ಮೈಸೂರು ಜಿಲ್ಲೆ ಹೆಚ್ ಡಿ ಕೋಟೆ ಪಟ್ಟಣದ ಹೌಸಿಂಗ್ ಬೋರ್ಡ್ ಬಡಾವಣೆಯ ಸಮೀಪದ ಗುರುಮಲ್ಲು ಅವರ ಜಮೀನಿನಲ್ಲಿ ನಾಲ್ಕೈದು ದಿನಗಳ ಹಿಂದೆಯಷ್ಟೇ ಚಿರತೆಯೊಂದನ್ನು ಸೆರೆ ಹಿಡಿಯಲಾಗಿತ್ತು. ಇದೀಗ ಇದೇ ಜಮೀನಿನಲ್ಲಿ ಮತ್ತೊಂದು ಚಿರತೆಯನ್ನು ಸೆರೆ ಹಿಡಿಯಲಾಗಿದೆ.
ಈ ಚಿರತೆ ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸಿ ಆತಂಕ ಸೃಷ್ಟಿಯಾಗಿತ್ತು. ಇಂದು ಮತ್ತೊಮ್ಮೆ 6 ವರ್ಷದ ಗಂಡು ಚಿರತೆಯನ್ನು ಸೆರೆ ಹಿಡಿಯಲಾಗಿದೆ. ರೈತರ ದೂರಿನ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ರಾತ್ರಿ ಬೋನು ಇರಿಸಿದ್ದರು. ಬೋನಿನಲ್ಲಿದ್ದ ನಾಯಿ ಭಕ್ಷಿಸಲು ಕಳೆದ ತಡರಾತ್ರಿ ಬಂದು ಚಿರತೆ ಸೆರೆಯಾಗಿದೆ.
ಇದೇ ಜಮೀನಿನಲ್ಲಿ ಕಳೆದ ಒಂದು ತಿಂಗಳ ಅಂತರದಲ್ಲಿ ಸೆರೆಯಾದ ನಾಲ್ಕನೇ ಚಿರತೆ ಇದಾಗಿದೆ. ಈ ಭಾಗದಲ್ಲಿ ಇನ್ನೂ ಹಲವು ಚಿರತೆಗಳಿದ್ದು ಅವುಗಳನ್ನು ಸಹ ಸೆರೆ ಹಿಡಿಯಬೇಕೆಂದು ರೈತರು ಒತ್ತಾಯಿಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಸೆರೆಯಾದ ಚಿರತೆಯನ್ನು ದೂರದ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಿದ್ದಾರೆ. ಸೆರೆಸಿಕ್ಕ ಚಿರತೆ ನೋಡಲು ಸಾರ್ವಜನಿಕರು ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದರು.