ದೇಶಕ್ಕಾಗಿ ಪ್ರಾಣ ಕೊಟ್ಟ ಇಂದಿರಾಗಾಂಧಿಯನ್ನು ನೆನೆಯದ ಪ್ರಧಾನಿ ಮೋದಿಯನ್ನು ಟೀಕಿಸಿದ ಖರ್ಗೆ

Most read

ಈ ದೇಶದ ಸಮಗ್ರತೆಗೆ ಹೋರಾಟ ಮಾಡಿದವರು ಸರ್ದಾರ್ ಪಟೇಲರು. ಇಡೀ ದೇಶಕ್ಕೆ ಆಗಸ್ಟ್ 15, 1947 ರಂದು ಸ್ವಾತಂತ್ರ್ಯ ಬಂದಿದೆ. ಆದರೆ ನಮ್ಮ ಹೈದರಾಬಾದ್ ಕರ್ನಾಟಕ ಭಾಗಕ್ಕೆ ಸ್ವಾತಂತ್ರ್ಯ ಬಂದಿದ್ದು ಸೆಪ್ಟೆಂಬರ್ 19, 1948 ರಂದು. ಭಾರತದ ಒಕ್ಕೂಟಕ್ಕೆ ಸೇರಲು ಬಯಸದೇ ಇದ್ದಾಗ ಪೊಲೀಸ್ ಕಾರ್ಯಾಚರಣೆ ಮಾಡಿ ನಮಗೆ ಬಿಡುಗಡೆ ಕೊಡಿಸಿದರು ಎಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಇಂದಿರಾಗಾಂಧಿ ಯವರ ಪುಣ್ಯ ಸ್ಮರಣೆ ಹಾಗೂ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶವನ್ನು ಕಾಪಾಡಲು ನೆಹರು ಹಾಗೂ ಸರ್ದಾರ್ ಪಟೇಲ್ ಅವರಷ್ಟೇ ಅತ್ಯಂತ ತೀವ್ರವಾಗಿ ಈ ದೇಶವನ್ನು ಕಟ್ಟಿದವರು ಇಂದಿರಾಗಾಂಧಿ ಅವರು. ದೇಶದ ಒಗ್ಗಟ್ಟಿಗಾಗಿ ತಮ್ಮ ಪ್ರಾಣವನ್ನೇ ಕೊಟ್ಟವರು. ರಾಜೀವ್ ಗಾಂಧಿ ಅವರು ತಾಯಿಯಂತೆ ದೇಶದ ಒಗ್ಗಟ್ಟಿಗೆ ಪ್ರಾಣ ಕೊಟ್ಟರು ಎಂದಿದ್ದಾರೆ.

ಸರ್ದಾರ್ ಪಟೇಲ್ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಪ್ರಧಾನಿ ಮೋದಿ ಅವರು ಈ ದೇಶಕ್ಕಾಗಿ ಪ್ರಾಣಕೊಟ್ಟ ಇಂದಿರಾಗಾಂಧಿ ಅವರ ಹೆಸರನ್ನು ನೆನಪಿಸಿಕೊಳ್ಳಲೇ ಇಲ್ಲ. ಕೇವಲ ಅರ್ಬನ್ ನಕ್ಸಲ್ ಹಾಗೂ ಈ ಹಿಂದೇ ಆಡಳಿತ ಮಾಡಿದ ಪಕ್ಷಗಳು ದೇಶವನ್ನು ಅಭಿವೃದ್ಧಿ ಮಾಡಿಲ್ಲ. ಪರೋಕ್ಷವಾಗಿ ಕಾಂಗ್ರೆಸ್ ಪಕ್ಷಕ್ಕೆ ಬೈಯುವ ಕೆಲಸವನ್ನು ಮೋದಿ ಗುರುವಾರ ಬೆಳಿಗ್ಗೆಯೇ ಮಾಡಿದರು. ಅವರಿಗೆ ಬೇರೆ ವಿಚಾರಗಳೇ ತಲೆಯಲ್ಲಿ ಇಲ್ಲ ಎಂದು ಹೇಳಿದ್ದಾರೆ.

ಈ ದೇಶಕ್ಕಾಗಿ ಪ್ರಾಣ ಕೊಟ್ಟ ನಾಯಕಿಯನ್ನು ಮೋದಿ ಅವರು ನೆನಪಿಸಿಕೊಳ್ಳಲಿಲ್ಲ. ಅಂದರೆ ಇನ್ನೂ ಅವರ ಮನಸ್ಸಿನಲ್ಲಿ ಹಾಗೂ ಪಕ್ಷದ ಜನರಲ್ಲಿ ವಿಷ ತುಂಬಿದೆ. ಬಿಜೆಪಿಯ ಅಗ್ರಗಣ್ಯ ನಾಯಕರಾದ ವಾಜಪೇಯಿ ಅವರು ಇಂದಿರಾಗಾಂಧಿ ಅವರನ್ನು “ದುರ್ಗೆ” ಎಂದು ಕರೆದಿದ್ದರು. ಇಂತಹ ಪಕ್ಷದ ನಾಯಕರಾದ ಮೋದಿ ಅವರ ಬಾಯಲ್ಲಿ ಇಂದಿರಾಗಾಂಧಿ ಅವರ ಹೆಸರೇ ಬರಲಿಲ್ಲ ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್ ನಾಯಕರಾದ ಪಟೇಲ್ ಅವರನ್ನು ಬಿಜೆಪಿ ಕಸಿಯಲು ಪ್ರಯತ್ನ ಮಾಡುತ್ತಿದೆ. ಗಾಂಧಿ ಅವರನ್ನು ಗೋಡ್ಸೆ ಕೊಂದ ನಂತರ ಆರ್ ಎಸ್ ಎಸ್ ಅನ್ನು ಬ್ಯಾನ್ ಮಾಡಿದರು. ಇದರ ಬಗ್ಗೆ ಬಿಜೆಪಿಯವರು ಏನು ಮಾತನಾಡುವುದಿಲ್ಲ. ಸರ್ದಾರ್ ಪಟೇಲ್ ಅವರ ತತ್ವಗಳಿಗೆ ಬಿಜೆಪಿ ಹಾಗೂ ಮೋದಿ ವಿರುದ್ಧವಾಗಿ ಇದ್ದಾರೆ. ಅವರನ್ನು ಬಿಜೆಪಿಯವರನ್ನಾಗಿ ಮಾಡಿ ಕೊಳ್ಳಲು ಹೊರಟಿದ್ದಾರೆ ಎಂದಿದ್ದಾರೆ

ಬಿಜೆಪಿಯವರು ಜಾತಿಯತೆ ಮೂಡಿಸುವುದು. ಧರ್ಮಗಳ ನಡುವೆ ವೈಶಮ್ಯ ಬಿತ್ತುವುದು. ಇದೇ ಅವರ ಕೆಲಸ. ಗುಂಪು ಘರ್ಷಣೆ ಸೇರಿದಂತೆ ಈ ದೇಶದೊಳಗೆ ಅಶಾಂತಿಯನ್ನು ಮೂಡಿಸುವುದೇ ಬಿಜೆಪಿಯ ಕೆಲಸ ಎಂದು ಆರೋಪಿಸಿದ್ದಾರೆ.

More articles

Latest article