ಮೈಸೂರು: ಮುಡಾ ಪ್ರಕರಣ ಸಂಬಂಧ ಮೈಸೂರು ಲೋಕಾಯುಕ್ತ ಕಚೇರಿಯಲ್ಲಿ ನಡೆಯುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಚಾರಣೆ ಮುಕ್ತಾಯಗೊಂಡಿದೆ. ಅವರು ಮಧ್ಯಾಹ್ನ 12:07 ರ ಸುಮಾರಿಗೆ ಲೋಕಾಯುಕ್ತ ಕಚೇರಿಯಿಂದ ಹೊರಬಂದಿದ್ದಾರೆ. ಸಿದ್ದರಾಮಯ್ಯ ಅವರು ಸುಮಾರು ಒಂದು ಗಂಟೆ ಐವತ್ತು ನಿಮಿಷಗಳ ಕಾಲ ವಿಚಾರಣೆ ಎದುರಿಸಿದ್ದಾರೆ.
ಸಿದ್ದರಾಮಯ್ಯ ಅವರು ಲೋಕಾಯುಕ್ತ ಕಚೇರಿಯಿಂದ ನಗು ನಗುತ್ತಲೇ ಹೊರ ಬಂದಿದ್ದಾರೆ. ಅವರು ಮೈಸೂರಿನಿಂದ ನೇರವಾಗಿ ಚನ್ನಪಟ್ಟಣ ಕ್ಷೇತ್ರಕ್ಕೆ ಚುನಾವಣಾ ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ. ಪಕ್ಷದ ಅಭ್ಯರ್ಥಿ ಯೋಗೇಶ್ವರ್ ಪರವಾಗಿ ಪ್ರಚಾರ ನಡೆಸಲಿದ್ದಾರೆ.
ಲೋಕಾಯುಕ್ತ ಕಚೇರಿಯಲ್ಲಿ ಲೋಕಾಯುಕ್ತ ಎಸ್ ಪಿ ಉದೇಶ್ ಅವರ ನೇತೃತ್ವದ ತಂಡ ಮುಖ್ಯಮಂತ್ರಿಗಳ ವಿಚಾರಣೆ ನಡೆಸಿದರು. ಇಂದು ಬೆಳಿಗ್ಗೆ ಮುಖ್ಯಮಂತ್ರಿಗಳು 10.10 ಕ್ಕೆ ಲೋಕಾಯುಕ್ತ ಕಚೇರಿಗೆ ಆಗಮಿಸಿದರು. ವಿಚಾರಣೆಗೂ ಮುನ್ನ ಸಿಎಂ ಸಿದ್ದರಾಮಯ್ಯ ಅವರು ತನಿಖಾಧಿಕಾರಿಗಳೊಂದಿಗೆ ಅನೌಪಚಾರಿಕವಾಗಿ ಮಾತುಕತೆ ನಡೆಸಿದ್ದಾರೆ. ಯಾವುದೇ ಅಂಜಿಕೆ ಇಲ್ಲದೆ ನಿಮ್ಮ ಪ್ರಶ್ನೆಗಳನ್ನು ಕೇಳಬಹುದು. ನಿಮ್ಮ ಕೆಲಸ ನೀವು ಮಾಡಿ ಎಂದು ಹೇಳಿದ್ದಾರೆ. ಆಗ ಅಧಿಕಾರಿಗಳು ಎಲ್ಲರಂತೆ ನಿಮ್ಮ ವಿಚಾರಣೆ ಮಾಡುತ್ತೇವೆ ಸರ್ ಎಂದು ಉತ್ತರಿಸಿದ್ದಾರೆ. ನೀವು ಯಾವ ಪ್ರಶ್ನೆ ಬೇಕಾದರೂ ಕೇಳಿ. ನನಗೆ ಗೊತ್ತಿರುವ ವಿಷಯವನ್ನು ನಾನು ಹೇಳುತ್ತೇನೆ ಎಂದೂ ಹೇಳಿದ್ದರು.
ಮುಖ್ಯಮಂತ್ರಿಗಳು ಖಾಸಗಿ ಕಾರಿನಲ್ಲಿ ಇಂದು ಬೆಳಗ್ಗೆ ಬೆಂಗಳೂರಿನಿಂದ ಆಗಮಿಸಿದ್ದರು. ಇವರ ಜತೆಯಲ್ಲಿ ಕಾನೂನು ಸಲಹೆಗಾರ ಪೊನ್ನಣ್ಣ, ಹೆಚ್ಚುವರಿ ಕಾರ್ಯದರ್ಶಿ ಎಲ್ ಕೆ ಅತೀಕ್ ಅಹಮ್ಮದ್, ಸಚಿವ ಕೆ.ವೆಂಕಟೇಶ್ ಮೊದಲಾವರು ಇದ್ದರು.
ಲೋಕಾಯುಕ್ತ ಈಗಾಗಲೇ ಸಿದ್ದರಾಮಯ್ಯ ಅವರ ಪತ್ನಿ ಪತ್ನಿ ಪಾರ್ವತಿ, ಎ-3 ಪಾರ್ವತಿ ಅವರ ಸಹೋದರ ಮಲ್ಲಿಕಾರ್ಜುನ ಸ್ವಾಮಿ ಮತ್ತು ಭೂ ಮಾಲೀಕ ಎ-4 ದೇವರಾಜು ಅವರ ವಿಚಾರಣೆಯನ್ನು ಮುಗಿಸಿದೆ. ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎ-1 ಆರೋಪಿಯಾಗಿದ್ದಾರೆ.