ಬೆಂಗಳೂರು: ಸಂಸದ ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆಯಿಂದ ತೆರವಾಗಿದ್ದ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಬಿಜೆಪಿ ಕಿಶೋರ್ ಕುಮಾರ್ ಅವರನ್ನು ಹೆಸರಿಸಿದೆ.
ಈ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದ ಮಾಜಿ ಕೇಂದ್ರ ಸಚಿವ, ರಾಜ್ಯ ಬಿಜೆಪಿ ಘಟಕದ ನಿಕಟಪೂರ್ವ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಗೆ ಟಿಕೆಟ್ ದೊರೆಯದೇ ಇರುವುದು ಅವರಿಗೆ ನಿರಾಶೆ ತಂದಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ನಳೀನ್ ಕಟೀಲ್ ಅವರಿಗೆ ಟಿಕೆಟ್ ನಿರಾಕರಿಸಿ ಹೊಸಮುಖ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರನ್ನು ಕಣಕ್ಕಿಳಿಸಲಾಗಿತ್ತು. ಇದೀಗ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೂ ಅವರನ್ನು ಪರಿಗಣಿಸಲಾಗಿಲ್ಲ.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿದ್ದಾಗ ಕಾರ್ಯಕ್ರಮವೊಂದರಲ್ಲಿ ತಮ್ಮ ನಾಯಕರ ಹೆಸರುಗಳನ್ನು ಅವರ ಅಭಿಮಾನಿಗಳು ಕೂಗುತ್ತಿದ್ದಾಗ ನಳೀನ್ ಕುಮಾರ್ ಸಿಟ್ಟಿಗೆದ್ದು, “ನಾನು ರಾಜ್ಯಾಧ್ಯಕ್ಷ, ಯಾರ ಹೆಸರು ಕೂಗ್ತೀರೋ ಅವರಿಗೆ ಟಿಕೆಟ್ ಕೊಡಲ್ಲ” ಎಂದು ಅಬ್ಬರಿಸಿದ್ದರು.
ಆದರೆ ವಿಧಾನಪರಿಷತ್ ಸದಸ್ಯ ಸ್ಥಾನದ ಟಿಕೆಟ್ ಬೇಡಿದರೂ ಸ್ವತಃ ಕಟೀಲ್ ಅವರಿಗೇ ಟಿಕೆಟ್ ಸಿಗದೇ ಇರುವುದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.