ಇತ್ತೀಚೆಗೆ ಪ್ಯಾರಿಸ್ ಒಲಿಂಪಿಕ್ಸ್ 2024 ಕ್ರೀಡಾಕೂಟದಲ್ಲಿ ತೂಕ ಹೆಚ್ಚಳದಿಂದಾಗಿ ಫೈನಲ್ ಪಂದ್ಯದಿಂದ ಅನರ್ಹಗೊಂಡಿದ್ದ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇವರೊಂದಿಗೆ ಕುಸ್ತಿಪಟು ಬಜರಂಗ್ ಪುನಿಯಾ ಕೂಡ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಪಕ್ಷದ ಹಲವು ಮುಖಂಡರ ಜೊತೆಗೆ ಹಲವು ಸುತ್ತಿನ ಮಾತುಕತೆಗಳ ಬಳಿಕ ಇಂದು (ಸೆಪ್ಟೆಂಬರ್ 6 ರಂದು) ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್, ನಾಯಕರಾದ ಪವನ್ ಖೇರಾ, ಹರಿಯಾಣ ಕಾಂಗ್ರೆಸ್ ಪಕ್ಷದ ಆಧ್ಯಕ್ಷರಾದ ಉದಯ್ ಭಾನ್ ಮತ್ತು ಹರಿಯಾಣದ ಎಐಸಿಸಿ ಉಸ್ತುವಾರಿ ದೀಪಕ್ ಬಾಬರಿಯಾ ಸಮ್ಮುಖದಲ್ಲಿ ದೆಹಲಿಯಲ್ಲಿರುವ ಎಐಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಬಜರಂಗ್ ಪುನಿಯಾ ಟೋಕಿಯೊ ಗೇಮ್ಸ್ ಕಂಚಿನ ಪದಕ ವಿಜೇತರಾಗಿದ್ದರೆ, ವಿನೇಶ್ ಫೋಗಟ್ ಒಲಿಂಪಿಕ್ಸ್ ಫೈನಲ್ ತಲುಪಿದ ಮೊದಲ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಪುನಿಯಾ ಮತ್ತು ಫೋಗಟ್ ಅವರು ಕಳೆದ ವರ್ಷ ಬಿಜೆಪಿಯ ಮಾಜಿ ಸಂಸದ ಮತ್ತು ಆಗಿನ ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ಮೇಲೆ ಕುಸ್ತಿಪಟುಗಳ ಪ್ರತಿಭಟನೆಯ ಭಾಗವಹಿಸಿ.
ಭಾರತೀಯ ರೈಲ್ವೆಗೆ ರಾಜಿನಾಮೆ
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ವಿನೇಶ್ ಫೋಗಟ್, ”ಭಾರತೀಯ ರೈಲ್ವೇಗೆ ಸೇವೆ ಸಲ್ಲಿಸುವುದು ನನ್ನ ಜೀವನದಲ್ಲಿ ಸ್ಮರಣೀಯ ಮತ್ತು ಹೆಮ್ಮೆಯ ಸಮಯವೆಂದು ನಾನು ಭಾವಿಸಿದ್ದೇನೆ. ನನ್ನ ಜೀವನದ ಈ ಹಂತದಲ್ಲಿ, ನಾನು ರೈಲ್ವೆ ಸೇವೆಯಿಂದ ಪ್ರತ್ಯೇಕವಾಗಿರಲು ನಿರ್ಧರಿಸಿದ್ದೇನೆ. ನನ್ನ ರಾಜೀನಾಮೆಯನ್ನು ಭಾರತೀಯ ರೈಲ್ವೆಯ ಅಧಿಕಾರಿಗಳಿಗೆ ಸಲ್ಲಿಸಿದ್ದೇನೆ. ರಾಷ್ಟ್ರದ ಸೇವೆಯಲ್ಲಿ ರೈಲ್ವೆ ನನಗೆ ನೀಡಿದ ಈ ಅವಕಾಶಕ್ಕಾಗಿ ನಾನು ಭಾರತೀಯ ರೈಲ್ವೆ ಕುಟುಂಬಕ್ಕೆ ಯಾವಾಗಲೂ ಕೃತಜ್ಞಳಾಗಿರುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ.