ಮುಂಬೈ: ಉದ್ಯಮಿ ರತನ್ ಟಾಟಾ (86) ಬುಧವಾರ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾರೆ. ರತನ್ ಟಾಟಾ ಅವರ ಸಾವಿನಲ್ಲಿ ದೇಶವು ಸ್ವತಂತ್ರ ಭಾರತ ಕಂಡ ಒಬ್ಬ ಅತ್ಯಂತ ಸಂಭಾವಿತ ಹಾಗೂ ಸಜ್ಜನಿಕೆಯ ಕೈಗಾರಿಕೋದ್ಯಮಿಯನ್ನು ಕಳೆದುಕೊಂಡಿದೆ.
ದೇಶವನ್ನು ಕೈಗಾರಿಕೀಕರಣ ಹಾಗೂ ಆಧುನಿಕತೆಯಲ್ಲಿ ಪ್ರಗತಿಯೆಡೆಗೆ ಕೊಂಡಯ್ದ ದೇಶದ ಪ್ರಮುಖ ಕೈಗಾರಿಕಾ ಕಂಪನಿಗಳಲ್ಲಿ ಒಂದಾಗಿದ್ದ ಟಾಟಾ ಸನ್ಸ್ ಕಂಪನಿಯ ಮುಖ್ಯಸ್ಥರೂ ಆಗಿದ್ದ ರತನ್ ನವಲ್ ಟಾಟಾ 1990ರಿಂದ 2012ರ ವರೆಗೆ ಅತಿದೊಡ್ಡ ಕಾಂಗ್ಲೊಮರೇಟ್ ಆಗಿರುವ ಟಾಟಾ ಗ್ರೂಪ್ಸ್ ಅಧ್ಯಕ್ಷರೂ ಆಗಿದ್ದರು. ತಮ್ಮ ಅವಧಿಯಲ್ಲಿ ಟಾಟಾ ಕಂಪನಿ ಸಮೂಹ ಒಂದು ಜಾಗತಿಕ ಮಟ್ಟದ ಕಂಪನಿಯಾಗಿ ಬೆಳೆಯುವಂತೆ ನೋಡಿಕೊಂಡ ಕೀರ್ತಿ ರತನ್ ನವಲ್ ಟಾಟಾರಿಗೆ ಸಲ್ಲುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲೇ ಜೆಮ್ಶೆಡ್ ಜಿ ಟಾಟಾ ಅವರಿಂದ ಸ್ಥಾಪಿತವಾಗಿದ್ದ ಟಾಟಾ ಕಂಪನಿ ಬ್ರಿಟಿಷರ ಕಾಲದಿಂದಲೂ ದೇಶದ ಬಹುದೊಡ್ಡ ಕಂಪನಿಯಾಗಿ ಏಳಿಗೆ ಕಂಡಿದೆ. ಈ ಏಳಿಗೆಯನ್ನು ನಾಗಾಲೋಟಕ್ಕೆ ಕೊಂಡೊಯ್ದವರು ರತನ್ ಟಾಟಾ ಅವರು.
ರತನ್ ಟಾಟಾ ಅವರು ದೇಶದ ಮೊತ್ತಮೊದಲ ದೊಡ್ಡ ಉದ್ದಿಮೆಪತಿಗಳಲ್ಲಿ ಒಬ್ಬರಾಗಿದ್ದ ಜೆಮ್ ಶೆಡ್ ಜಿ ಟಾಟಾ ಅವರ ಮಗನಾಗಿದ್ದ ರತನ್ ಜೀ ಟಾಟಾ ಅವರ ದತ್ತುಮಗ ನವಲ್ ಟಾಟಾ ಅವರ ಮಗನಾಗಿದ್ದರು. ರತನ್ ಟಾಟಾ ಅವರ ಜೈವಿಕ ತಾತರಾಗಿದ್ದ ಹೊರ್ಮುಸ್ಜಿ ಟಾಟಾ ಅವರು ಟಾಟಾ ಕುಟುಂಬದ ರಕ್ತಸಂಬಂಧಿಯಾಗಿದ್ದರು. ರತನ್ ಟಾಟಾಗೆ 10 ವರ್ಷಗಳಾಗಿದ್ದಾಗ ಅವರ ತಂದೆತಾಯಿ ಪ್ರತ್ಯೇಕಗೊಂಡ ಬಳಿಕ ಅವರನ್ನು ಪೊರೆಯುವುದು ಅಜ್ಜ ರತನ್ ಜಿ ಟಾಟಾ ಅವರ ಹೆಂಡತಿ ನವಾಜ್ಬಾಯಿ ಟಾಟಾ. ರತನ್ ಟಾಟಾ ಅವರು 1961ರಲ್ಲಿ ಟಾಟಾ ಸ್ಟೀಲ್ ಕಂಪನಿಯಲ್ಲಿ ಕೆಲಸ ಮಾಡುವ ಮೂಲಕ ಉದ್ಯಮ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು. ಅವರು ಟಾಟಾ ಗ್ರೂಪ್ ಅಧ್ಯಕ್ಷರಾದ ಬಳಿಕ ಟಾಟಾ ಸಮೂಹವು ದೈತ್ಯ ಕಂಪನಿಗಳಾದ ಟೆಟ್ಲೀ, ಜಾಗ್ವಾರ್ ಲ್ಯಾಂಡ್ ರೋವರ್ ಮತ್ತು ಕೋರಸ್ ಕಂಪನಿಗಳನ್ನು ತನ್ನೊಳಗೆ ಸೆಳೆದುಕೊಂಡಿತು. ಈ ಮೂಲಕ ಭಾರತದಾದ್ಯಂತ ಉದ್ಯಮ ಹೊಂದಿದ್ದ ಕಂಪನಿ ವಿಶ್ವದಾದ್ಯಂತ ವಿಸ್ತರಣೆಗೊಂಡಿತು. ಭಾರತದ ಸಾಮಾನ್ಯ ಜನರಿಗೂ ಕೈಗೆಟುಕುವ ದರದಲ್ಲಿ ಕಾರು ಕೊಂಡು ಓಡಿಸುವಂತಾಗಬೇಕು ಎಂಬ ದೃಷ್ಟಿಯೊಂದ ‘ನ್ಯಾನೋ ಕಾರ್’ ಸಿದ್ಧಪಡಿಸಿದ್ದ ಕೀರ್ತಿಯೂ ರತನ್ ಟಾಟಾ ಅವರಿಗೇ ಸಲ್ಲುತ್ತದೆ.
ಉದ್ಯಮದೊಂದಿಗೆ ಲೋಕಕಲ್ಯಾಣದ ಕೆಲಸಗಳಲ್ಲಿಯೂ ಟಾಟಾ ದಾನಶೂರ ಕರ್ಣರೆಂದೇ ಪ್ರಸಿದ್ಧರು. ಅವರು ತಮ್ಮ ಆದಾಯ ಶೇಕಡಾ 60-65ರಷ್ಟುನ್ನು ಚಾರಿಟಿ ಕೆಲಸಗಳಿಗಾಗಿ ದೇಣಿಗೆ ಕೊಡುವ ಮೂಲಕ ತಮ್ಮ ಘನತೆ ಗೌರವವನ್ನು ಹೆಚ್ಚಿಸಿಕೊಂಡಿದ್ದಾರೆ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಅಲ್ಜೀಮರ್ ಖಾಯಿಲೆಯ ಸಂಬಂಧ ಸಂಶೋಧನೆಗೆಂದು ನರವಿಜ್ಞಾನ ವಿಭಾಗಕ್ಕೆ 750 ಕೋಟಿ ರೂಪಾಯಿಗಳನ್ನು ದೇಣಿಗೆಯಾಗಿ ಟಾಟಾ ಸಂಸ್ಥೆ ನೀಡಿದೆ. 1959ರಲ್ಲಿ ವಾಸ್ತುಶಿಲ್ಪ ಅಧ್ಯಯನದಲ್ಲಿ ತಾವು ಪದವಿ ಪಡೆದಿದ್ದ ನ್ಯೂಯಾರ್ಕಿನ ಕಾರ್ನೆಲ್ ವಿಶ್ವವಿದ್ಯಾಲಯಕ್ಕೆ ರತನ್ ಟಾಟಾ 2008ರಲ್ಲಿ 50 ದಶಲಕ್ಷ ಡಾಲರ್ ದೇಣಿಗೆ ನೀಡಿದ್ದರು. ಆ ವಿಶ್ವವಿದ್ಯಾಲಯದ ಇತಿಹಾಸದಲ್ಲೇ ಅಷ್ಟು ದೊಡ್ಡ ಮೊತ್ತವನ್ನು ಯಾರೂ ನೀಡಿರಲಿಲ್ಲ.
ಭಾರತದ ಆರ್ಥಿಕತೆಯನ್ನು ಸಟ್ಟಾ ವ್ಯಾಪಾರವೆಂಬುದು ವಿಪರೀತವಾಗಿ ಆವರಿಸಿಕೊಂಡು ಹಣಕಾಸು ಬಂಡವಾಳದ ಭರಾಟೆ ನಡೆಯುತ್ತಿರುವಾಗಲೂ ನಿಜವಾದ ಆರ್ಥಿಕ ಅಭಿವೃದ್ಧಿಗೆ ಬೇಕಾದ ಉತ್ಪಾದನಾ ಕ್ಷೇತ್ರಕ್ಕೇ ಹೆಚ್ಚಾಗಿ ಅಂಟಿಕೊಂಡು, ಹೆಚ್ಚು ಹೆಚ್ಚು ಉತ್ಪಾದನೆಯ ಮೂಲಕವೇ ಆರ್ಥಿಕ ಅಭಿವೃದ್ಧಿಕೆ ಕೊಡುಗೆ ನೀಡಿದ ರತನ್ ಟಾಟಾ ಉದ್ಯಮ ಜಗತ್ತಿನ ಅತ್ಯಂತ ಸಂಭಾವಿತರಾಗಿ ಗೋಚರಿಸುತ್ತಾರೆ. ಇವರ ಸೇವೆಯನ್ನು ಗೌರವಿಸಿ ಭಾರತ ಸರ್ಕಾರವು 2000ನೇ ಇಸವಿಯಲ್ಲಿ ಪದ್ಮ ಭೂಷಣ ಹಾಗೂ 2008ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ರತನ್ ಟಾಟಾ ಕೊನೆಯವರೆಗೂ ಮದುವೆಯಾಗದೇ ತಮ್ಮ ಸುದೀರ್ಘ ಬದುಕನ್ನು ಒಂಟಿಯಾಗಿಯೇ ಕಳೆದರು. ಈ ಬಗ್ಗೆ 2011ರಲ್ಲಿ ಮಾತನಾಡುತ್ತಾ, “ನಾನು ನಾಲ್ಕು ಸಲ ಮದುವೆಯ ಹತ್ತಿರಕ್ಕೆ ಬಂದು ಮತ್ತೆ ಹಿಂದೆ ಸರಿದಿದ್ದೆ. ಒಂದಲ್ಲಾ ಒಂದು ರೀತಿಯ ಭಯದಿಂದ ನಾನು ಮದುವೆ ಮಾಡಿಕೊಳ್ಳದೇ ಉಳಿದೆ” ಎಂದಿದ್ದರು.