ಮಳೆಯಿಂದಾಗುವ ಸಮಸ್ಯೆಗಳನ್ನು ತಡೆಯಲು ಸೂಕ್ತ ಕ್ರಮ ವಹಿಸುವಂತೆ 8 ವಲಯಗಳಿಗೂ ಬಿಬಿಎಂಪಿ ಸೂಚನೆ

Most read

ಬೆಂಗಳೂರು ನಗರದಲ್ಲಿ ನಿನ್ನೆಯಿಂದ ಮಳೆಯಾಗುತ್ತಿದ್ದು, ಅದರಿಂದ ಪಾಲಿಕೆಯ 8 ವಲಯಗಳಲ್ಲಿ ಪ್ರಮುಖ ಸಮಸ್ಯೆಗಳಾಗಿರುವ ಹಾಗೂ ಅದಕ್ಕೆ ತೆಗೆದುಕೊಂಡಿರುವ ಕ್ರಮಗಳನ್ನು ವಲಯವಾರು ತಿಳಿಸಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.

ವಲಯವಾರು ವರದಿ ಇಂತಿವೆ:-

ಯಲಹಂಕ ವಲಯ:

ಯಲಹಂಕ ವಲಯ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ಇದರಿಂದ ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್ ನಲ್ಲಿ ನೀರು ನಿಂತಿದೆ. ಅಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ನೀರು ತೆರವುಗೊಳಿಸಲು 13 ಪಂಪ್ ಗಳನ್ನಿಟ್ಟು ತೆರವುಗೊಳಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಪಾಲಿಕೆ ಹಾಗೂ ಅಗ್ನಿಶಾಮಕ ಅಧಿಕಾರಿ/ಸಿಬ್ಬಂದಿಗಳು ಸ್ಥಳದಲ್ಲಿಯೇ ಇದ್ದು ಸಮಸ್ಯೆಯನ್ನು ಬಗೆಹರಿಸುವ ಕೆಲಸ ಮಾಡುತ್ತಿದ್ದಾರೆ.

ರಮಣಶ್ರೀ ಕ್ಯಾಲಿಫೋರ್ನಿಯಾ ಲೇಔಟ್ ನಲ್ಲಿ ನಿಂತಿದ್ದ ನೀರನ್ನು ಪಂಪ್ ಮೂಲಕ ತೆರವುಗೊಳಿಸಲಾಗಿದೆ. ಇನ್ನು ನಿನ್ನೆ ಜೋರು ಮಳೆಯಿಂದಾಗಿ ಫಾತಿಮಾ ಲೇಔಟ್, ಬದ್ರಪ್ಪ ಲೇಔಟ್ ಸೇರಿದಂತೆ ಇನ್ನಿತರೆ ಪ್ರದೇಶದಲ್ಲಿ ಮನೆಗಳಿಗೆ ನೀರು ನುಗ್ಗಿರುವಂತಹ ಸ್ಥಳಗಳಿಗೆ ಅಧಿಕಾರಿಗಳು ಭೇಟಿ ನೀಡಿ ಸಮೀಕ್ಷೆ ನಡೆಸುವ ಕಾರ್ಯ ನಡೆಯುತ್ತಿದ್ದು, ಶೀಘ್ರ ಅರ್ಹ ಫಲಾನುಭವಿಗಳಿಗೆ ಪರಿಹಾರ ನೀಡಲಾಗುವುದು.

ಮಹದೇವಪುರ ವಲಯ:

ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಗೆದ್ದಲಹಳ್ಳಿ ಹಾಗೂ ಸಾಯಿ ಲೇಔಟ್ ನಲ್ಲಿ ರಾಜಕಾಲುವೆಯಲ್ಲಿ ನೀರಿನ ಹರಿವಿನ ಮಟ್ಟ ಹೆಚ್ಚಾಗಿದ್ದು, ಇದರಿಂದ ಬಡಾವಣೆಯಲ್ಲಿ ನೀರು ನಿಂತಿದೆ. ಮನೆಗಳಿಗೆ ನೀರು ನುಗ್ಗಿರುವಂತಹ ನಿವಾಸಿಗಳನ್ನು ಹೋಟೆಲ್ ನಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದೆ.

ಇನ್ನು ಬೆಸ್ಲಿನ್ ಗಾರ್ಡನ್, ಸಪ್ತಗಿರಿ ಲೇಔಟ್, ಚಿನ್ನಪ್ಪನಹಳ್ಳಿಯ ರಸ್ತೆ, ಬಳಗೆರೆ ರಸ್ತೆ, ಸಕ್ರಾ ಆಸ್ಪತ್ರೆಯ ರಸ್ತೆ, ಸರ್ಜಾಪುರ ರಸ್ತೆಯ ಜಿನ್ನಸಂದ್ರ ಜಂಕ್ಷನ್, ಪಣತ್ತೂರು ರೈಲ್ವೆ ಕೆಳಸೇತುವೆ ಹಾಗೂ ವಿಬ್‌ಗಯಾರ್ ಸ್ಕೂಲ್ ರಸ್ತೆಯಲ್ಲಿ ನಿಂತಿದ್ದ ನೀರನ್ನು ಪಂಪ್ ಮೂಲಕ ತೆರವುಗೊಳಿಸಲಾಗಿದ್ದು, ಇಂದು ಮಳೆಯಾಗುವ ಹಿನ್ನೆಲೆಯಲ್ಲಿ ಜಲಾವೃತ ವಾಗುವ ಸ್ಥಳಗಳಲ್ಲಿ ಸಿಬ್ಬಂದಿ ಸನ್ನದ್ಧರಾಗಿದ್ದಾರೆ.

ಪಶ್ಚಿಮ ವಲಯ:

ಓಕಳೀಪುರಂ ಅಷ್ಟಪಥ ಕಾರಿಡಾರ್ ನಲ್ಲಿ ರೈಲ್ವೆ ಇಲಾಖೆಯಿಂದ ಕಾಮಗಾರಿ ಪೂರ್ಣಗೊಂಡಿದ್ದು, ಆ ಸ್ಥಳದಲ್ಲಿ ಡ್ರೆöÊನ್ ಮಾಡುವ ಕಾಮಗಾರಿ ಬಾಕಿಯಿರುವುದರಿಂದ ನೀರು ನಿಲ್ಲುತ್ತಿದೆ. ಆದ್ದರಿಂದ ಪರ್ಯಾಯವಾಗಿ ಪಂಪ್ ಇಟ್ಟು ನೀರುನ್ನು ತೆರವುಗೊಳಿಸುವ ಕೆಲಸ ಮಾಡುವ ಮಾಡಲಾಗುತ್ತಿದೆ.

ದಕ್ಷಿಣ ವಲಯ:

ದಕ್ಷಿಣ ವಲಯ ವ್ಯಾಪ್ತಿಯಲ್ಲಿ ನಾಯಂಡಹಳ್ಳಿ ಜಂಕ್ಷನ್, ದೀಪಾಂಜಲಿ ನಗರ, ಆರ್.ವಿ ರಸ್ತೆ, ಕದಿರೇನಹಳ್ಳಿ, ಔಟರ್ ರಿಂಗ್ ರಸ್ತೆ, ಮಡಿವಾಳ ಕೆಳಸೇತುವೆ, ಜೆ.ಸಿ ರಸ್ತೆ(ಲಾಲ್ ಬಾಗ್ ಹತ್ತಿರ) ನೀರು ನಿಂತಿರುವ ಸಮಸ್ಯೆಯನ್ನು ಬಗೆಹರಿಸಲಾಗಿದೆ.

ರಾಜರಾಜೇಶ್ವರಿ ನಗರ:

ರಾಜರಾಜೇಶ್ವರಿ ನರಗರ ವ್ಯಾಪ್ತಿಯಲ್ಲಿ ಜೆಪಿ ಪಾರ್ಕ್ ಹಾಗೂ ಲಗ್ಗೆರೆ ರೆಸ್ತೆ ಮೇಲೆ ಜಲಾವೃತವಾಗಿದ್ದು, ಅದನ್ನು ತೆರವುಗೊಳಿಸಲಾಗಿದೆ.

ಪೂರ್ವ ವಲಯ:

ಸರ್ವಜ್ಞನಗರ ವ್ಯಾಪ್ತಿಯಲ್ಲಿ ನಿನ್ನೆ ಸುರಿದ ಜೋರು ಮಳೆಯಿಂದಾಗಿ ರಾಜಕಾಲುವೆಯಲ್ಲಿ ಹಿಮ್ಮುಖವಾಗಿ ನೀರು ಚಲಿಸಿದ್ದ ಪರಿಣಾಮ ಕೆಲ ರಸ್ತೆಗಳಲ್ಲಿ ನೀರು ನಿಂತಿದ್ದು, ಎಲ್ಲವನ್ನೂ ತೆರವುಗೊಳಿಸಲಾಗಿದೆ. ಜೊತೆಗೆ ಇಂದಿರಾನಗರದ 17ನೇ ಸಿ ಮತ್ತು ಡಿ ಕ್ರಾಸ್ ನಲ್ಲಿ ಜಲಮಂಡಳಿಯ ಪೈಪ್‌ಲೈನ್ ಬ್ಲಾಕೇಜ್ ಆಗಿರುವ ಕಾರಣ ಒಳಚರಂಡಿಯಿಂದ ನೀರು ಹೊರಬರುತ್ತಿದ್ದು, ಅದನ್ನು ಜಲಮಂಡಳಿ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಯನ್ನು ಬಗೆಹರಿಸಲಾಗಿರುತ್ತದೆ.

ಬೊಮ್ಮನಹಳ್ಳಿ ವಲಯ:

ಬೊಮ್ಮನಗಳ್ಳಿ ವಲಯದ ಹರಳೂರು ಬಳಿಯ ಸಿಲ್ವರ್ ಕೌಂಟ್ ರಸ್ತೆ, ಹುಳಿಮಾವು ಕೆರೆ ಪಕ್ಕದ ರಸ್ತೆಯಲ್ಲಿ, ಹೆಚ್.ಎಸ್.ಆರ್ ಸೆಕ್ಟರ್ 7 ರಸ್ತೆಯಲ್ಲಿ ಜಲಾವೃತವಾಗಿದ್ದು, ಆ ಸಮಸ್ಯೆಯನ್ನು ಕೂಡಲೆ ಬಗೆಹರಿಸಲಾಗಿದೆ.

ದಾಸರಹಳ್ಳಿ ವಲಯ:

ದಾಸರಹಳ್ಳಿ ವಲಯ ವ್ಯಾಪ್ತಿಯ ನಿಸರ್ಗ ಲೇಔಟ್ ನಲ್ಲಿ ನೀರುಗಾಲುವೆ ಬ್ಲಾಕ್ ಆಗಿದ್ದ ಪರಿಣಾಮ ನಿನ್ನೆ ಸುರಿದ ಮಳೆಗೆ ರಸ್ತೆಗಳಲ್ಲಿ ನೀರು ನಿಂತಿದ್ದು, ನೀರು ಹರಿವಿಕೆಗಾಗಿ ಪರ್ಯಾಯವಾಗಿ ಕಚ್ಚಾ ಡ್ರೆöÊನ್ ಮಾಡಿ ನೀರು ಹರಿದು ಹೋಗುವಂತೆ ಮಾಡಲಾಗಿದೆ. ಇಂದು ನೀರುಗಾಲುವೆನ್ನು ಜೆಸಿಬಿ ಮೂಲಕ ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲಾಗುತ್ತಿದೆ.

ನಗರದ ಎಲ್ಲಾ ವಲಯ ವ್ಯಾಪ್ತಿಯಲ್ಲಿ ಅಧಿಕಾರಿ/ಸಿಬ್ಬಂದಿಗಳು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ನಿಯಂತ್ರಣ ಕೊಠಡಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ನಾಗರೀಕರಿಗೆ ಯಾವುದೇ ರೀತಿಯ ಸಮಸ್ಯೆಯಾದರೂ ಪಾಲಿಕೆಯ ಸಹಾಯವಾಣಿ ಸಂಖ್ಯೆಯಾದ 1533ಗೆ ಕರೆ ಮಾಡಿ ದೂರು ನೀಡಬಹುದಾಗಿದೆ.

More articles

Latest article