ಬೆಂಗಳೂರು: ಕರ್ನಾಟಕ ರಾಜ್ಯ ಬೀಜ ನಿಗಮದ ವತಿಯಿಂದ ಎಲ್ಲಾ ಶೇರುದಾರರಿಗೆ ಶೇಕಡಾ 30 ರಷ್ಟು ಲಾಭಾಂಶ ನೀಡಲು ನಿರ್ಧರಿಸಲಾಗಿದ್ದು, 8360 ಷೇರುದಾರರಿಗೆ 138 ಲಕ್ಷ ರೂ. ದೊರೆಯಲಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಹೆಬ್ಬಾಳದ ಪಶು ಭವನ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಬೀಜ ನಿಗಮದ 315ನೇ ನಿರ್ದೇಶಕ ಮಂಡಳಿ ಸಭೆ ನಡೆಸಿ ಈ ಬಗ್ಗೆ ನಿರ್ಧಾರ ಕೈಗೊಂಡು ನಂತರ ನಡೆದ 51ನೇ ಸರ್ವ ಸದಸ್ಯರ ಸಭೆಯಲ್ಲಿ ಕೃಷಿ ಸಚಿವರು ಈ ವಿಷಯ ಪ್ರಕಟಿಸಿದರು.
ಕಳೆದ ಬಾರಿ ಆಡಿಟ್ ಮುಗಿಯದ ಕಾರಣದಿಂದಾಗಿ ಶೇ. 10 ರಷ್ಟು ಲಾಭಾಂಶ ಮಾತ್ರ ನೀಡಲಾಗಿತ್ತು, ಇದೀಗ ಲೆಕ್ಕ ಪರಿಶೋಧನೆ ಅಂತಿಮವಾಗಿರುವುದರಿಂದ 2022-23ನೇ ಸಾಲಿನಲ್ಲಿ 67 ಲಕ್ಷ ಹಾಗೂ 2023-24ನೇ ಸಾಲಿಗೆ 71 ಲಕ್ಷ ಲಾಭಾಂಶ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ರಾಜ್ಯದ ಬೀಜ ನಿಗಮದ ವತಿಯಿಂದ ಗುಲ್ಬರ್ಗಾದಲ್ಲಿ ಗೋಧಾಮು ನಿರ್ಮಾಣಕ್ಕೂ ಸಹ ಅನುಮೋದನೆ ನೀಡಲಾಗಿದೆ. ಕಳೆದ ವರ್ಷ 2 ಲಕ್ಷ ಕ್ವಿಂಟಾಲ್ ಬೀಜ ಉತ್ಪಾದನೆ ಗುರಿಯ ಬದಲಾಗಿ ಈ ವರ್ಷ 4 ಲಕ್ಷ ಕ್ವಿಂಟಾಲ್ ಉತ್ಪಾದನೆಯ ಗುರಿ ಹೊಂದಲಾಗಿದೆ ಎಂದು ಅವರು ಹೇಳಿದರು.
ನಮ್ಮ ಸರ್ಕಾರ ಕೃಷಿಕರ ಶ್ರೋಯೋಭಿವೃದ್ದಿಗೆ ನಿರಂತರವಾಗಿ ಶ್ರಮಿಸುತ್ತಿದ್ದು ಹೆಚ್ಚಿನ ಆಧ್ಯತೆ ನೀಡುತ್ತಿದೆ. ಕಳೆದ ವರ್ಷ ರಾಜ್ಯವನ್ನು ತೀವ್ರ ಬರ ಕಾಡಿದಾಗಿ ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದರೂ ಸಕಾಲದಲ್ಲಿ ಸ್ಪಂದಿಸಲಿಲ್ಲ. ನ್ಯಾಯಾಲಯದ ಮೂಲಕ ನಮಗೆ ಸಿಗಬೇಕಿದ್ದ 3454 ಕೋಟಿ ರೂಗಳನ್ನು ಪಡೆದು ರೈತರಿಗೆ ಪರಿಹಾರ ಬಿಡುಗಡೆ ಮಾಡಲಾಗಿದೆ. ಅಲ್ಲದೇ 1900 ಕೋಟಿ ರೂ ವಿಮೆ ಹಣ ಇತ್ಯರ್ಥಪಡಿಸಲಾಗಿದ್ದು ಇದಲ್ಲದೆ ರೈತರಿಗೆ ತಾತ್ಕಲಿಕ ಪರಿಹಾರ ಸೇರಿದಂತೆ ಒಟ್ಟಾರೆ 6500 ಕೋಟಿ ರೂಗಳನ್ನು ಒದಗಿಸುವ ಮೂಲಕ ಬರದ ತೀವ್ರತೆ ಬಾದಿಸದಂತೆ ಕ್ರಮ ವಹಿಸಲಾಯಿತು ಎಂದು ಕೃಷಿ ಸಚಿವರು ತಿಳಿಸಿದರು.
ಈ ಬಾರಿ ಉತ್ತಮವಾಗಿ ಮಳೆಯಾಗಿದ್ದು 82 ಲಕ್ಷ ಹೆಕ್ಟರ್ ಬಿತ್ತನೆಯಾಗಿದೆ. 40 ಲಕ್ಷ ಹೆಕ್ಟೇರ್ ಕಟಾವು ಮಾಡಲಾಗಿದೆ. ಕಳೆದ 10 ದಿನಗಳಿಂದ ಸುರಿದ ತೀವ್ರ ಮಳೆಯಿಂದ ಸುಮಾರು 1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದ್ದು ವರದಿ ತರಿಸಿಕೊಳ್ಳಲಾಗುತ್ತಿದೆ. ನಿಯಮಾನುಸಾರ ಪರಿಹಾರ ದೊರಯಲಿದೆ ಎಂದು ಅವರು ಮಾಹಿತಿ ನೀಡಿದರು.
ರಾಜ್ಯ ಕೃಷಿ ಇಲಾಖೆ ಕೇಂದ್ರದಿAದ ಅತಿ ಹೆಚ್ಚು ಅನುದಾನವನ್ನು ಪಡೆದು ಅದನ್ನು ರೈತರಿಗೆ ವರ್ಗಾವಣೆ ಮಾಡಿದೆ. 650 ಅಧಿಕಾರಿ ಸಿಬ್ಬಂದಿಗೆ ಬಡ್ತಿ ನೀಡಲಾಗಿದ್ದು ಹೊಸದಾಗಿ 950 ಸಹಾಯಕ ಕೃಷಿ ಅಧಿಕಾರಿ, ಕೃಷಿ ಅಧಿಕಾರಿಗಳ ನೇಮಕಾತಿಗೆ ಕ್ರಮ ವಹಿಸಲಾಗಿದ್ದು, ಆಡಳಿತಾತ್ಮಕ ಸುಧಾರಣೆಗೂ ಒತ್ತು ನೀಡಲಾಗಿದೆ ಎಂದು ಎನ್.ಚಲುವರಾಯಸ್ವಾಮಿ ಹೇಳಿದರು.
ಕೃಷಿಕರು ತಮ್ಮ ಸಂಪ್ರದಾಯಿಕ ಕೃಷಿಯ ಜೊತೆಗೆ ಸಮಗ್ರ ಕೃಷಿ ಬಗ್ಗೆ ಗಮನ ಹರಿಸಬೇಕು. ಸರ್ಕಾರದ ಯೋಜನೆಗಳ ಲಾಭವನ್ನು ಪಡೆದು ಕೃಷಿ ವಿಶ್ವವಿದ್ಯಾಲಯಗಳ ಸಂಶೋಧನೆಯ ಅನುಕೂಲಗಳನ್ನು ಅನುಸರಿಸಿ ಪ್ರಗತಿಪರ ರೈತರಾಗಿ ಪರಿವರ್ತನೆಯಾಗಬೇಕು. ಬೀಜ ನಿಗಮ ವತಿಯಿಂದಲೂ ರೈತರಿಗೆ ಹರಿವು ಮತ್ತು ಪ್ರೋತ್ಸಾಹಗಳನ್ನು ನೀಡಲಾಗುತ್ತಿದೆ ಇವೆಲ್ಲವನ್ನು ಸದ್ಬಳಕೆ ಮಾಡಿಕೊಂಡು ಅನುಕೂಲ ಪಡೆಯಬೇಕು ಎಂದು ಕರೆ ನೀಡಿದರು.
ಕೃಷಿ ಇಲಾಖೆ ಕಾರ್ಯದರ್ಶಿ ಅನ್ಬುಕುಮಾರ್, ಆಯುಕ್ತರಾದ ವೈ.ಎಸ್.ಪಾಟೀಲ್, ರಾಷ್ಟ್ರೀಯ ಬೀಜ ನಿಗಮದ ಪ್ರಾದೇಶಿಕ ವ್ಯವಸ್ಥಾಪಕರಾದ ಅಹಮದ್ ರಾಜಾ, ಬೀಜ ನಿಗಮದ ವ್ಯಸ್ಥಾಪಕ ನಿರ್ದೇಶಕರಾದ ದೇವರಾಜ್, ಮತ್ತಿರರರು ಹಾಜರಿದ್ದರು.