ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಿದ ಲೋಕಾಯುಕ್ತ

Most read

ಬೆಂಗಳೂರು: ಕರ್ನಾಟಕದ ವಿವಿಧ ಭಾಗಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂಬೆಳಿಗ್ಗೆ ದಾಳಿ ನಡೆಸುವ ಮೂಲಕ ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ. ಬೀದರ್, ಮೈಸೂರು, ಧಾರವಾಡ, ಬೆಳಗಾವಿ ಸೇರಿದಂತೆ ರಾಜ್ಯಾದ್ಯಂತ ಹಲವು ಕಡೆ ವಿವಿಧ ಇಲಾಖೆಗಳ ಅಧಿಕಾರಿಗಳ ನಿವಾಸಗಳ ಮೇಲೆ ದಾಳಿ ನಡೆದಿದೆ. ಲೋಕಾಯುಕ್ತ ತಂಡಗಳು ಅಕ್ರಮ ಆಸ್ತಿ, ಚಿನ್ನಾಭರಣ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.


ಅಧಿಕಾರಿಗಳ ನಿವಾಸಗಳಲ್ಲಿ ಪತ್ತೆಯಾಗಿರುವ ಚಿನ್ನಭರಣ, ಐಷಾರಾಮಿ ಮನೆ, ಬೆಲೆ ಬಾಳುವ ಕಾರುಗಳು, ತೋಟ, ಜಮೀನುಗಳ ಆಸ್ತಿಗಳ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಬೀದರ್‌ನಲ್ಲಿ ಬೀದರ್ ಜಿಲ್ಲಾ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕ ರವೀಂದ್ರಕುಮಾರ್ ರೊಟ್ಟಿ ಅವರ ನಿವಾಸದ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಇವರ ಬೀದರ್ ಹಾಗೂ ಬೆಂಗಳೂರು ನಿವಾಸಗಳ ಮೇಲೆ ದಾಳಿ ಮಾಡಲಾಗಿದೆ. ಬೀದರ್‌ನ ನೌಬಾದ್‌ನಲ್ಲಿರುವ ಕಚೇರಿ ಮತ್ತು ಗುಂಪಾ ನಿವಾಸದ ಮೇಲೂ ದಾಳಿ ನಡೆದಿದ್ದು ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.

ಲೋಕಾಯುಕ್ತ ಡಿವೈಎಸ್ಪಿ ಹನುಮಂತ ನೇತೃತ್ವದಲ್ಲಿ ದಾಳಿ ಮುಂದುವರೆದಿದೆ.
ಮೈಸೂರು ಮಹಾನಗರ ಪಾಲಿಕೆಯ ವಲಯ ಸಹಾಯಕ ಆಯುಕ್ತರಾಗಿರುವ ನಾಗೇಶ್ ಅವರ ಕಚೇರಿ, ಮನೆ, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿರುವ ತೋಟದ ಮನೆ ಮೇಲೆ ದಾಳಿ ಮಾಡಲಾಗಿದೆ. ಮೈಸೂರು ಲೋಕಾಯುಕ್ತ ಎಸ್ಪಿ ಟಿ.ಜೆ.ಉದೇಶ್ ಮಾರ್ಗದರ್ಶನದಲ್ಲಿ ದಾಳಿ ನಡೆಸಿ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಈ ಹಿಂದೆ ನಾಗೇಶ್ ಚನ್ನಪಟ್ಟಣ ನಗರಸಭೆ ಆಯುಕ್ತ, ಶ್ರೀರಂಗಪಟ್ಟಣ ತಹಸಿಲ್ದಾರ್ ಆಗಿ ಕರ್ತವ್ಯ ನಿರ್ವಹಿಸಿದ್ದರು.


ಧಾರವಾಡದ ಕೆಐಎಡಿಬಿ ಎಇಇ ಗೋವಿಂದ ಭಜಂತ್ರಿ ಮನೆ ಮೇಲೂ ಲೋಕಾಯುಕ್ತ ದಾಳಿ ನಡೆದಿದೆ. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಅಧಿಕಾರಿ ಕಮಲ ರಾಜ್, ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲ್ಲೂಕಿನ ಬೋರಗಾಂವ ಗ್ರಾಮ ಲೆಕ್ಕಾಧಿಕಾರಿ ವಿಠಲ್ ಡವಳೇಶ್ವರ ಮತ್ತು ಹಾವೇರಿ ಜಿಲ್ಲೆ ರಾಣೆಬೆನ್ನೂರು ಸಿಡಿಪಿಒ ಕಚೇರಿಯ ಪ್ರಥಮ ದರ್ಜೆ ಸಹಾಯಕ ರಾಜು ಎಂಬುವರ ಮನೆಗಳ ಮೇಲೂ ಲೋಕಾಯುಕ್ತ ದಾಳಿ ನಡೆಸಿದೆ.

More articles

Latest article