ಲಾಡು ಪ್ರಕರಣ | ಚಿಲ್ಲರೆ ರಾಜಕಾರಣ?

Most read

ಕಲಬೆರಕೆಯಾಗಿದ್ದ ತುಪ್ಪವನ್ನು ಲಾಡು ತಯಾರಿಗೆ ಬಳಸಲಾಯಿತೇ ಎಂಬ ಬಗ್ಗೆ ಯಾವ ವಿಶ್ವಾಸಾರ್ಹ ಪುರಾವೆಯನ್ನೂ ಮಂಡಿಸಿಲ್ಲ. ಪರೀಕ್ಷೆಯನ್ನು ಅತ್ಯಂತ ವಿಶ್ವಾಸಾರ್ಹ ಎಫ್ ಎಸ್ ಎಲ್ ಹೈದರಾಬಾದ್ ನಲ್ಲಿ ಇರುವಾಗ ಅದನ್ನು ಗುಜರಾತಿನಲ್ಲಿ ಮಾಡಿದ್ದು ಏಕೆ ಎಂಬ ಪ್ರಶ್ನೆಗೆ ಉತ್ತರವಿಲ್ಲ. ತನಿಖೆಗೆ ಸಮಿತಿಯ ನೇಮಕವೂ ಆಗಿಲ್ಲ, ತನಿಖೆಯೂ ಆಗಿಲ್ಲ. ಹೀಗಿರುವಾಗ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಇಂತಹ ಗಂಭೀರ ಆರೋಪದ ಹೇಳಿಕೆಯನ್ನು ನೀಡಬಹುದೇ? ಶ್ರೀನಿವಾಸ ಕಾರ್ಕಳ.

ತಿರುಪತಿ ಲಾಡು ವಿವಾದದ ಬಗ್ಗೆ ಸೂಕ್ತ ತನಿಖೆಯನ್ನಾಗಲೀ, ಅಧಿಕೃತ ಪತ್ರಿಕಾಗೋಷ್ಠಿಯನ್ನಾಗಲೀ ಮಾಡದೆ, ನಂಬಲರ್ಹ ಸಾಕ್ಷ್ಯಾಧಾರ ಮುಂದಿಡದೆ, ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಎಲ್ಲೋ ಒಂದೆಡೆ ಆರೋಪ ಮಾಡಿದ ತಕ್ಷಣ ದೇಶದ ಮಾಧ್ಯಮಗಳು, ಅನೇಕ ರಾಜಕೀಯ ಪಕ್ಷಗಳು ಮುಗಿಬಿದ್ದು ಆ ವಿಷಯವನ್ನು ಎತ್ತಿಕೊಂಡು ಅದರ ಬಗ್ಗೆ ಮನಬಂದಂತೆ ಹೇಳಿಕೆ ನೀಡಲಾರಂಭಿಸಿದವು. ನಿರೀಕ್ಷೆಯಂತೆಯೇ ಕಾಂಗ್ರೆಸ್ ಅನ್ನು, ಮುಸ್ಲಿಮರನ್ನು, ಕ್ರೈಸ್ತ ಮಿಷನರಿಗಳನ್ನು ಹೀಗೆ ಎಲ್ಲರನ್ನೂ ತಮ್ಮ ಅನುಕೂಲದ ಚಿಲ್ಲರೆ ರಾಜಕೀಯಕ್ಕೆ ಎಳೆದುತರಲಾಯಿತು.

ಹೇಳಿಕೆ ಮತ್ತು ಆರೋಪಗಳು ಹೇಗಿದ್ದವೆಂದರೆ ಲಾಡುವಿನಲ್ಲಿ ದನದ ಕೊಬ್ಬು ಮತ್ತಿತರ ಆಕ್ಷೇಪಾರ್ಹ ವಸ್ತುಗಳನ್ನು ಉದ್ದೇಶಪೂರ್ವಕವಾಗಿ ಬಳಸಲಾಗಿತ್ತು, ಅಂತಹ ಲಕ್ಷಾಂತರ ಲಾಡುಗಳನ್ನು ಜನ ಈಗಾಗಲೇ ತಿಂದಾಗಿದೆ ಎಂಬಂತೆ ಬಿಂಬಿಸಲಾಯಿತು. ಕೆಲವರು ತನಿಖೆಗೆ ಆಗ್ರಹಿಸಿ ಕೋರ್ಟ್ ಮೆಟ್ಟಲೇರಿದರು. ದೇಶದ ದೇಗುಲಗಳನ್ನು ಸರಕಾರಿ ನಿಯಂತ್ರಣದಿಂದ ಮುಕ್ತಗೊಳಿಸಬೇಕು ಎಂಬ ಹಳೆಯ ಬೇಡಿಕೆಯ ಅಜೆಂಡಾ ಕೂಡಾ ಮುಂದೆ ಬಂತು. ದೇಗುಲದಲ್ಲಿ ಪರಿಶುದ್ಧಿ ಕಾರ್ಯಕ್ರಮ ನಡೆಯಿತು. ಉಪಮುಖ್ಯಮಂತ್ರಿ ಪವನ್ 11 ದಿನಗಳ ವೃತ ಕೂಡಾ ಕೈಗೊಂಡರು!

ಈ ನಡುವೆ ಸತ್ಯೋತ್ತರ ಯುಗದಲ್ಲಿ ಸತ್ಯದ ಶೋಧನೆ ಯಾರಿಗೂ ಬೇಡವಾಯಿತು. ಯಾರೊಬ್ಬರೂ ತಮ್ಮ ವಿವೇಕವನ್ನು ಬಳಸಿಕೊಂಡು ಈ ವಿಚಾರದಲ್ಲಿ ಕೆಲ ಸರಳ ಪ್ರಶ್ನೆಗಳನ್ನೂ ಕೇಳಿಕೊಳ್ಳುವ ಮತ್ತು ಅದಕ್ಕೆ ಉತ್ತರ ಕಂಡುಕೊಳ್ಳಲು ಯತ್ನಿಸುವ ವ್ಯವಧಾನ ತೋರಲಿಲ್ಲ.

ಆದರೆ ಗದ್ದಲ ಕೊಂಚ ತಣ್ಣಗಾದ ಬಳಿಕ  ಈಗ ಕೆಲವರಾದರೂ ಪ್ರಜ್ಞಾವಂತರು ಅಂತಹ ಗಂಭೀರ ಪ್ರಶ್ನೆಗಳನ್ನು ಕೇಳಲಾರಂಭಿಸಿದರು. ಅವು ಹೀಗಿವೆ-

1.    ತಿರುಪತಿ ದೇಗುಲದಲ್ಲಿ ಲಾಡು ತಯಾರಿಗೆ ಬಳಸುವ ತುಪ್ಪ ಸಹಿತ ಯಾವುದೇ ಉತ್ಪನ್ನವನ್ನು ಸೂಕ್ತ ಪರೀಕ್ಷೆ ನಡೆಸದೆ ಬಳಸುವುದಿಲ್ಲ. ಪರೀಕ್ಷೆ ನಡೆಸಲೆಂದೇ ಅಲ್ಲಿ ಮೂರು ವಿಭಾಗಗಳನ್ನು ಸ್ಥಾಪಿಸಲಾಗಿದೆ. ಈ  ಮೂರು ವಿಭಾಗಗಳು ಈ ಸಾಮಗ್ರಿಗಳನ್ನು ಕಠಿಣ ತಪಾಸಣೆಗೆ ಒಳಪಡಿಸುತ್ತವೆ.

2.    ಮೂರು ವಿಭಾಗಗಳು ತುಪ್ಪದಂತಹ ಉತ್ಪನ್ನಗಳನ್ನು ಪರೀಕ್ಷೆಗೆ ಒಳಪಡಿಸಿದ ಬಳಿಕ ಅವು ಸೂಕ್ತ ಗುಣಮಟ್ಟದ್ದು ಅಲ್ಲ ಎಂದು ಕಂಡು ಬಂದರೆ, ಅವನ್ನು ಅದೇ ದಿನ ತಿರಸ್ಕರಿಸಲಾಗುತ್ತದೆ. ಮಾತ್ರವಲ್ಲ ಆ ಸ್ಯಾಂಪಲ್ ಗಳನ್ನು ಕಲಬೆರಕೆ ವಿರುದ್ಧ ಕ್ರಮಕ್ಕೆ NDDB ಗೆ ಕಳಿಸಲಾಗುತ್ತದೆ. ಲಾಡು ತಯಾರಿಗೆ ಬಳಸಲಾದ ತುಪ್ಪ ಕಲಬೆರಕೆ ಆಗಿತ್ತು ಎನ್ನುವುದಾದರೆ, ತಪಾಸಣೆಯ ಜವಾಬ್ದಾರಿ ಹೊತ್ತ ಆ ಮೂರು ವಿಭಾಗಗಳು ತಮ್ಮ ಕರ್ತವ್ಯವನ್ನು ನಿಭಾಯಿಸಲಿಲ್ಲ ಎಂದಾಗುವುದಿಲ್ಲವೇ?

3.    ಲಾಡು ತಯಾರಿಗೆ ಕಲಬೆರಕೆ ತುಪ್ಪ ಬಳಸಲಾಯಿತೇ, ಇಲ್ಲವೇ ಎಂಬ ಬಗ್ಗೆ ಈಗಲೂ ಖಾತ್ರಿ ಇಲ್ಲ. ತಿರುಮಲದ EO  ‘ನಾವು ತುಪ್ಪ ಕಲಬೆರಕೆ ಆಗಿದ್ದುದನ್ನು ಸಕಾಲದಲ್ಲಿ ಪತ್ತೆ ಹಚ್ಚಿದ್ದೆವು.  ಲಾಡು ತಯಾರಿಗೆ ಆ ತುಪ್ಪವನ್ನು ಬಳಸಿಲ್ಲ’ ಎನ್ನುತ್ತಾರೆ. ಆದರೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಉಪಮುಖ್ಯಮಂತ್ರಿ ಪವನ್ ಕಲ್ಯಾಣ್  ಬೀಫ್ ಕೊಬ್ಬು ಇರುವ 1 ಲಕ್ಷ ಲಾಡನ್ನು ಅಯೋಧ್ಯೆಗೆ ಕೂಡಾ ಕಳುಹಿಸಲಾಗಿತ್ತು ಎನ್ನುತ್ತಾರೆ. ಯಾರನ್ನು ನಂಬಬೇಕು?

4.    ಯಾವುದೇ ವಿಶ್ವಾಸಾರ್ಹ ಸಾಕ್ಷ್ಯಾಧಾರ ಇಲ್ಲದೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ರಾಜಕೀಯ ಎದುರಾಳಿಯ ಮೇಲೆ ಇಂತಹ ಒಂದು ಗಂಭೀರ ಆರೋಪ ಮಾಡಿದ್ದಾದರೂ ಹೇಗೆ? ಇದು ಆಂಧ್ರದಲ್ಲಿ ಕೋಮುಗಲಭೆ ಉಂಟುಮಾಡುವ ಹುನ್ನಾರವೇ? ಅಧಿಕಾರದಲ್ಲಿ ಇರುವ ಇವರು ಕಾನೂನು ರೀತ್ಯಾ ತನಿಖೆಗೆ ಆಗ್ರಹಿಸುವ ಬದಲು 11 ದಿನಗಳ ವೃತ ನಡೆಸುತ್ತಾರಂತೆ! ಇದು ಸಂವಿಧಾನ ರೀತ್ಯಾ ಕೆಲಸ ಮಾಡಬೇಕಾದ ಉಪ ಮುಖ್ಯಮಂತ್ರಿಗಳು ಮಾಡಬೇಕಾದ ಕೆಲಸವೇ?

5.    AR ಡೇರಿ ವಿವರವಾದ ಲ್ಯಾಬ್ ರಿಸಲ್ಟ್ ಕೊಟ್ಟಿದ್ದು ಅದರಲ್ಲಿ ತುಪ್ಪ ಕಲಬೆರಕೆಯಾದ ಬಗ್ಗೆ ಯಾವ ಮಾಹಿತಿಯೂ ಇಲ್ಲ. ಹಾಗೆ ನೋಡಿದರೆ, ಕಲಬೆರಕೆಯಾಗಿತ್ತು ಎನ್ನಲಾದ ತುಪ್ಪ ಸರಬರಾಜಾದುದು ಎನ್ ಡಿ ಎ ಸರಕಾರದ ಕಾಲದಲ್ಲಿ (ಜುಲೈ). ಅದನ್ನು ಸಾರ್ವಜನಿಕರ ಗಮನಕ್ಕೆ ತಂದುದು ಎರಡು ತಿಂಗಳ ಬಳಿಕ (ಸೆಪ್ಟಂಬರ್)? ಹಾಗಾದರೆ ಇಲ್ಲಿ ನಡೆದುದಾದರೂ ಏನು?

6.    ಈಗಿನ ಸರಕಾರ ಪ್ರಾಮಾಣಿಕ ಆಗಿರುವುದೇ ಹೌದಾದರೆ, ಅವರು ತನಿಖೆಗಾಗಿ ಮೊದಲು ಒಂದು ಸಮಿತಿ ರಚಿಸುತ್ತಿದ್ದರು. ಅದು ಬಿಟ್ಟು ರಾಜಕೀಯ ವಿರೋಧಿ ಜಗನ್ ವಿರುದ್ಧ ಹಗೆ ತೀರಿಸಿಕೊಳ್ಳಲು ದೇಶದ ಮುಂದೆ ಈ ಆರೋಪಗಳನ್ನು ಟಾಂ ಟಾಂ ಮಾಡುತ್ತಿರಲಿಲ್ಲ. ಹಾಗಾಗಿ, ಈ ಆರೋಪಗಳನ್ನು ನಾವು ನಂಬಬಹುದೇ?

7.    ಈಗಿನ ಮುಖ್ಯಮಂತ್ರಿಗಳಿಗೆ ಆಂಧ್ರದಲ್ಲಿ ಹೆರಿಟೇಜ್ ಡೇರಿ ಫಾರ್ಮ್ ಇದ್ದು, ಪ್ರಸ್ತುತ ಸುಳ್ಳು ಆರೋಪ ಮಾಡಿ ವಿವಾದ ಉಂಟಾದ ಮೇಲೆ ಅದರ ಶೇರು ಬೆಲೆ 5% ಏರಿದೆ. ಈ ಒಟ್ಟು ವಿವಾದದ ಉದ್ದೇಶ ಧಾರ್ಮಿಕ ಕುತಂತ್ರದ ಮೂಲಕ ಸ್ವಂತಕ್ಕೆ ಆರ್ಥಿಕ ಲಾಭ ಮಾಡಿಕೊಳ್ಳುವುದು ಎಂಬ ನಿಲುವಿಗೆ ಜನರು ಬಂದರೆ ?

ಕಲಬೆರಕೆಯಾಗಿದ್ದ ತುಪ್ಪವನ್ನು ಲಾಡು ತಯಾರಿಗೆ ಬಳಸಲಾಯಿತೇ ಎಂಬ ಬಗ್ಗೆ ಯಾವ ವಿಶ್ವಾಸಾರ್ಹ ಪುರಾವೆಯನ್ನೂ ಮಂಡಿಸಿಲ್ಲ. ಪರೀಕ್ಷೆಯನ್ನು ಅತ್ಯಂತ ವಿಶ್ವಾಸಾರ್ಹ ಎಫ್ ಎಸ್ ಎಲ್ ಹೈದರಾಬಾದ್ ನಲ್ಲಿ ಇರುವಾಗ ಅದನ್ನು ಗುಜರಾತಿನಲ್ಲಿ ಮಾಡಿದ್ದು ಏಕೆ ಎಂಬ ಪ್ರಶ್ನೆಗೆ ಉತ್ತರವಿಲ್ಲ. ತನಿಖೆಗೆ ಸಮಿತಿಯ ನೇಮಕವೂ ಆಗಿಲ್ಲ, ತನಿಖೆಯೂ ಆಗಿಲ್ಲ. ಹೀಗಿರುವಾಗ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಇಂತಹ ಗಂಭೀರ ಆರೋಪದ ಹೇಳಿಕೆಯನ್ನು ನೀಡಬಹುದೇ? ಇಂತಹ ಬಿಡುಬೀಸಾದ ಹೇಳಿಕೆಯನ್ನು ಆಧರಿಸಿ ಕೋಲಾಹಲ ಸೃಷ್ಟಿಸುವುದು ದೇಶದ ಜನರ ಸಾಮೂಹಿಕ ವಿವೇಕದ ಬಗ್ಗೆ ಏನು ಹೇಳುತ್ತದೆ?

ಇಂತಹ ಒಂದು ಗಂಭೀರ ವಿಷಯದಲ್ಲಿ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಮಾಡಿದ ಟ್ವೀಟ್ ಗಳನ್ನು ಗಮನಿಸಿ. ಅದರಲ್ಲಿ ಹಿಂದೂ ದೇವಾಲಯವನ್ನು ಅಪವಿತ್ರಗೊಳಿಸುವ ವಿಷಯ, ಮಸೀದಿ, ಚರ್ಚ್, ಸನಾತನ ಧರ್ಮ ರಕ್ಷಣೆ ಹೀಗೆ ಎಲ್ಲವನ್ನೂ ಎಳೆದು ತರಲಾಗಿತ್ತು. ಕೋಮು ಸಂಘರ್ಷದಿಂದ ಈಗಾಗಲೇ ತತ್ತರಿಸಿರುವ ದೇಶದಲ್ಲಿ ಮತ್ತೆ ಕೋಮುಗಲಭೆಗೆ ಪ್ರಚೋದನೆ ನೀಡುವುದು ಬೇಜವಾಬ್ದಾರಿ ನಡೆಯಲ್ಲವೇ? ಇದನ್ನು ಗಮನಿಸಿಯೇ ನಟ ಪ್ರಕಾಶ್ ರಾಜ್ ಅವರು ‘ಡಿಯರ್ ಪವನ್ ಕಲ್ಯಾಣ್, ಇದು ನಡೆದುದು ನಿಮ್ಮ ರಾಜ್ಯದಲ್ಲಿ. ಆ ರಾಜ್ಯದಲ್ಲಿ ನೀವು ಉಪ ಮುಖ್ಯಮಂತ್ರಿ, ದಯವಿಟ್ಟು ತನಿಖೆ ಮಾಡಿ, ಅಪರಾಧಿಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಜರುಗಿಸಿ, ಯಾಕೆ ಅನುಮಾನಗಳನ್ನು ಹರಡುತ್ತೀರಿ, ರಾಷ್ಟ್ರಮಟ್ಟದಲ್ಲಿ ಯಾಕೆ ವಿಷಯ ದೊಡ್ಡದು ಮಾಡುತ್ತೀರಿ? ಕೇಂದ್ರದಲ್ಲಿರುವ ನಿಮ್ಮ ಗೆಳೆಯರಿಂದಾಗಿ ದೇಶದಲ್ಲಿ ಈಗಾಗಲೇ ಸಾಕಪ್ಪಾ ಸಾಕು ಎಂಬಷ್ಟು ಕೋಮು ಉದ್ವಿಗ್ನತೆಯಿದೆ.. ” ಎಂದು ಪವನ್ ಕಲ್ಯಾಣ್ ಗೆ ಕಿವಿ ಮಾತು ಹೇಳಿದ್ದು.

ನೀತಿ ಪಾಠ ಇಷ್ಟೇ – ಕಣ್ಣಾರೆ ಕಂಡರೂ ಪರಾಂಬರಿಸಿ ನೋಡಿ. ಸತ್ಯೋತ್ತರ ಯುಗದಲ್ಲಿ ಯಾರೋ ಹೇಳಿದ್ದೆಲ್ಲವನ್ನೂ ಸತ್ಯ ಎಂದು ನಂಬಿ ಬಿಡಬೇಡಿ.

ಶ್ರೀನಿವಾಸ ಕಾರ್ಕಳ

ಚಿಂತಕರು

ಇದನ್ನೂ ಓದಿ- http://ತಿರುಪತಿ ʼಲಡ್ಡುʼ- ಒಂದು ಲೆಕ್ಕಾಚಾರ ಹೀಗಿದೆ…https://kannadaplanet.com/tirupati-%ca%bcladdu%ca%bc-calculation-is-as-follows/

More articles

Latest article