ಬೆಂಗಳೂರು: ದೀಪಾವಳಿ ಆಚರಣೆಗೆ ಎರಡು ದಿನ ಬಾಕಿ ಇದ್ದು, ಬೆಂಗಳೂರಿನ ಮಿಂಟೋ ಕಣ್ಣಾಸ್ಪತ್ರೆ ಸಜ್ಜಾಗಿದೆ. ಪಟಾಕಿಗಳಿಂದ ಕಣ್ಣಿನ ಗಾಯಗಳಾದವರಿಗೆ ಚಿಕಿತ್ಸೆ ನೀಡಲು ಪುರುಷ, ಮಹಿಳೆಯರಿಗೆ ತಲಾ 10 ಬೆಡ್ ಮತ್ತು 15 ಬೆಡ್ ಗಳನ್ನು ಮಕ್ಕಳಿಗಾಗಿ ಮೀಸಲಿರಿಸಲಾಗಿದೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲೂ ಪಟಾಕಿಗಳಿಂದ ಕಣ್ಣಿಗೆ ಹಾನಿ ಮಾಡಿಕೊಂಡವರಿಗಾಗಿ ಮತ್ತು ಸುಟ್ಟ ಗಾಯಗಳಿಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ದಾಖಲಾಗುವ ಪ್ರತಿಯೊಬ್ಬರಿಗೂ ಚಿಕಿತ್ಸೆ ನೀಡಲು ಪ್ತತ್ಯೇಕ ಬ್ಲಾಕ್ ವ್ಯವಸ್ಥೆ ಮಾಡಲಾಗಿದೆ. ಕಣ್ಣಿನ ಹಾನಿ ಮಾಡಿಕೊಂಡವರಿಗಾಗಿಯೇ ಪ್ರತ್ಯೇಕ ವಾರ್ಡ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಎರಡೂ ಆಸ್ಪತ್ರೆಗಳಲ್ಲಿ ದಿನದ 24 ಗಂಟೆಗಳ ಕಾಲವೂ ತುರ್ತು ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ ನೀಡಲು ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಂಡಿವೆ.
ಹಾಗೆಯೇ ನೇತ್ರ ಚಿಕಿತ್ಸಾ ತಜ್ಞರು ಕೆಲವೊಂದು ಮುನ್ನೆಚ್ಚರಿಕೆಯ ಕ್ರಮಗಳನ್ನು ಸೂಚಿಸಿದ್ದಾರೆ. ಬಾಟಲ್ ರಾಕೆಟ್ ಗಳು ನೇರವಾಗಿ ಮುಖಕ್ಕೆ ಹಾರುತ್ತವೆ ಮತ್ತು ಕಣ್ಣಿಗೆ ತೊಂದರೆ ಉಂಟು ಮಾಡುತ್ತವೆ. ಇದರಿಂದ ಶಾಶ್ವತವಾಗಿ ದೃಷ್ಟಿಯನ್ನೇ ಕಳೆದುಕೊಳ್ಳುವ ಸಾದ್ಯತೆಗಳಿರುತ್ತವೆ. 125 ಡೆಸಿಬಲ್ ಗಿಂತಲೂ ಹೆಚ್ಚಿನ ಶಬ್ಧ ಉಂಟು ಮಾಡುವ ಪಟಾಕಿಗಳನ್ನು ಸಿಡಿಸಬೇಡಿ ಎಂದು ಅವರು ಹೇಳಿದ್ದಾರೆ.
ಪಟಾಕಿ ಸಂಬಂಧಿತ ಅವಘಡಗಳಾದರೆ ನೆರವು ಬೇಕಿದ್ದಲ್ಲಿ ತುರ್ತು ಸಹಾಯವಾಣಿಯನ್ನು ತೆರೆಯಲಾಗಿದೆ. ತುರ್ತು ಸಂದರ್ಭಗಳಲ್ಲಿ 9481740137 ಅಥವಾ 08026707176 ಈ ನಂಬರ್ ಗಳಿಗೆ ಕರೆ ಮಾಡಬಹುದಾಗಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ಹಸಿರು ಪಟಾಕಿಗಳನ್ನು ಸಿಡಿಸುವುದು ಕ್ಷೇಮ. ಪಟಾಕಿ ಸಿಡಿಸುವಾಗ ಹತ್ತಿ ಬಟ್ಟೆಗಳನ್ನು ಧರಿಸುವುದು ಮತ್ತು ಕನ್ನಡಕಗಳನ್ನು ಧರಿಸುವುದು ಉತ್ತಮ ಎಂದು ವೈದ್ಯರು ಸಲಹೆ ನೀಡುತ್ತಾರೆ. ಪಟಾಕಿ ಸಿಡಿಸುವುದರಿಂದ ಮಾತ್ರವಲ್ಲ, ಪಟಾಕಿ ಹಚ್ಚುವುದನ್ನು ನೋಡುವುದರಿಂದಲೂ ಆಕಸ್ಮಿಕವಾಗಿ ಕಣ್ಣಿಗೆ ಅಪಾಯವಾಗಬಹುದು. ಆದ್ದರಿಂದ ಎಚ್ಚರಿಕೆಯಿಂದ ಇರಬೇಕು ಎಂದು ವೈದ್ಯರು ಹೇಳುತ್ತಾರೆ.
ಅನುಮತಿ ಪಡೆದ ಮಾರಾಟಗಾರರಿಂದಲೇ ಪಟಾಕಿಗಳನ್ನು ಖರೀದಿಸಬೇಕು. ಹಿರಿಯರ ಮಾರ್ಗದರ್ಶನದಲ್ಲೇ ಮಕ್ಕಳು ಪಟಾಕಿ ಹಚ್ಚಬೇಕು. ಪಟಾಕಿ ಹಚ್ಚುವ ಸ್ಥಳದಲ್ಲಿ ಒಂದು ಬಕೆಟ್ ನೀರು ಇಟ್ಟುಕೊಳ್ಳಿ. ಪಟಾಕಿಗಳಿದ ಅಂತರ ಕಾಯ್ದುಕೊಳ್ಳಿ. ಯಾವುದೇ ಕಾರಣಕ್ಕೂ ಪಟಾಕಿಗಳ ಮೇಲೆ ಬಾಗಬೇಡಿ. ಒಂದು ವೇಳೆ ಪಟಾಕಿ ಹತ್ತಿಲ್ಲ ಎಂದು ಮತ್ತೊಮ್ಮೆ ಅದೇ ಪಟಾಕಿಯನ್ನು ಸಿಡಿಸುವ ಪ್ರಯತ್ನ ಮಾಡಬೇಡಿ. ಹೆಣ್ಣು ಮಕ್ಕಳು ತಲೆ ಕೂದಲನ್ನು ಉದ್ದವಾಗಿ ಬಿಟ್ಟುಕೊಳ್ಳದೆ ಕಟ್ಟಿಕೊಳ್ಳುವುದು ಕ್ಷೇಮ.
ಒಂದು ವೇಳೆ ಕಣ್ಣಿಗೆ ಹಾನಿಯಾದರೆ ಸುಟ್ಟ ಸ್ಥಳಕ್ಕೆ ತಣ್ಣಿರು ಸುರಿಯಬೇಕು. ಶುಭ್ರ ವಸ್ತ್ರದಿಂದ ಗಾಯದ ಜಾಗವನ್ನು ಸುತ್ತಬೇಕು. ಕೂಡಲೇ ವೈದ್ಯರ ಬಳಿ ಕರೆದೊಯ್ಯಬೇಕು. ಯಾವುದೇ ಕಾರಣಕ್ಕೂ ಮಂಜುಗಡ್ಡೆಯನ್ನು ಸುಟ್ಟ ಸ್ಥಳಕ್ಕೆ ಹಚ್ಚಬಾರದು. ಬೆಣ್ಣೆ, ಎಣ್ಣೆ, ಕ್ರೀಂ ಬಳಸಬಾರದು ಎಂದೂ ವೈದ್ಯರು ಸಲಹೆ ನೀಡಿದ್ದಾರೆ.