ಕ್ರಿಪ್ಟೋಕರೆನ್ಸಿ ಮೋಸದ ಜಾಲಕ್ಕೆ ಇವರೇ ಟಾರ್ಗೆಟ್!;‌ ಇಂತಹ ಆಮಿಷಗಳಿಂದ ಪಾರಾಗುವುದು ಹೇಗೆ?

Most read

ಕ್ರಿಪ್ಟೊಕರೆನ್ಸಿ, ಬಿಟ್‌ ಕಾಯಿನ್‌ ಮೂಲಕ ಹಣ ದ್ವಿಗುಣಗೊಳಿಸುವ ಮೋಸದ ಜಾಲಗಳಲ್ಲಿ ಸಿಲುಕಬೇಡಿ ಎಂದು ಪೊಲೀಸರು ಆಗಾಗ್ಗೆ ಅರಿವು ಮೂಡಿಸುತ್ತಿದ್ದರೂ ಸಾರ್ವಜನಿಕರು ಅದರಲ್ಲೂ ಸುಶಿಕ್ಷಿತರೇ ಈ ಮೋಸದ ಜಾಲಕ್ಕೆ ಬಲಿಯಾಗುತ್ತಿರುವುದು ದುರಂತ.

ಇಂತಹುದೇ ಹಗರಣ ನೆರೆಯ ತೆಲಂಗಾಣದಲ್ಲಿ ನಡೆದಿದೆ. ಸುಮಾರು 5000 ಸಾರ್ವಜನಿಕರು ಈ ಹಗರಣದಲ್ಲಿ ಹೂಡಿಕೆ ಮಾಡಿ ಮೋಸ ಹೋಗಿರುವುದಾಗಿ ತಿಳಿದು ಬಂದಿದೆ. ಸುಮಾರು 50 ಕೋಟಿ ರೂ.ಗಳ ಹಗರಣ ಇದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎರಡನೇ ಕಂತಿನಲ್ಲಿ ಈ ವಂಚನೆಯಲ್ಲಿ ಭಾಗಿಯಾಗಿದ್ದ ಮೂವರು ಶಿಕ್ಷಕರನ್ನು ನಿರ್ಮಲ್‌ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ದಾಸರಿ ರಮೇಶ್‌, ಬೊಮ್ಮಾಡಿ ಧನುಂಜಯ್‌, ಮತ್ತು ಕಿ.ರಂ. ವೆಂಕಟೇಶ್‌ ಗೌಡ್‌ ಬಂಧಿತ ಆರೋಪಿಗಳು. ಇವರ ಬಂಧನಕ್ಕೂ ಮೊದಲು ಹಲವಾರು ಆರೋಪಿಗಳನ್ನು ಬಂಧಿಸಲಾಗಿತ್ತು.‌ ನಿರ್ಮಲ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಜಾನಕಿ ಶರ್ಮೀಳಾ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಕೈಗೊಂಡಿದ್ದಾರೆ.

ಆರೋಪಿಗಳು ಅತ್ಯಾಧುನಿಕ ತಂತ್ರಜ್ಞಾವನ್ನು ಬಳಸಿಕೊಂಡು ಯು ಬಿಟ್‌ ಕಾಯಿನ್‌ ನಲ್ಲಿ ಹೂಡಿಕೆ ಮಾಡಿದರೆ ಕಡಿಮೆ ಅವಧಿಯಲ್ಲಿ ದುಪ್ಪಟ್ಟು ಹಣ ಗಳಿಸಬಹುದು ಎಂದು ಸಾರ್ವಜನಿಕರನ್ನು ನಂಬಿಸುತ್ತಿದ್ದರು. ಆದರೆ ಈ ಹಗರಣದಿಂದ ಆರೋಪಿಗಳು ಸುಲಭವಾಗಿ ಹಣ ಗಳಿಸುತ್ತಿದ್ದರೇ ಹೊರತು ಹೂಡಿಕೆದಾರರಿಗೆ ಲಾಭವಿರಲಿ, ಅಸಲೂ ಸಿಗುತ್ತಿರಲಿಲ್ಲ. ಆರೋಪಿಗಳು ವಿಶೇಷವಾಗಿ ಸರ್ಕಾರಿ ನೌಕರರು, ಉದ್ಯಮಿಗಳು ಮತ್ತು ಮಧ್ಯಮ ವರ್ಗದ ವ್ಯಕ್ತಿಗಳಿಗೆ ಬಲೆ ಬೀಸುತ್ತಿದ್ದರು. ತಾವು ಮೋಸ ಹೋದ ನಂತರ ಜಿಲ್ಲೆಯ ವಿವಿಧ ಭಾಗಗಳಿಂದ ಅನೇಕ ಸಾರ್ವಜನಿಕರು ದೂರು ನೀಡಿದ ನಂತರ ಈ ಹಗರಣ ಇಡೀ ಜಿಲ್ಲೆಗೆ ವ್ಯಾಪಿಸಿರುವುದು ಬೆಳಕಿಗೆ ಬಂದಿದೆ. ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಈ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾಸ್ಟರ್‌ ಮೈಂಡ್‌ ಯಾರು?

ಬಂಧಿತರು ಮಧ್ಯವರ್ತಿಗಳೇ ಹೊರತು ಹಗರಣದ ರೂವಾರಿಗಳಲ್ಲ. ಇವರಿಗೆಲ್ಲ ಒಮ್ಮ ಮಾಸ್ಟರ್‌ ಮೈಂಡ್‌ ಇದ್ದಾನೆ. ಮಿಲಿಟರಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತನಾಗಿರುವ ಬ್ರಿಜ್‌ ಮೋಹನ್‌ ಸಿಂಗ್‌ ಈ ಹಗರಣದ ರೂವಾರಿ. ಈ ಹಿಂದೆಯೂ ಈತನನ್ನು ಇಂತಹುದೇ ಚಟುವಟಿಕೆಗಳಿಗಾಗಿ ಬಂಧಿಸಲಾಗಿತ್ತು. ಪೊಲೀಸರು ಈಗಾಗಲೇ ಈತನ 11 ಬ್ಯಾಂಕ್‌ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಈ ಹಗರಣದಲ್ಲಿ ಹಣ ಕಳೆದುಕೊಂಡವರು ದೂರು ಸಲ್ಲಿಸಿದರೆ ತನಿಖೆಗೆ ಸಹಕಾರಿಯಾಗುತ್ತದೆ ಎಂದು ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.

ಸೆಪ್ಟಂಬರ್‌ 1ರಂದು ಸೇನೆಯ ನಿವೃತ್ತ ಯೋಧ, ಅಬಕಾರಿ ಇಲಾಖೆ ಸಬ್‌ ಇನ್‌ ಸ್ಪೆಕ್ಟರ್‌, ಪೊಲೀಸ್‌ ಪೇದೆ ಮತ್ತು ಇಬ್ಬರು ಸರ್ಕಾರಿ ಶಿಕ್ಷಕರನ್ನು ಬಂಧಿಸಲಾಗಿತ್ತು. ಇವರೆಲ್ಲರೂ ಸೇರಿಕೊಂಡು ಅಂದಾಜು 5000 ಮಂದಿಯನ್ನು ವಂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ವಂಚನೆ ಹೇಗೆ?

ಅಕ್ಟೋಬರ್‌ 8ರಂದು ಮತ್ತೆ ಮೂವರು ಶಿಕ್ಷಕರಾದ 23 ವರ್ಷದ ವಿನಯ್‌ ಕುಮಾರ್‌ ಎಸ್. ಖಾದ್ಕೆ ಮತ್ತು 28 ವರ್ಷದ ಜಿ.ಎಚ್.ಮಾರುತಿ ಬಂಧಿತ ಶಿಕ್ಷಕರು. ಇವರು ಡಿಜಿಟಲ್‌ ಅರೆಸ್ಟ್‌ ವಂಚನೆಯಲ್ಲಿ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ. ವ್ಯಕ್ತಿಯೊಬ್ಬರಿಗೆ ಕರೆ ಮಾಡಿ ಇವರು ತಮ್ಮನ್ನು ತಾವು ಮುಂಬೈ ಪೊಲೀಸರು ಎಂದು ಪರಿಚಯಿಸಿಕೊಂಡಿದ್ದಾರೆ.

ನಿಮ್ಮ ಆಧಾರ್‌ ಮತ್ತು ಪ್ಯಾನ್‌ ನಂಬರ್‌ ಬಳಸಿಕೊಂಡು ಬ್ಯಾಂಕ್‌ ನಲ್ಲಿ ಖಾತೆ ಆರಂಭಿಸಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಲಾಗಿದೆ. ಇದರಿಂದ ನೀವು ಮೂರರಿಂದ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಬೆದರಿಸಿದ್ದಾರೆ.

ಆರೋಪಿಗಳು ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆಯ ಹೆಸರಿನಲ್ಲಿ ನಕಲಿ ಪತ್ರಗಳನ್ನು ಕಳುಹಿಸಿ, ನಿಮ್ಮ ಬ್ಯಾಂಕ್‌ ಖಾತೆಗಳ ವಿವರ, ಹಣಕಾಸಿನ ವಿವರ, ಆಸ್ತಿಗಳ ವಿವರ, ಠೇವಣಿ, ಶೇರು ಸಂಬಳ ಇತ್ಯಾದಿ ವಿವರಗಳನ್ನು ಹಂಚಿಕೊಳ್ಳುವಂತೆ ಮತ್ತಷ್ಟು ಹೆದರಿಸಿದ್ದಾರೆ.

ತಮ್ಮ ವಿರುದ್ಧ ತನಿಖೆ ನಡೆಯುತ್ತಿದೆ ಎಂದು ಹೆದರಿದ ಅವರು ಆರೋಪಿಗಳ ವಿವಿಧ ಖಾತೆಗಳಿಗೆ ಸುಮಾರು 10.61 ಕೋಟಿ ರೂ.ಗಳನ್ನು ವರ್ಗಾಯಿಸಿದ್ದಾರೆ. ಆರೋಪಿಗಳು ಹೊಂದಿದ್ದ ಜಂಟಿ ಖಾತೆಗಳಿಗೆ ಹಣ ವರ್ಗಾವಣೆಯಾಗಿದೆ. ಟಿಂಕನ್‌ ಟೆಕ್ನಾಲಜೀಸ್‌ ಲಿ. ಕಂಪನಿಯ ಹೆಚ್‌ ಡಿ ಎಫ್‌ ಸಿ ಬ್ಯಾಂಕ್‌ ನ ಖಾತೆಗೆ ರೂ. 4.62 ಕೋಟಿ, ವರ್ಗಾವಣೆಯಾಗಿದೆ. ಆರೋಪಿಗಳು ಕಮೀಷನ್‌ ಆಸೆಗೆ ಮೂರನೇ ವ್ಯಕ್ತಿಯ ನಿರ್ದೇಶನದಂತೆ ಈ ಬ್ಯಾಂಕ್ ಖಾತೆಯನ್ನು ತೆರೆದಿದ್ದಾರೆ.

ಆರೋಪಿಗಳಿಂದ ಎರಡು ಮೊಬೈಲ್‌ ಫೋನ್‌ ವಶಪಡಿಸಿಕೊಳ್ಳಲಾಗಿದೆ. ಕಾನೂನುಬದ್ದವಾಗಿ
ಪೊಲೀಸರು ಫೋನ್‌ ಅಥವಾ ಆನ್‌ ಲೈನ್‌ ಮೂಲಕ ಪೊಲೀಸರು ತನಿಖೆ ನಡೆಸುವುದಿಲ್ಲ. ಇಂತಹ ಕರೆಗಳಿಗೆ ಮರುಳಾಗಬೇಡಿ ಎಂದು ಪೊಲೀಸರು ಮತ್ತೆ ಎಚ್ಚರಿಕೆ ನೀಡಿದ್ದಾರೆ.

ಪಾರಾಗುವುದು ಹೇಗೆ?

ಇಂದು ತೆಲಂಗಾಣದಲ್ಲಿ ನಡೆಯುತ್ತಿರುವ ಈ ಹಗರಣ ನಾಳೆ ರಾಜ್ಯಕ್ಕೂ ವ್ಯಾಪಿಸಿದರೂ ಅಚ್ಚರಿ ಇಲ್ಲ. ಈಗಾಗಲೇ ಇಂತಹ ಡಿಜಿಟಲ್‌ ವಂಚನೆಯ ಜಾಲಗಳಿಗೆ ಮೋಸ ಹೋಗಿ ಕೋಟಿ ಕೋಟಿ ರೂ. ಹಣ ಕಳೆದುಕೊಂಡಿರುವ ಸುದ್ದಿಗಳು ಪ್ರಕಟವಾಗುತ್ತಲೇ ಇವೆ. ಆದರೂ ಸಾರ್ವಜನಿಕರು ಎಚೆತ್ತುಕೊಂಡಿಲ್ಲ. ಅಡ್ಡ ದಾರಿಯಲ್ಲಿ ಹಣ ದುಪ್ಪಟ್ಟು ಮಾಡಲು ಸಾದ್ಯವಿಲ್ಲ. ನೆರೆ ರಾಜ್ಯ ಅಥವಾ ವಿದೇಶಿ ನಂಬರ್‌ ಗಳಿಂದ ಕರೆ ಮಾಡಲಾಗುತ್ತದೆ. ಇಂತಹ ವಂಚನೆಗಳಿಂದ ಸುಲಭವಾಗಿ ಪಾರಾಗುವ ಮಾರ್ಗ ಎಂದರೆ ಅವರು ಇಂಗ್ಲೀಷ್‌ ಅಥವಾ ಹಿಂದಿಯಲ್ಲಿ ಮಾತನಾಡಿದರೆ ನೀವು ಕನ್ನಡದಲ್ಲೇ ಮಾತನಾಡಿ, ಯಾವುದೇ ಕಾರಣಕ್ಕೂ ಬ್ಯಾಂಕ್‌ ಖಾತೆಗಳ ವಿವಿರ ನೀಡಬೇಡಿ ಅಷ್ಟೇ. ಮತ್ತೆ ಅವರು ನಿಮಗೆ ಕರೆ ಮಾಡುವ ಗೋಜಿಗೆ ಹೋಗುವುದಿಲ್ಲ.

More articles

Latest article