ಮುಡಾ ಬದಲಿ ನಿವೇಶನ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧದ ರಾಜ್ಯಪಾಲರ ಪ್ರಾಸಿಕ್ಯೂಷನ್ ಆದೇಶ ಪ್ರಶ್ನಿಸಿರುವ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ಶನಿವಾರ ಮುಂದುವರೆಸಿದೆ, ಈ ಬಗ್ಗೆ ಕುತೂಹಲ ಮೂಡಿದ್ದು ವಿಚಾರಣೆ ಆರಂಭವಾಗಿದೆ.
ಆರ್‌ಟಿಐ ಕಾರ್ಯಕರ್ತರ ದೂರು ಆಧರಿಸಿ ಸಿಎಂ ವಿರುದ್ಧದ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಆಗಸ್ಟ್ 17 ರಂದು ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಸಿಎಂ ಪರ ವಕೀಲರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು.
ಸಿಎಂ ಪರವಾಗಿ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ವಾದಿಸುತ್ತಿದ್ದು, ಪ್ರಾಸಿಕ್ಯೂಷನ್ ಆದೇಶ ರದ್ದು ಪಡಿಸಬೇಕು ಎಂಬುದು ಸಿದ್ದರಾಮಯ್ಯ ಅವರ ಪರ ವಕೀಲರ ವಾದವಾಗಿದೆ.
ಕಳೆದ ಗುರುವಾರ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠವು ವಿಚಾರಣೆಯನ್ನು ಶನಿವಾರಕ್ಕೆ ಮುಂದೂಡಿತ್ತು. ವಾದ – ಪ್ರತಿವಾದಗಳನ್ನು ಆಲಿಸಲಿರುವ ನ್ಯಾಯ ಪೀಠವು ಶನಿವಾರವೇ ತೀರ್ಪು ಪ್ರಕಟಿಸುತ್ತಾ ಅಥವಾ ವಿಚಾರಣೆ ಮುಂದುವರಿಯುತ್ತಾ ಎಂಬ ಕುತೂಹಲವಿದೆ.