ಬೆಂಗಳೂರಿನ ಜನರಿಗೆ ಬಿಬಿಎಂಪಿ ವತಿಯಿಂದ
ಪಟಾಕಿ ಸಿಡಿಸುವ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲು ಎಷ್ಟೇ ಜಾಗೃತಿ ಮೂಡಿಸಿದರೂ ಪಟಾಕಿ ಅವಘಡಗಳು ಸಂಭವಿಸುತ್ತಲೇ ಇದೆ. ಸದ್ಯ ವಿವಿದ ಕಣ್ಣಿನ ಆಸ್ಪತ್ರೆಗಳಿಗೆ ಎಂಟಕ್ಕೂ ಹೆಚ್ಚು ಮಕ್ಕಳು ಚಿಕಿತ್ಸೆಗೆ ದಾಖಲಾಗಿದ್ದಾರೆ.
ಎಂಟು ವರ್ಷದ ಬಾಲಕನೊಬ್ಬ ಪಟಾಕಿ ಸಿಡಿಸುವಾಗ ಕಿಡಿಯೊಂದು ಕಣ್ಣಿಗೆ ಬಿದ್ದು ಗಾಯಗೊಂಡಿದ್ದಾನೆ. ಬಾಲಕನನ್ನು ಶಂಕರ ಕಣ್ಣಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕ ದೃಷ್ಟಿ ಕಳೆದುಕೊಳ್ಳುವ ಆತಂಕವಿದೆ. ಚಿಕಿತ್ಸೆ ಮುಂದುವರಿಸಲಾಗಿದೆ, ಹೆಚ್ಚಿನ ಲ್ಯಾಬ್ ಫಲಿತಾಂಶಗಳಿಗೆ ಕಾಯುತ್ತಿರುವುದಾಗಿ ಅಲ್ಲಿನ ವೈದ್ಯರು ತಿಳಿಸಿದ್ದಾರೆ.
ಇನ್ನು ಪಟಾಕಿ ಸಿಡಿಸುತ್ತಿರುವುದನ್ನು ನೋಡುತ್ತಿದ್ದಾಗ ಕಿಡಿಯೊಂದು ಮೂರು ವರ್ಷದ ಹೆಣ್ಣು ಮಗುವಿನ ಕಣ್ಣಿಗೆ ಬಿದ್ದು ಕಣ್ಣಿನ ಕಾರ್ನಿಯಾಗೆ ಗಾಯವಾಗಿದೆ. ಇನ್ನೊಂದೆಡೆ ಹತ್ತು ವರ್ಷದ ಬಾಲಕನೊಬ್ಬ ಪಟಾಕಿ ಸಿಡಿಯಲಿಲ್ಲ ಎಂದು ಪರಿಶೀಲಿಸಲು ಹತ್ತಿರ ಹೋದಾಗ ಅದು ಸಿಡಿದು ಕಣ್ಣಿಗೆ ಗಾಯವಾಗಿದೆ. ಸದ್ಯ ಮಗುವಿಗೆ ಚಿಕಿತ್ಸೆಗೆ ನೀಡಲಾಗುತ್ತಿದೆ.
ರಾಜಾಜಿನಗರದ ನಾರಾಯಣ ನೇತ್ರಾಲಯದ ಶಾಖೆಯಲ್ಲಿ ಇಬ್ಬರು ಮಕ್ಕಳು ಹಾಗೂ ಬನ್ನೇರುಘಟ್ಟದಲ್ಲಿರುವ ಶಾಖೆಯಲ್ಲಿ ಓರ್ವ ಬಾಲಕ ಪಟಾಕಿ ಹಾನಿಗೆ ಹೊರ ರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಮಿಂಟೋದಲ್ಲಿ ಹಬ್ಬ ಆರಂಭವಾಗುವ ಮೊದಲೇ ಎರಡು ಪ್ರಕಣಗಳು ವರದಿಯಾಗಿದ್ದು, ಗುರುವಾರ ಸಂಜೆ 5.30ರ ಸುಮಾರಿಗೆ ಮತ್ತೊಂದು ಹೊಸ ವರದಿ ದಾಖಲಾಗಿದೆ. ಶಂಕರ ಆಸ್ಪತ್ರೆಯಲ್ಲಿ ಮೂವರು, ನಾರಾಯಣ ನೇತ್ರಾಲಯದಲ್ಲಿ ಮೂವರು ಹಾಗೂ ಮಿಂಟೋ ಆಸ್ಪತ್ರೆಯಲ್ಲಿ ಒಬ್ಬರು ಕಣ್ಣಿಗೆ ಗಂಭೀರ ಹಾನಿ ಮಾಡಿಕೊಂಡು ಚಿಕಿತ್ಸೆಗೆ ದಾಖಲಾಗಿದ್ದಾರೆ.
.
ಸಧ್ಯ ನಮಗೆ ಸಿಕ್ಕ ಅಂಕಿಅಂಶಗಳು ಇಷ್ಟಾಗಿದ್ದು ಅಧಿಕೃತವಾಗಿ ಎಷ್ಟು ಪ್ರಕರಣಗಳು ದಾಖಲಾಗಿವೆ ಎಂಬುದು ತಿಳಿದುಬಂದಿಲ್ಲ.