಿಲ್ಲ. ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಮತ್ತೊಮ್ಮೆ ಪ್ರತಿಪಾದಿಸುತ್ಥೇನೆ ಎಂದಿದ್ದಾರೆ. ಕಠಿಣ ಪರಿಶ್ರಮವೇ ದೇಶದ ಅಭಿವೃದ್ಧಿಗೆ ಮೂಲ ಪ್ರೇರಣೆ. ಪ್ರಧಾನಿ ಮೋದಿ ಅವರು ವಾರಕ್ಕೆ 100 ಗಂಟೆವರೆಗೆ ಕೆಲಸ ಮಾಡುತ್ತಾರೆ. ಅವರ ಹಾಗೆಯೇ ಯುವಕರು ವಾರಕ್ಕೆ ಕನಿಷ್ಠ 70 ತಾಸಾದರೂ ಕೆಲಸ ಮಾಡಬೇಕು ಎಂದಿದ್ದಾರೆ.
ನಾನು ನನ್ನ ವೃತ್ತಿ ಜೀವನದ ಆರಂಭದ ದಿನಗಳಲ್ಲಿ ಪ್ರತಿದಿನ 14 ಗಂಟೆ ಕೆಲಸ ಮಾಡುತ್ತಿದ್ದೆ. ಬೆಳಿಗ್ಗೆ 6.30 ಕ್ಕೆ ಕಚೇರಿಗೆ ಹೋಗಿ ರಾತ್ರಿ 8.30 ಕ್ಕೆ ಮನೆಗೆ ಹಿಂತಿರುಗುತ್ತಿದ್ದೆ. ಕಠಿಣ ಪರಿಶ್ರಮವು ನಮ್ಮ ಸಂಸ್ಕೃತಿಯಲ್ಲೇ ಇದೆ ಎಂದು ಹೇಳಿದ್ದಾರೆ. ಜಪಾನ್, ಜರ್ಮನಿ ದೇಶದ ಜನ ಕಠಿಣ ಪರಿಶ್ರಮದಿಂದ ದೇಶ ಕಟ್ಟಿದ್ದಾರೆ. ಪರಿಶ್ರಮಕ್ಕೆ ಪರ್ಯಾಯ ಯಾವುದೂ ಇಲ್ಲ. ಪ್ರತಿಭಾವಂತರು ದಿನಕ್ಕೆ ಕನಿಷ್ಠ 10 ಗಂಟೆ ಕೆಲಸ ಮಾಡಲೇಬೇಕು. ಆಗ ನಮ್ಮ ದೇಶ ಸಾಕಷ್ಟು ಅಭಿವೃದ್ಧಿ ಹೊಂದುತ್ತದೆ ಎಂದು ಪ್ರತಿಪಾದಿಸಿದ್ದಾರೆ.