ಬೆಂಗಳೂರು ಸಮೀಪ 2ನೇ ವಿಮಾನ ನಿಲ್ದಾಣ: ಡಿಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ

Most read

ರಾಜಧಾನಿ ಬೆಂಗಳೂರಿನ ಸಮೀಪ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನಲ್ಲಿ ಇಂದು ಸಭೆ ನಡೆಸಿದರು. ಈ ಸಭೆಯಲ್ಲಿ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಮತ್ತು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಉಪಸ್ಥಿತರಿದ್ದರು.


ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾತಾರಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಒತ್ತಡ ಹೆಚ್ಚುತ್ತಿದ್ದು ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣವನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ. ಆದರೆ ಸ್ಥಳ ನಿಗದಿಯಾಗಿಲ್ಲ. ನೆಲಮಂಗಲ, ದಾಬಸ್ ಪೇಟೆ , ಶಿರಾ, ಮಾಗಡಿ, ಕನಕಪುರ ಚಿತ್ರದುರ್ಗ ಹೀಗೆ ಹಲವು ಸ್ಥಳಗಳ ಹೆಸರು ಮುನ್ನಲೆಗೆ ಬಂದಿವೆ. ಆದರೆ ಯಾವುದೇ ಸ್ಥಳವನ್ನು ಅಂತಿಮಗೊಳಿಸಲಾಗಿಲ್ಲ. ಈ ನಿಟ್ಟಿನಲ್ಲಿ ಇನ್ನೂ ಸಾಧಕ ಬಾದಕಗಳನ್ನು ಕುರಿತು ಚರ್ಚೆ ನಡೆಯುತ್ತಿದೆ.

ಕೇಂದ್ರ ಸರ್ಕಾರ ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ನಡುವೆ ಮಾಡಿಕೊಳ್ಳಲಾಗಿರುವ ಒಪ್ಪಂದದ ಪ್ರಕಾರ 2033ರವರೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವ್ಯಾಪ್ತಿಯ 150 ಕಿಮೀ ಸುತ್ತ ಮತ್ತೊಂದು ವಿಮಾನ ನಿಲ್ದಾಣವನ್ನು ಸ್ಥಾಪಿಸುವಂತಿಲ್ಲ. ಈಗಿನಿಂದಲೇ ತಯಾರಿ ನಡೆಸಿದರೆ ತ್ವರಿತಗತಿಯಲ್ಲಿ ಮತ್ತೊಂದು ವಿಮಾನ ನಿಲ್ದಾಣ ಸ್ಥಾಪನೆ ತುರ್ತಾಗಿ ಆಗಲಿದೆ ಎನ್ನುವುದು ಸರ್ಕಾರದ ಅಭಿಪ್ರಾಯವಾಗಿದೆ.

150 ಕಿಮೀ ವ್ಯಾಪ್ತಿಯಲ್ಲಿ ಮತ್ತೊಂದು ವಿಮಾನ ನಿಲ್ದಾಣವನ್ನು ಸ್ಥಾಪಿಸಬಾರದು ಎಂಬ ಷರತ್ತು ಇರುವುದು ನಿಜ. ಈಗಿನಿಂದಲೇ ಕಾರ್ಯಪ್ರವೃತರಾದರೆ ಮುಂದಿನ 8 ವರ್ಷಗಳಲ್ಲಿ ಪ್ರಗತಿ ಸಾಧಿಸಬಹುದು ಎಂಬ ಉದ್ದೇಶದಿಂದ ತಯಾರಿ ನಡೆಸಿದ್ದೇವೆ ಎಂದು ಸರ್ಕಾರದ ಅಭಿಪ್ರಾಯವಾಗಿದೆ.

ಲಾಬಿ ಆರಂಭಿಸಿದ ಸಚಿವರು, ಶಾಸಕರು:

ಎರಡನೇ ವಿಮಾನ ನಿಲ್ದಾಣದ ಚರ್ಚೆ ಮುನ್ನೆಲೆಗೆ ಬರುತ್ತಿದ್ದಂತೆ ಸಚಿವರು ಮತ್ತು ಶಾಸಕರು ತಮ್ಮ ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಸ್ಥಾಪಿಸುವಂತೆ ಸರ್ಕಾರದ ಮೇಲೆ ಒತ್ತಡ ಆರಂಭಿಸಿದ್ದಾರೆ. ತುಮಕೂರು ಜಿಲ್ಲೆಯ ಕೊರಟಗೆರೆ ಕ್ಷೇತ್ರದ ಶಾಸಕರೂ ಆಗಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ತುಮಕೂರು ಜಿಲ್ಲೆಯ ಶಿರಾ ಅಥವಾ ಪಾವಗಡ ಮತ್ತು ಚಿತ್ರದುರ್ಗದ ನಡುವೆ ಸ್ಥಾಪಸುವಂತೆ ಹೇಳುತ್ತಿದ್ದಾರೆ. ಈ ಭಾಗದಲ್ಲಿ ವಿಮಾನ ನಿಲ್ದಾಣಕ್ಕೆ ಬೇಕಾದ 8000 ಎಕರೆ ಜಮೀನು ಲಭ್ಯ ಎನ್ನುವುದು ಅವರ ವಾದವಾಗಿದೆ.ಮತ್ತೊಂದು ಕಡೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಿಡದಿ ಅಥವಾ ಹಾರೋಹಳ್ಳಿ ಸಮೀಪ ಸ್ಥಾಪಿಸುವಂತೆ, ಮಾಗಡಿ ಶಾಸಕ ಬಾಲಕೃಷ್ಣ ಅವರು ಮಾಗಡಿ, ಸೋಲೂರು ಅಥವಾ ದಾಬಸ್ ಪೇಟೆ ಬಳಿ ಸ್ಥಾಪಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಎರಡು ವಿಮಾನ ನಿಲ್ದಾಣಗಳ ನಡುವೆ 150 ಕಿಮೀ ಅಂತರವಿರಲೇಬೇಕೆನ್ನುವುದು ಕಡ್ಡಾಯವೇನಲ್ಲ. ಮುಂಬೈನ ಎರಡು ನಿಲ್ದಾಣಗಳ ನಡುವೆ ಕೇವಲ 36 ಕಿಮೀ ಅಂತರವಿದೆ. ನ್ಯೂಯಾರ್ಕ್ ಲಂಡನ್ ನಗರಗಳಲ್ಲಿಯೂ ಅಂತಹ ಹೆಚ್ಚಿನ ಅಂತರವೇನಿಲ್ಲ ಎನ್ನುವುದನ್ನು ಗಮನಿಸಬೇಕಾಗುತ್ತದೆ.

ವಿಮಾನ ನಿಲ್ದಾಣ ಸ್ಥಾಪನೆಗೆ ಹತ್ತು ವರ್ಷಗಳ ತಯಾರಿಯ ಅವಶ್ಯಕತೆ ಇರುತ್ತದೆ. ಹತ್ತಾರು ಪ್ರಕ್ರಿಯೆಗಳನ್ನು ಪೂರಣಗೊಳಿಸಬೇಕಾಗುತ್ತದೆ. ಪೂರ್ವಭಾವಿ ಕೆಲಸಗಳೇ ವರ್ಷಗಟ್ಟಲೆ ಹಿಡಿಯತ್ತದೆ. ಭೂ ಮಾಲೀಕರಿಗೆ ಪರಿಹಾರ ವಿತರಿಸಬೇಕಾಗುತ್ತದೆ. ಆದ್ದರಿಂದ ಈಗಿನಿಂದಲೇ ತಯಾರಿ ಆರಂಭಿಸಲಾಗಿದೆ ಎಂದು ಸರ್ಕಾರದ ಮೂಲಗಳು ಹೇಳುತ್ತಿವೆ.

More articles

Latest article