ನೈಸ್ ರಸ್ತೆ-ಬಿಎಂಐಸಿ ಯೋಜನೆ ಈ ಭಾಗದ ಹಿತದಲ್ಲಿದೆಯೆಂದೂ, ಈಗಲೂ ಬೆಂಗಳೂರು – ಮೈಸೂರು ನಡುವೆ ಇನ್ನೊಂದು ರಸ್ತೆಯ ಅಗತ್ಯವಿದೆಯೆಂದೂ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಆಶ್ಚರ್ಯಕರವಾಗಿದೆ. ಈ ಯೋಜನೆಯ ಮೂಲಕಲ್ಪನೆ, ಅದು ಜಾರಿಯಾದ ರೀತಿ ಮತ್ತು ಇಂದು ಅದು ಉಂಟು ಮಾಡುತ್ತಿರುವ ಪರಿಣಾಮ ಎಲ್ಲವೂ ರೈತರ ಮತ್ತು ರಾಜ್ಯದ ಹಿತಾಸಕ್ತಿಯ ವಿರುದ್ಧವೇ ಇದ್ದು, ಉಪಮುಖ್ಯಮಂತ್ರಿಯವರ ಹೇಳಿಕೆ ಅತ್ಯಂತ ಖಂಡನೀಯವೆಂದು ನಾವು ಭಾವಿಸುತ್ತೇವೆ ಎಂದು ರೈತ ಸಂಘದಿಂದ ಆಗ್ರಹ ಕೇಳಿಬಂದಿದೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು,1998ರಿಂದಲೇ ಈ ಯೋಜನೆಯ ಸಾಧಕ ಬಾಧಕಗಳನ್ನು ಅಧ್ಯಯನ ಮಾಡಿ ಅದರ ವಿರುದ್ಧ ಹೋರಾಟ ಮಾಡಿದ ನಾವುಗಳು ಅಂದೇ ಆ ಯೋಜನೆಯ ಅಗತ್ಯವಿರಲಿಲ್ಲವೆಂದು ಪ್ರತಿಪಾದಿಸಿದ್ದೆವು. ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ಎಚ್.ಎಸ್.ದೊರೆಸ್ವಾಮಿ ಮತ್ತು ಶ್ರೀ ಸಿ.ಬಂದೀಗೌಡರು ಹಾಗೂ ದಿವಂಗತ ರೈತ ಮುಖಂಡರಾದ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಹಾಗೂ ಶ್ರೀ ಕೆ.ಎಸ್.ಪುಟ್ಟಣ್ಣಯ್ಯನವರು ಆ ಹೋರಾಟದ ಭಾಗವಾಗಿದ್ದು, ಯೋಜನೆಯಿಂದ ಬಾಧಿತವಾದ 177 ಹಳ್ಳಿಗಳಲ್ಲೂ ಜಾಥಾ ನಡೆದಿತ್ತು. ಮಂಡ್ಯ ಜಿಲ್ಲೆಯ ಎಷ್ಟೋ ಹಳ್ಳಿಗಳಲ್ಲಿ, ಗುರುತಿನ ಕಲ್ಲುಗಳನ್ನು ಕಿತ್ತು ಹಾಕಿ ʼಪ್ರಾಣ ಕೊಟ್ಟೇವು, ಭೂಮಿ ಬಿಡೆವುʼ ಎಂಬ ನಾಮಫಲಕಗಳನ್ನು ಹಾಕಲಾಗಿತ್ತು. ಬಿಎಂಐಸಿ ವಿರೋಧಿ ಒಕ್ಕೂಟವು ಬೆಂಗಳೂರು (ಇಂದಿನ ರಾಮನಗರ ಜಿಲ್ಲೆಯೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಭಾಗವಾಗಿತ್ತು), ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಸಕ್ರಿಯವಾಗಿ ನಿರಂತರವಾಗಿ ಜನಜಾಗೃತಿ ಉಂಟು ಮಾಡಿತ್ತು ಎಂದು ಹೇಳಿದೆ.
ಅಂದು ಅಸ್ತಿತ್ವದಲ್ಲಿದ್ದ ರಸ್ತೆಗಳನ್ನೇ ಅಭಿವೃದ್ಧಿ ಮಾಡಬಹುದೆಂದೂ, ಇದು ರಸ್ತೆಯ ಹೆಸರಿನಲ್ಲಿ ಭೂಮಿ ಕಬಳಿಸುವ ಯೋಜನೆಯಾಗಿದೆಯೆಂದೂ ನಾವು ಮುಂದಿಟ್ಟ ಪ್ರತಿಪಾದನೆ ಇಂದು ನಿಜವಾಗಿದೆ. ಅಂದಿನ ಎರಡೂ ರಾಜ್ಯ ಹೆದ್ದಾರಿಗಳು ನಂತರದಲ್ಲಿ ಅಭಿವೃದ್ಧಿಗೊಂಡವು. ರಾಜ್ಯ ಹೆದ್ದಾರಿ 86 (ಮಳವಳ್ಳಿ – ಕನಕಪುರ ಮಾರ್ಗ) ರಾಷ್ಟ್ರೀಯ ಹೆದ್ದಾರಿಯಾದರೆ, ರಾಜ್ಯ ಹೆದ್ದಾರಿ 17 (ರಾಮನಗರ – ಮಂಡ್ಯ ಮಾರ್ಗ) ಆರು ಪಥಗಳ ರಸ್ತೆಯಾಯಿತು. ರೈಲ್ವೇ ಮಾರ್ಗ ಜೋಡಿ ಮಾರ್ಗವಾಯಿತು. ಇವ್ಯಾವುವೂ ಸಾಧ್ಯವೇ ಇಲ್ಲವೆಂದು ಯೋಜನೆಯ ಮಾಲೀಕ ಅಶೋಕ್ ಖೇಣಿ ಹೇಳಿದ್ದರು. ವಾಸ್ತವದಲ್ಲಿ ಈ ರಸ್ತೆ ಹೆಸರಿನಲ್ಲಿ ಐದು ಟೌನ್ಶಿಪ್ ಮಾಡಿ ಸುಲಭದಲ್ಲಿ ರಿಯಲ್ ಎಸ್ಟೇಟ್ ದಂಧೆ ನಡೆಸುವುದು ಅವರ ಉದ್ದೇಶವಾಗಿತ್ತು. ಅದನ್ನೇ ಅವರು ಬೆಂಗಳೂರಿನ ಅರೆ ಹೊರವರ್ತುಲ ರಸ್ತೆ – ನೈಸ್ ರಸ್ತೆಯ ನೆಪದಲ್ಲಿ ಮಾಡಿದ್ದು. ಉದ್ದಕ್ಕೂ ಈ ಯೋಜನೆಯಿಂದ ರೈತರಿಗೆ ಇನ್ನಿಲ್ಲದ ಸಂಕಷ್ಟವಾಗಿದೆ ಎಂದು ಆರೋಪಿಸಿದೆ.
ಈಗ ಅವೆಲ್ಲದರ ಆಚೆಗೆ ಬೆಂಗಳೂರು – ಮೈಸೂರು ನಡುವೆ ಇಂದು ಒಂದು ಎಕ್ಸ್ಪ್ರೆಸ್ ಹೈವೇ ಸಹಾ ಆಗಿದೆ. ಉಪಮುಖ್ಯಮಂತ್ರಿಗಳು ಹೇಳಿದಂತೆ ಈ ಹೈವೇಯಲ್ಲಿ ಕೆಲವು ದೋಷಗಳಿರುವುದು ಮೇಲ್ನೋಟಕ್ಕೇ ಕಾಣುತ್ತಿದೆ. ಆದರೆ, ಅದಕ್ಕೆ ಪರಿಹಾರ ಬಿಎಂಐಸಿ ರಸ್ತೆಯಲ್ಲ. ಹಾಲಿ ಇರುವ ಮೂರು ರಸ್ತೆಗಳನ್ನು ಸರಿ ಮಾಡಿಕೊಳ್ಳುವುದು ಮತ್ತು ರೈಲ್ವೇ ಮಾರ್ಗದ ಇನ್ನಷ್ಟು ಸದುಪಯೋಗ. ಅದನ್ನು ಹೊರತುಪಡಿಸಿ ಟೌನ್ಶಿಪ್ ಹೆಸರಲ್ಲಿ ಇನ್ನಷ್ಟು ಭೂಮಿ ಕಬಳಿಸುವ ನೈಸ್ ಕಂಪೆನಿಯ ದುರುದ್ದೇಶಕ್ಕೆ ಸರ್ಕಾರ ಮಣೆ ಹಾಕಬಾರದು. ಬದಲಿಗೆ ಈ ಯೋಜನೆಯಡಿ ಬೆಂಗಳೂರಿನ ಸುತ್ತ ವಶಪಡಿಸಿಕೊಂಡಿರುವ ಹೆಚ್ಚುವರಿ ಭೂಮಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು. ಈ ಯೋಜನೆಯ ಹೆಸರಿನಲ್ಲಿ 177 ಹಳ್ಳಿಗಳ ರೈತರಿಗೆ ಕೊಟ್ಟಿರುವ ಸಂಕಷ್ಟಕ್ಕೆ ಅವರಿಗೆ ಪರಿಹಾರ ನೀಡಬೇಕೆಂದು ಎಂದು ಆಗ್ರಹಿಸಿದೆ.