ಗೋಪಾಲ್ ಜೋಶಿ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ; ತಪ್ಪು ಮಾಡಿದ್ದರೆ ಕಾನೂನು ಕ್ರಮವಾಗಲಿ; ಸಚಿವ ಪ್ರಹ್ಲಾದ ಜೋಶಿ

Most read

ನವದೆಹಲಿ: ನನಗೆ ಸಹೋದರಿಯೇ ಇಲ್ಲ ಮತ್ತು ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸ್ಪಷ್ಟಪಡಿಸಿದ್ದಾರೆ.

ನವದೆಹಲಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ, ಬೆಂಗಳೂರಿನಲ್ಲಿ ದಾಖಲಾಗಿರುವ ಬಿಜೆಪಿ ಟಿಕೆಟ್ ವಂಚನೆ ಪ್ರಕರಣದ ಬಗ್ಗೆ ಹೀಗೆ ಸ್ಪಷ್ಟನೆ ನೀಡಿದರು.

ಮೊದಲನೆಯದಾಗಿ ನನಗೆ ಯಾರೂ ಸಹೋದರಿ ಇಲ್ಲ. ಇನ್ನು, ನನ್ನ ತಾಯಿಗೆ ಗೋಪಾಲ್ ಜೋಶಿ ಸೇರಿ ನಾಲ್ವರು ಮಕ್ಕಳು. ಆದರೆ, ಗೋಪಾಲ್ ಜೋಶಿ ಅವರೊಂದಿಗೆ ಕಳೆದ 32 ವರ್ಷಗಳಿಂದ ತಮ್ಮ ಸಂಪರ್ಕ, ಸಂಬಂಧವಿಲ್ಲ ಎಂದು ಆರೋಪವನ್ನು ತಳ್ಳಿ ಹಾಕಿದರು.

ಗೋಪಾಲ್ ಜೋಶಿ ಮಾತ್ರವಲ್ಲ ಯಾರೇ ತಮ್ಮ ಕೆಲಸ ಕಾರ್ಯಗಳಿಗೆ ನನ್ನ ಹೆಸರು ದುರುಪಯೋಗ ಪಡಿಸಿಕೊಳ್ಳುತ್ತಿದ್ದರೆ ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಪ್ರಹ್ಲಾದ ಜೋಶಿ ಪುನರುಚ್ಚರಿಸಿದರು.

ಯಾರೊಂದಿಗೂ ನನ್ನ ಹೆಸರು ಉಲ್ಲೇಖಿಸದಂತೆ 2013ರಲ್ಲೇ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್‌ ತಡೆಯಾಜ್ಞೆ ನೀಡಿದೆ. ನ್ಯಾಯಾಲದ ಅಫಿಡವಿಟ್ ನಲ್ಲಿ ಅದರ ವಿವರವಿದೆ ಎಂದು ದಾಖಲೆ ಸಮೇತ ಸ್ಪಷ್ಟನೆ ನೀಡಿದರು ಪ್ರಪ್ರಹ್ಲಾದ ಜೋಶಿ.

ಇನ್ನು, ಬೆಂಗಳೂರಿನಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ವಿಜಯಲಕ್ಷ್ಮಿ ನನ್ನ ಸಹೋದರಿ ಎಂದು ಉಲ್ಲೇಖಿಸಿದ್ದಾರೆ. ವಾಸ್ತವವಾಗಿ ನನಗೆ ಸಹೋದರಿಯೇ ಇಲ್ಲ. ಇದನ್ನೆಲ್ಲ ನೋಡಿದರೆ ಎಲ್ಲ ಬೋಗಸ್ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ ಎಂದು ಹೇಳಿದರು.

ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಗೋಪಾಲ್ ಜೋಶಿ ಹಣ ಪಡೆದಿದ್ದಾರೋ ಇಲ್ಲವೋ ಗೊತ್ತಿಲ್ಲ. ಇದು ತನಿಖೆಯಿಂದ ಸಾಬೀತಾಗಬೇಕಿದೆ ಅಷ್ಟೇ ಎಂದು ಪ್ರಹ್ಲಾದ ಜೋಶಿ ಪ್ರತಿಕ್ರಿಯಿಸಿದರು. ಈ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷ ಅತ್ಯಂತ ಬೌದ್ಧಿಕ ದಿವಾಳಿತನ ಪ್ರದರ್ಶನ ಮಾಡುತ್ತಿದೆ ಎಂದು ಜೋಶಿ ಕಿಡಿ ಕಾರಿದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿಯನ್ನು ಬಂಧಿಸಬೇಕೆನ್ನುವ ಮೂಲಕ ಕಾಂಗ್ರೆಸ್ ಮುಠ್ಠಾಳತನ ತೋರುತ್ತಿದೆ. ಸತ್ಯಾಸತ್ಯತೆ ವಿಮರ್ಶೆ ಮಾಡದೆ ಒಂದು ರೀತಿ ಹುಂಬತನ ಪ್ರದರ್ಶಿಸುತ್ತಿದೆ ಎಂದು ಲೇವಡಿ ಮಾಡಿದರು. ಕಳೆದ 25 ವರ್ಷಗಳಿಂದ ರಾಜಕೀಯ ಜೀವನದಲ್ಲಿ ಇದ್ದೇನೆ. ಒಂದು ಕಾಲದಲ್ಲಿ “ಕೋಲ್ ಎಂದರೆ ಭ್ರಷ್ಟಾಚಾರ, ಹಗರಣದ್ದೇ ಸದ್ದು ಮಾಡುತ್ತಿತ್ತು. ಯಾವತ್ತೂ ಕೈ ಮಸಿ ಮಾಡಿಕೊಂಡಿಲ್ಲ. ಇಂದಿಗೂ ಶುದ್ಧ ಹಸ್ತನಾಗಿದ್ದೇನೆ ಎಂದು ಸಚಿವ ಪ್ರಹ್ಲಾದ ಜೋಶಿ ಕಾಂಗ್ರೆಸ್ಸಿಗರಿಗೆ ತಿರುಗೇಟು ನೀಡಿದರು.

More articles

Latest article