ಬೆಂಗಳೂರು: ನಾಲ್ಕೈದು ದಿನಗಳ ಸತತ ರಜಾ ದಿನಗಳನ್ನು ಅನುಭವಿಸಿ ಹೊರ ಹೋಗಿದ್ದ ಎಲ್ಲರೂ ನಿನ್ನೆ ಸಂಜೆಯಿಂದಲೇ ಬೆಂಗಳೂರಿಗೆ ಹಿಂತಿರುಗುತ್ತಿದ್ದಾರೆ. ಮಧ್ಯರಾತ್ರಿ 2 ಗಂಟೆಯಿಂದಲೇ ಟ್ರಾಫಿಕ್ ಜಾಮ್ ಆರಂಭವಾಗಿತ್ತು. ಬೆಂಗಳೂರಿಗೆ ಸೇರುವ ಎಲ್ಲಾ ದಿಕ್ಕುಗಳಿಂದಲೂ ವಾಹನಗಳ ದಟ್ಟಣೆ ಮಿತಿ ಮೀರಿತ್ತು. ೨೦ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ತುಮಕೂರು ರಸ್ತೆಯಲ್ಲಿ ರಾತ್ರಿ 2 ಗಂಟೆಯಿಂದಲೇ ವಾಹನ ದಟ್ಟಣೆ ಆರಂಭವಾಗಿತ್ತು. ಮುನ್ನೆಚ್ಚರಿಕೆಯ ಕ್ರಮವಾಗಿ ಪೊಲೀಸರು ಕ್ರಮ ಕೈಗೊಂಡಿದ್ದರೂ ನಿಯಂತ್ರಣ ಕಷ್ಟ ಸಾಧ್ಯವಾಗಿತ್ತು.
ವಾಹನ ದಟ್ಟಣೆಯನ್ನು ತಪ್ಪಿಸಲು ನಾಗರೀಕರು ಬಸ್ಸು ಕಾರು ಬಿಟ್ಟು ಮೆಟ್ರೋ ನಿಲ್ದಾಣದತ್ತ ದೌಡಾಯಿಸುತ್ತಿದ್ದರು. ಹೀಗಾಗಿ ತುಮಕೂರು ರಸ್ತೆಯ ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ಸಂಕ್ಯೆ ವಿಪರೀತವಾಗಿತ್ತು.
ನಾಗಸಂದ್ರ ಮೆಟ್ರೋ ನಿಲ್ದಾಣದಿಂದ ಸಾಮಾನ್ಯ ದಿನಗಳಲ್ಲಿ ಬೆಳಿಗ್ಗೆ 6ರಿಂದ 11 ಗಂಟೆಯವರೆಗೆ ಸುಮಾರು 11,000 ಜನರು ದಿನನಿತ್ಯ ಪ್ರಯಾಣಿಸುತ್ತದ್ದು, ಇಂದು, ಸದರಿ ಸಮಯದಲ್ಲಿ 15,800 ಪ್ರಯಾಣಿಸಿದ್ದಾರೆ. ದೀರ್ಘ ರಜೆಯ ನಂತರ ಬಂದ ಪ್ರಯಾಣಿಕರ ಸರಂಜಾಮುಗಳನ್ನು ತ್ವರಿತವಾಗಿ ಪರಿಶೀಲಿಸಿ ಜನದಟ್ಟಣೆಯನ್ನು ಕಡಿಮೆಮಾಡಿ ಪ್ರಯಾಣಕ್ಕೆ ಅನೂಕೂಲ ಮಾಡಲಾಯಿತು ಎಂದು ನಮ್ಮ ಮೆಟ್ರೋ ಟ್ವೀಟ್ ಮೂಲಕ ತಿಳಿಸಿದೆ.
ತುಮಕೂರು ರಸ್ತೆಯ ವಿಸ್ತರಿತ ಮಾರ್ಗ ಸಿದ್ದವಾಗಿದ್ದರೂ ಉದ್ಘಾಟನೆ ನೆರವೇರದ ಕಾರಣ ನಮ್ಮ ಮೆಟ್ರೋ ಆರಂಭವಾಗಿಲ್ಲ. ಶೀಘ್ರವೇ ಮುಕ್ತಗೊಳಿಸುವಂತೆ ನಾಗರೀಕರು ವಿವಿಧ ಸಾಮಾಜಿಕ ಮಾಧ್ಯಮಗಳ ಮೂಲಕ ಒತ್ತಡ ಹೇರುತ್ತಿದ್ದಾರೆ. ಕೇಂದ್ರ ಸರ್ಕಾರ ಕಿವಿಗೊಡುವುದೇ ಕಾದು ನೋಡಬೇಕು?