ಹೊಸದಿಲ್ಲಿ: ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರನ್ನು ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ರಾಷ್ಟ್ರಪತಿ ದ್ರೌಪದಿ ಮುರ್ಮು ನೇಮಕ ಮಾಡಿದ್ದಾರೆ.
ನವೆಂಬರ್ 10 ರಂದು ಹಾಲಿ ಸಿಜೆಐ ಡಿವೈ ಚಂದ್ರಚೂಡ್ ಅವರ ನಿವೃತ್ತಿಯ ನಂತರ ನ್ಯಾಯಮೂರ್ತಿ ಖನ್ನಾ ಅವರು 51 ನೇ ಸಿಜೆಐ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ನಿಯಮದ ಪ್ರಕಾರ, ಸಿಜೆಐ ಚಂದ್ರಚೂಡ್ ಅವರು ಈ ಹಿಂದೆ ಮುಂದಿನ ಸಿಜೆಐ ಆಗಿ ನೇಮಕ ಮಾಡಲು ಉನ್ನತ ನ್ಯಾಯಾಲಯದ ಮೊದಲ ಹಿರಿಯ ನ್ಯಾಯಾಧೀಶರಾಗಿರುವ ನ್ಯಾಯಮೂರ್ತಿ ಖನ್ನಾ ಅವರ ಹೆಸರನ್ನು ಶಿಫಾರಸು ಮಾಡಿದ್ದರು.
ಕಾನೂನು ಮತ್ತು ನ್ಯಾಯ ಸಚಿವಾಲಯದ ಸ್ವತಂತ್ರ ಉಸ್ತುವಾರಿ ಹೊಂದಿರುವ ಕೇಂದ್ರ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಈ ಸಂಬಂಧ ಟ್ವೀಟ್ ಮಾಡಿ ಮುಖ್ಯ ನ್ಯಾಯಮೂರ್ತಿಗಳ ನೇಮಕವಾಗಿರುವುದನ್ನು ಖಚಿತಪಡಿಸಿದ್ದಾರೆ.
ನ್ಯಾಯಮೂರ್ತಿ ಖನ್ನಾ ಅವರು 183 ದಿನಗಳ ಅಲ್ಪಾವಧಿಗೆ ಸಿಜೆಐ ಆಗಿ ಕಾರ್ಯನಿರ್ವಹಿಸಲಿದ್ದು, ಮೇ 13, 2025 ರಂದು ನಿವೃತ್ತರಾಗಲಿದ್ದಾರೆ.
ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು 1983 ರಲ್ಲಿ ತೆರಿಗೆ, ಸಾಂವಿಧಾನಿಕ ಕಾನೂನು, ಮಧ್ಯಸ್ಥಿಕೆ, ವಾಣಿಜ್ಯ ಮತ್ತು ಪರಿಸರ ವಿಷಯಗಳಲ್ಲಿ ನ್ಯಾಯವಾದಿಯಾಗಿ ವೃತ್ತಿಜೀವನ ಆರಂಭಿಸಿದ್ದರು. 2005 ರಲ್ಲಿ ದೆಹಲಿ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡ ನಂತರ ಒಂದು ವರ್ಷದ ಬಳಿಕ ಖಾಯಂ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು.
ಜನವರಿ 18, 2019 ರಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸ್ಥಾನಕ್ಕೆ ಬಡ್ತಿ ನೀಡಲಾಗಿತ್ತು. ನ್ಯಾಯಮೂರ್ತಿ ಖನ್ನಾ ಅವರು ಸುಪ್ರೀಂ ಕೋರ್ಟ್ ಮಾಜಿ ನ್ಯಾಯಾಧೀಶ ಹನ್ಸ್ ರಾಜ್ ಖನ್ನಾ ಅವರ ಸೋದರಳಿಯರಾಗಿದ್ದಾರೆ.