ಬೆಂಗಳೂರು:
ನಿಷೇಧಿತ ಮಾದಕ ವಸ್ತು ಎಂಡಿಎಂಎ ಕ್ರಿಸ್ಟಲ್ ಮಾರಾಟ ಮಾಡುತ್ತಿದ್ದ ನೈಜೀರಿಯಾ ದೇಶದ ಪ್ರಜೆ ಇನಿಯಾಂಗ್ ಉನ್ಯಮಿ ಬೋನಿಫೇಸ್ ಎಂಬಾತನನ್ನು ಸಿಸಿಬಿ ಮಾದಕ ವಸ್ತು ನಿಗ್ರಹ ದಳ ಬಂಧಿಸಿದೆ. ಈತನಿಂದ 1ಕೆಜಿ 577 ಗ್ರಾಂ ಎಂಡಿಎಂಎ ಕ್ರಿಸ್ಟಲ್ ವಶಪಡಿಸಿಕೊಳ್ಳಲಾಗಿದೆ. ಇದರ 2.36 ಕೋಟಿ ರೂ. ಎಂದು ಪೊಲೀಸರು ಅಂದಾಜು ಮಾಡಿದ್ದಾರೆ.
ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀನಿಧಿ ಲೇಔಟ್ ನ ಮನೆಯೊಂದರಲ್ಲಿ ವಾಸವಾಗಿದ್ದ ಈತ ಡ್ರಗ್ಸ್ ಮಾರಾಟ ಮಾಡುತಿರುವ ಖಚಿತ ಮಾಹಿತಿ ಲಭ್ಯವಾಗಿತ್ತು. ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. 2020ರಲ್ಲಿ ವೈದ್ಯಕೀಯ ವೀಸಾ ಪಡೆದು ಭಾರತಕ್ಕೆ ಅಗಮಿಸಿದ್ದ ಆರೋಪಿ ಮುಂಬೈನ ನೋಯ್ಡಾದಲ್ಲಿ ನೆಲೆಸಿ ಕ್ಷೌರಿಕ ಕೆಲಸ ಮಾಡುತ್ತಿದ್ದ. ಇದೇ ಸಂದರ್ಭದಲ್ಲಿ ಬೆಂಗಳೂರಿನ ಮಹಿಳಾ ಡ್ರಗ್ ಪೆಡ್ಲರ್ ಪರಿಚಯವಾಗಿತ್ತು. ನಂತರ ಈತ ಬೆಂಗಳೂರಿಗೆ ಆಗಮಿಸಿ ಆಕೆಯೊಂದಿಗೆ ಸೇರಿಕೊಂಡು ಡ್ರಗ್ ವ್ಯಾಪಾರ ಮಾಡುತ್ತಿದ್ದ. ಪರಿಚಯಸ್ಥ ಗ್ರಾಹಕರು ಮತ್ತು ವಿದ್ಯಾರ್ಥಿಗಳಿಗೆ ಡ್ರಗ್ ಮಾರಾಟ ಮಾಡುತ್ತಿದ್ದರು. ಈತನ ಜೊತೆಗಿದ್ದ ವಿದೇಶಿ ಮಹಿಳೆ ತಲೆ ಮರೆಸಿಕೊಂಡಿದ್ದು ಹುಡುಕಾಟ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.