ಭಾರತ ಜೋಡೋ ಯಾತ್ರೆಯು ಕಾಲ್ನಡಿಗೆಯಿಂದಲೇ ಪೂರ್ತಿಯಾಗಿದ್ದರೆ, ಭಾರತ ಜೋಡೋ ನ್ಯಾಯ ಯಾತ್ರೆಯು ಬಸ್ ಯಾತ್ರೆ ಮತ್ತು ಪಾದಯಾತ್ರೆ ಎರಡರ ಹೈಬ್ರೀಡ್ ಸ್ವರೂಪದಲ್ಲಿ ನಡೆಯಲಿದೆ. ಇದು 15 ರಾಜ್ಯಗಳಲ್ಲಿ ಒಟ್ಟು 6,713 ಕಿಲೋಮೀಟರ್ ದೂರವನ್ನು ಕ್ರಮಿಸಲಿದ್ದು ಮಾರ್ಚ್ 20-21 ರಂದು ಮುಂಬಯಿಯಲ್ಲಿ ಸಮಾಪನಗೊಳ್ಳಲಿದೆ. ಪ್ರತಿ ದಿನದ ಯಾತ್ರೆಯ ಸಂಕ್ಷಿಪ್ತ ವಿವರಗಳ ಲೇಖನ ಪ್ರತಿ ದಿನ ಕನ್ನಡ ಪ್ಲಾನೆಟ್ ನಲ್ಲಿ ಬರಲಿದೆ.
2022 ರ ಕೊನೆಯಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಆರಂಭವಾಗಿ 2023 ರ ಜನವರಿ ತಿಂಗಳಲ್ಲಿ ಕಾಶ್ಮೀರದಲ್ಲಿ ಯಶಸ್ವಿಯಾಗಿ ಮುಗಿದ ಭಾರತ ಜೋಡೋ ಯಾತ್ರೆಯ ಸಂದರ್ಭದಲ್ಲಿ ಕೇಳಿ ಬಂದ ಒಂದು ಆಕ್ಷೇಪವೆಂದರೆ, ಯಾಕೆ ಕೆಲವು ರಾಜ್ಯಗಳನ್ನು ಯಾತ್ರಾ ಮಾರ್ಗದಿಂದ ಕೈಬಿಡಲಾಗಿದೆ ಎಂದು. ಆ ಸಂದರ್ಭದಲ್ಲಿ ಸ್ಪಷ್ಟೀಕರಣ ನೀಡಿದ ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರ ತನಕದ ಕಾಲ್ನಡಿಗೆ ಅಷ್ಟು ಸುಲಭದ ಮಾತಲ್ಲ. ಈ ಕಾರಣದಿಂದ ಕೆಲವು ಪ್ರದೇಶಗಳನ್ನು ಹೊರಗಿಡಲೇಬೇಕಾಗುತ್ತದೆ, ಆದರೆ ಮುಂದೆ ಪೂರ್ವ ಮತ್ತು ಪಶ್ಚಿಮದ ನಡುವೆ ಯಾತ್ರೆ ನಡೆಸುವ ಆಲೋಚನೆಯೂ ಇದೆ ಎಂದು ಹೇಳಿದ್ದರು.
ಅದೇ ಪ್ರಕಾರ ಕಳೆದ ಐದು ದಿನಗಳ ಹಿಂದೆ ಅಂದರೆ ಜನವರಿ 14, 2024 ರಂದು ಭಾರತ ಜೋಡೋ ಯಾತ್ರೆಯ ಎರಡನೆಯ ಹಂತವಾದ ‘ಭಾರತ ಜೋಡೋ ನ್ಯಾಯ ಯಾತ್ರೆ’ಯು ಮಣಿಪುರದ ತೌಬಾಲ್ ನಲ್ಲಿ ಅದ್ದೂರಿಯಾಗಿ ಆರಂಭಗೊಂಡಿತು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ದಿಗ್ವಿಜಯ್ ಸಿಂಗ್, ಜಯರಾಮ ರಮೇಶ್, ಸಿದ್ದರಾಮಯ್ಯ, ರೇವಂತ ರೆಡ್ಡಿ ಹೀಗೆ ಕಾಂಗ್ರೆಸ್ ನ ಘಟಾನುಘಟಿ ನಾಯಕರೆಲ್ಲ ಅಲ್ಲಿ ಸೇರಿದ್ದರು.
ಈ ಐದು ದಿನಗಳಲ್ಲಿ ಮಣಿಪುರ ಮತ್ತು ನಾಗಾಲ್ಯಾಂಡ್ ರಾಜ್ಯಗಳ ಯಾತ್ರೆ ಮುಗಿಸಿ ಇಂದು ರಾಹುಲ್ ತಂಡ ನಾಗಾಲ್ಯಾಂಡ್ ನ ಸಿವಸಾಗರ್ ಜಿಲ್ಲೆಯ ಹಲುವಾಟಿಂಗ್ ಮೂಲಕ ಅಸ್ಸಾಂ ರಾಜ್ಯವನ್ನು ಪ್ರವೇಶಿಸಿದೆ.
ಮಣಿಪುರ ಮತ್ತು ನಾಗಾಲ್ಯಾಂಡ್ ಯಾತ್ರೆಯ ಉದ್ದಕ್ಕೂ ಜನರು ರಾಹುಲ್ ನೇತೃತ್ವದ ತಂಡವನ್ನು ಅಪಾರ ಪ್ರೀತಿ ಸಂಭ್ರಮ ಸಡಗರದಿಂದ ಸ್ವಾಗತಿಸಿದ್ದಾರೆ. ತಮ್ಮ ಪಾರಂಪರಿಕ ಉಡುಗೆ ಮತ್ತು ನೃತ್ಯಗಳಿಂದ ಸಂದರ್ಭಕ್ಕೆ ಕಳೆ ಏರಿಸಿದ್ದಾರೆ. ಮಕ್ಕಳು, ಹೆಣ್ಣುಮಕ್ಕಳು ಎಲ್ಲರೂ ರಾಹುಲ್ ಜತೆ ಫೋಟೋ ತೆಗೆಸಿಕೊಂಡು ಖುಷಿ ಪಟ್ಟಿದ್ದಾರೆ. ಅಲ್ಲಲ್ಲಿ ಜನಸಭೆ ಮತ್ತು ಪತ್ರಿಕಾಗೋಷ್ಠಿ ನಡೆಸಿರುವ ರಾಹುಲ್, ಈ ಯಾತ್ರೆಯನ್ನು ಯಾಕೆ ನಡೆಸಲಾಗುತ್ತಿದೆ ಮತ್ತು ದೇಶ ಒಂದಾಗಿದ್ದು ಪ್ರಗತಿ ಕಾಣಬೇಕಾದರೆ ಪ್ರೀತಿ ವಿಶ್ವಾಸ ಯಾಕೆ ಮುಖ್ಯ ಮತ್ತು ದ್ವೇಷದ ಹಾದಿ ಹೇಗೆ ದೇಶವನ್ನು ನಾಶ ಮಾಡುತ್ತದೆ ಎಂದು ವಿವರಿಸುತ್ತಿದ್ದಾರೆ. ಯಾತ್ರೆ ದಿನದಿಂದ ದಿನಕ್ಕೆ ಅಪಾರ ಜನಾಕರ್ಷಣೆ ಪಡೆಯುತ್ತಿದೆ.
ಭಾರತ ಜೋಡೋ ಯಾತ್ರೆಯು ಕಾಲ್ನಡಿಗೆಯಿಂದಲೇ ಪೂರ್ತಿಯಾಗಿದ್ದರೆ, ಭಾರತ ಜೋಡೋ ನ್ಯಾಯ ಯಾತ್ರೆಯು ಬಸ್ ಯಾತ್ರೆ ಮತ್ತು ಪಾದಯಾತ್ರೆ ಎರಡರ ಹೈಬ್ರೀಡ್ ಸ್ವರೂಪದಲ್ಲಿ ನಡೆಯಲಿದೆ. ಇದು 15 ರಾಜ್ಯಗಳಲ್ಲಿ ಒಟ್ಟು 6713 ಕಿಲೋಮೀಟರ್ ದೂರವನ್ನು ಕ್ರಮಿಸಲಿದ್ದು ಮಾರ್ಚ್ 20-21 ರಂದು ಮುಂಬಯಿಯಲ್ಲಿ ಸಮಾಪನಗೊಳ್ಳಲಿದೆ.
ಪೂರ್ವಾಂಚಲವೂ ಈ ದೇಶದ ಭಾಗವೇ ಆದರೂ ಅವು ನಮ್ಮ ರಾಜಕೀಯ ಸಂಕಥನಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಆದ್ಯತೆ ಪಡೆಯುವುದು ತೀರಾ ಕಡಿಮೆ. ಅಲ್ಲಿ ನೆರೆ ಬರಲೀ, ಭೂಕಂಪ ಆಗಲೀ, ಅಂತಃಕಲಹ ನಡೆಯಲೀ ಏನೇ ಆದರೂ ಅಲ್ಲಿನ ವಿದ್ಯಮಾನಗಳ ಬಗ್ಗೆ ಒಂದು ತೆರನ ತಾತ್ಸಾರ. ಇದರಿಂದ ಆ ಭಾಗದಲ್ಲಿಯೂ ‘ತಮ್ಮನ್ನು ಕೈಬಿಡಲಾಗಿದೆ’ ಎಂಬಂತಹ ಒಂದು ರೀತಿಯ ಅಸಮಾಧಾನ ಸಹಜವೇ ಆಗಿದೆ. ಇಂತಹ ಹೊತ್ತಿನಲ್ಲಿ ಅದೂ ಕಳೆದ ಎಂಟು ತಿಂಗಳಿಂದ ಅಂತರ್ಯುದ್ಧದಲ್ಲಿ ನಲುಗಿರುವ ಮಣಿಪುರದಿಂದಲೇ ಯಾತ್ರೆ ಆರಂಭವಾಗಿರುವುದು, ಆ ಮೂಲಕ ಕಡೆಗಣಿತ ರಾಜ್ಯಗಳತ್ತ ದೇಶದ ಗಮನ ಹರಿಯುವಂತಾಗಿರುವುದು ಇದು ಈಶಾನ್ಯ ರಾಜ್ಯಗಳ ಮಟ್ಟಿಗೆ ಒಂದು ಒಳ್ಳೆಯ ಬೆಳವಣಿಗೆಯೇ ಸರಿ.
ಶ್ರೀನಿವಾಸ ಕಾರ್ಕಳ
ಮಂಗಳೂರು