ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಂ-೨ ಚಿತ್ರ ನಟ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಲಾಗಿದೆ.
ಕಳೆದ ಬಾರಿ ದರ್ಶನ್ ಜಾಮೀನು ಅರ್ಜಿ ಕುರಿತು ವಾದ ಪ್ರತಿವಾದ ಪೂರ್ಣಗೊಂಡಿದ್ದು, ಇಂದು ಜಾಮೀನು ನೀಡಬೇಕೇ ಬೇಡವೇ ಎಂದು ಹೈಕೋರ್ಟ್ ಆದೇಶ ಹೊರಡಿಸಬೇಕಿತ್ತು. ಆದರೆ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರು ವಿಚಾರಣೆಯನ್ನು ನಾಳೆಗೆ ಮುಂದೂಡಿದ್ದು, ಮಧ್ಯಾಹ್ನ 2.30ಕ್ಕೆ ಆದೇಶ ಹೊರಡಿಸಲಿದ್ದಾರೆ.
ದರ್ಶನ್ ಪರ ವಕೀಲ ಸಿ.ವಿ. ನಾಗೇಶ್, ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನಕುಮಾರ್ ಮತ್ತು ದರ್ಶನ್ ಅವರನ್ನು ಬಂಧಿಸಿದ್ದ ಎಸಿಪಿ ಚಂದನ್ ಕುಮಾರ್ ನ್ಯಾಯಾಲಯದಲ್ಲಿ ಉಪಸ್ಥಿತರಿದ್ದರು.
ತೀವ್ರವಾಗಿ ಕಾಡುತ್ತಿರುವ ಬೆನ್ನುನೋವಿನ ಹಿನ್ನೆಲೆಯಲ್ಲಿ ದರ್ಶನ್ ಮಧ್ಯಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಖ್ಯಾತ ಕ್ರಿಮಿನಲ್ ವಕೀಲ ನಾಗೇಶ್ ಅವರು ದರ್ಶನ್ ಪರವಾಗಿ ವಾದಿಸಿದ್ದರು.
ಜೂನ್ 8 ರಂದು ರೇಣುಕಾಸ್ವಾಮಿ ಹತ್ಯೆ ನಡೆದಿದ್ದು, ಜೂನ್ 11 ರಂದು ನಟ ದರ್ಶನ್ ಬಂಧನವಾಗಿತ್ತು. ಕಳೆದ 130 ದಿನಗಳಿಂದ ಜೈಲುವಾಸದಲ್ಲಿದ್ದಾರೆ.
ಒಂದು ವೇಳೆ ಜಾಮೀನು ಅರ್ಜಿ ವಜಾಗೊಂಡರೆ ಹೈ ಕೋರ್ಟ್ ನಲ್ಲೇ ಮೇಲ್ಮನವಿ ಸಲ್ಲಿಸಬಹುದು. ಅಲ್ಲಿಯೂ ಜಾಮೀನು ಸಿಗದಿದ್ದರೆ ಸುಪ್ರೀಂ ಕೋರ್ಟ್ ಮೊರೆ ಹೋಗಬೇಕಾಗುತ್ತದೆ.
ಈ ಹಿಂದೆ ನಡೆದ ವಾದ ಪ್ರತಿವಾದದಲ್ಲಿ ದರ್ಶನ್ ಪರ ವಕೀಲರು ಅವರು ಯಾವುದೇ ತಪ್ಪು ಮಾಡಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯ ಸಂದರ್ಭದಲ್ಲಿ ವಶಪಡಿಸಿಕೊಂಡಿರುವ ವಸ್ತುಗಳೆಲ್ಲಾ ಅವರೇ ಸೃಷ್ಟಿಸಿಕೊಂಡಿದ್ದಾರೆ.ಪ್ರತ್ಯಕ್ಷ ಸಾಕ್ಷಿದಾರರನ್ನು ಪೊಲೀಸರೇ ಸೃಷ್ಟಿಸಿದ್ದಾರೆ ಮತ್ತು ಅವರ ಹೇಳಿಕೆಗಳನ್ನು ಉದ್ದೇಶಪೂರ್ವಕವಾಗಿ ತಡವಾಗಿ ದಾಖಲು ಮಾಡಿಕೊಳ್ಳಲಾಗಿದೆ ಎಂದು ವಾದಿಸಿದ್ದರು.
ದರ್ಶನ್ ಆಪ್ತ ಸ್ನೇಹಿತೆ ಪವಿತ್ರಾ ಗೌಡ ತನ್ನ ಆಪ್ತೆಗೆ ಸಂದೇಶ ಕಳುಹಿಸುತ್ತಿದ್ದ ಎಂಬ ಸಿಟ್ಟು ದರ್ಶನ್ ಗೆ ಇತ್ತು. ಇದರಿಂದ ಕೆರಳಿದ ಅವರು ಚಿತ್ರದುರ್ಗದ ತನ್ನ ಅಭಿಮಾನಿ ಸಂಘದ ಅಧ್ಯಕ್ಷ ರಾಘವೇಂದ್ರ ಮೂಲಕ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆಯಿಸಿಕೊಂಡು ಹತ್ಯೆ ಮಾಡಲಾಗಿದೆ ಎಂದು ಪ್ರಾಸಿಕ್ಯೂಶನ್ ಪರ ವಕೀಲ ಪಿ.ಪ್ರಸನ್ನ ಕುಮಾರ್ ಪ್ರತಿವಾದ ಮಂಡಿಸಿ ಜಾಮೀನು ನೀಡದಂತೆ ವಾದ ಮಂಡಿಸಿದ್ದರು.