ಬೆಂಗಳೂರು: ಭೂಸ್ವಾದೀನ ಪ್ರಕ್ರಿಯೆ ಚುರುಕುಗೊಳಿಸಿರುವ ಬಿಡಿಎ ಅಧಿಕಾರಿಗಳು, ನಾಗರಭಾವಿ 1ನೇ ಹಂತ ಬಡಾವಣೆಯಲ್ಲಿ ನಿರ್ಮಾಣವಾಗಿದ್ದ ಅನಧಿಕೃತ ಶೆಡ್, ಗ್ಯಾರೇಜ್, ಅಂಗಡಿ ಮಳಿಗೆಗಳನ್ನು ತೆರವುಗೊಳಿಸಿ ಸುಮಾರು ರೂ.60 ಕೋಟಿ ಬೆಲೆಬಾಳುವ ಸ್ವತ್ತನ್ನು ವಶಕ್ಕೆ ಪಡೆದಿದ್ದಾರೆ. ಜೆಸಿಬಿಗಳ ಜತೆಯಲ್ಲೇ ಸ್ಥಳಕ್ಕೆ ಆಗಮಿಸಿದ ಬಿಡಿಎ ಅಧಿಕಾರಿಗಳು, 26 ಗುಂಟೆ ಜಮೀನಿನಲ್ಲಿ ನಿರ್ಮಾಣವಾಗಿದ್ದ ಅನಧಿಕೃತ ಶೆಡ್ ಗಳು, ಗ್ಯಾರೇಜ್ ಗಳು ಮತ್ತು ಅಂಗಡಿ ಮಳಿಗೆಗಳನ್ನು ತೆರವುಗೊಳಿಸಿದರು.
ಈ ಕಾರ್ಯಾಚರಣೆ ಕುರಿತು ಪ್ರತಿಕ್ರಿಯಿಸಿದ ಬಿಡಿಎ ಅಧಿಕಾರಿಯೊಬ್ಬರು, ಯಶವಂತಪುರ ಹೋಬಳಿ ನಾಗರಭಾವಿ ಗ್ರಾಮದ ಸರ್ವೆ ನಂ.74 ರಲ್ಲಿನ 9 ಎಕರೆ 13 ಗುಂಟೆ ಜಮೀನನ್ನು ನಾಗರಭಾವಿ 1ನೇ ಹಂತ ಬಡಾವಣೆ ರಚನೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು 1985ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಿ ಭೂಸ್ವಾಧೀನ ಪಡಿಸಲಾಗಿತ್ತು. ನಂತರ ಸರ್ವೆ ನಂಬರಿನ ಜಮೀನಿನ ಮೇಲೆ ಭೂಮಾಲೀಕರು ಕಾನೂನು ಹೋರಾಟ ಕೈಗೊಂಡರು. ಆದರೆ, ದಾವೆಗಳು ಈಗ ಪ್ರಾಧಿಕಾರದ ಪರವಾಗಿ ಇತ್ಯರ್ಥವಾಗಿರುವ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆ ನಡೆಸಲಾಯಿತು ಎಂದರು.
ಪ್ರಾಧಿಕಾರವು ನಾಗರಭಾವಿ 1ನೇ ಹಂತ ಬಡಾವಣೆಯ ನಾಗರಭಾವಿ ಗ್ರಾಮದ ಸರ್ವೆ ನಂ.78 ರಲ್ಲಿನ ಅಧಿಸೂಚಿತ ಜಮೀನಿನಲ್ಲಿ ಈ ಹಿಂದೆ ರಸ್ತೆ ನಿರ್ಮಾಣಕ್ಕೆ ಉಪಯೋಗಿಸಿಕೊಂಡಿರುವ ಪ್ರದೇಶ ಹಾಗೂ ಪ್ರಾಧಿಕಾರದ ಭೂಸ್ವಾಧೀನ ಶಾಖೆಯ ಭೂಮಾಪಕರೊಂದಿಗೆ ಜಂಟಿ ಸರ್ವೆ ಕಾರ್ಯ ಕೈಗೊಂಡು ಕೈಬಿಟ್ಟಿರುವ 35 ಗುಂಟೆ ಜಮೀನನ್ನು ಹೊರತುಪಡಿಸಿ ಉಳಿದ ಜಮೀನಿನ ಪೈಕಿ ಒಟ್ಟು 1ಎಕರೆ 26 ಗುಂಟೆ ಜಮೀನಿನಲ್ಲಿ ನಿರ್ಮಾಣವಾಗಿದ್ದ ಅನಧಿಕೃತ ಶೆಡ್ ಗಳು, ಗ್ಯಾರೇಜ್ ಗಳು ಮತ್ತು ಅಂಗಡಿ ಮಳಿಗೆಗಳು ತೆರವುಗೊಳಿಸಿದರು.
ಇಂದು ಸುಮಾರು 60 ಕೋಟಿ ಬೆಲೆಬಾಳುವ ಸ್ವತ್ತನ್ನು ವಶಕ್ಕೆ ಪಡೆಯಲಾಗಿದೆ. ಬೇಲಿತಂತಿ ಮತ್ತು ಬಿಡಿಎ ನಾಮಪಲಕಗಳನ್ನು ಅಳವಡಿಸಿ ಪ್ರಾಧಿಕಾರದ ವಶಕ್ಕೆ ಪಡೆಯಲಾಗಿದೆ.