ಮಾನ್ಯ ರಾಜ್ಯಪಾಲರು ಖಾಸಗಿ ದೂರಿನ ಆಧಾರದ ಮೇಲೆ ಮುಖ್ಯಮಂತ್ರಿಗಳ ವಿರುದ್ಧದ ತನಿಖೆಗೆ ಅನುಮತಿ ನೀಡಿರುವುದನ್ನು ಖಂಡಿಸಿ ಕಾಂಗ್ರೆಸ್ ಪಕ್ಷ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದೆ. ಮೂಡಾ ಪ್ರಕರಣದಲ್ಲಿ ಮುಖ್ಯಮಂತ್ರಿಗಳ ಪಾತ್ರವಿಲ್ಲದಿದ್ದರೂ ರಾಜಭವನವನ್ನು ಬಿಜೆಪಿ ಕಚೇರಿಯನ್ನಾಗಿ ಮಾಡಿಕೊಂಡು ಷಡ್ಯಾಂತ್ರ ರೂಪಿಸಲಾಗುತ್ತಿದೆ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.
ಸ್ವಾತಂತ್ರ್ಯ ಉದ್ಯಾನದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಮುಖ್ಯಮಂತ್ರಿಗಳ ಪಾತ್ರ ಏನಿದೆ? ಎಂದು ಬಿಜೆಪಿ ಹಾಗೂ ಜೆಡಿಎಸ್ ನಾಯಕರನ್ನು ಕೇಳಬಯಸುತ್ತೇನೆ. ದೇವರಾಜು ಎಂಬುವವರ ತಂದೆ 1935ರಲ್ಲಿ ಅಂದರೆ ಸ್ವಾತಂತ್ರ್ಯಕ್ಕೂ ಮುನ್ನ ಹರಾಜಿನಲ್ಲಿ ಖರೀದಿ ಮಾಡಿರುತ್ತಾರೆ. ಈ ಜಮೀನು ದೇವರಾಜು ಅವರಿಗೆ ಭಾಗವಾಗಿರುತ್ತದೆ. ಅವರು 2004ರಲ್ಲಿ ಸಿದ್ದರಾಮಯ್ಯ ಅವರ ಬಾಮೈದ ಮಲ್ಲಿಕಾರ್ಜುನ ಅವರಿಗೆ 2004ರಲ್ಲಿ ಮಾರಾಟ ಮಾಡಿರುತ್ತಾರೆ. ನಂತರ ಮಲ್ಲಿಕಾರ್ಜುನ್ ಅವರು 2010ರಲ್ಲಿ ತನ್ನ ಅಕ್ಕ ಪಾರ್ವತಿ ಅವರಿಗೆ ದಾನಪತ್ರದ ಮೂಲಕ ಉದುಗೊರೆಯಾಗಿ ಈ ಜಮೀನು ನೀಡಿರುತ್ತಾರೆ. ಈ ಜಮೀನನ್ನು ಮೂಡಾ ಅಕ್ರಮವಾಗಿ ಒಥ್ತುವರಿ ಮಾಡಿಕೊಂಡ ಪರಿಣಾಮ ಪಾರ್ವತಿ ಅವರು ಪರಿಹಾರ ನೀಡುವಂತೆ ಮನವಿ ಮಾಡುತ್ತಾರೆ. ಮೂಡಾ ಅವರು ತಮ್ಮ ತಪ್ಪಿಗೆ ಪರಿಹಾರವಾಗಿ 14 ನಿವೇಶನ ನೀಡುತ್ತಾರೆ. ಬಿಜೆಪಿಯ ಆಡಳಿತ ಅವಧಿಯಲ್ಲಿ ಈ ಪ್ರಕ್ರಿಯೆ ನಡೆದಿದ್ದು, ಇದರಲ್ಲಿ ನಮ್ಮ ಮುಖ್ಯಮಂತ್ರಿಗಳ ಪಾತ್ರ ಏನಿದೆ? ಎಂದು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಅವರ ಪ್ರಖ್ಯಾತಿ ಸಹಿಸಲಾಗದೇ, ಈ ಸರ್ಕಾರವನ್ನು ತೆಗೆಯಲು ವಿರೋಧ ಪಕ್ಷಗಳು ಸಂಚು ರೂಪಿಸಿವೆ. ಬಿಜೆಪಿ ದೇಶದಲ್ಲಿ 450ಕ್ಕೂ ಹೆಚ್ಚು ಶಾಸಕರನ್ನು ಖರೀದಿ ಮಾಡಿದ್ದು, ಒಬ್ಬೊಬ್ಬ ಶಾಸಕರಿಗೆ 20- ಕೋಟಿ ಕೊಟ್ಟು ಖರೀದಿ ಮಾಡಿದ್ದಾರೆ. ರಾಜ್ಯದಲ್ಲಿ ಬಿಜೆಪಿಗೆ ಎಂದಿಗೂ ಜನ ಬಹುಮತ ನೀಡಿಲ್ಲ. ಆಪರೇಷನ್ ಕಮಲ ಮೂಲಕ ಸರ್ಕಾರ ರಚಿಸಿದರು. ಮೂಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ನ್ಯಾಯಬದ್ಧ ಆರೋಪಗಳಿಲ್ಲ ಎಂದು ಹೇಳಿದ್ದಾರೆ.
ವಿಜಯೇಂದ್ರ ಅವರೇ ದೇಶದಲ್ಲಿ ಯಾವುದಾದರೂ ಒಬ್ಬ ಮುಖ್ಯಮಂತ್ರಿ ಅಧಿಕಾರದಲ್ಲಿದ್ದು, ಜೈಲು ಸೇರಿದ್ದರೆ ಅದು ನಿಮ್ಮ ತಂದೆಯವರು ಮಾತ್ರ ಎಂದು ಹೇಳಲು ಬಯಸುತ್ತೇನೆ. ಆಗ ಅವರ ಸರ್ಕಾರದ 9 ಸಚಿವರು ಜೈಲಿಗೆ ಸೇರಿದ್ದರು. ನಮ್ಮ ಈ ಸರ್ಕಾರ ಐದು ಗ್ಯಾರಂಟಿ ಯೋಜನೆ ಜಾರಿ ಮಾಡಿರುವುದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ನಾವು ನಿರೀಕ್ಷಿತ ಮಟ್ಟದಲ್ಲಿ ಸೀಟು ಗೆಲ್ಲದಿದ್ದರೂ 1 ಸೀಟಿನಿಂದ 9 ಸೀಟು ಗೆದ್ದಿದ್ದೇವೆ. ಮತ ಪ್ರಮಾಣದಲ್ಲೂ ಗಣನೀಯ ಏರಿಕೆ ಕಂಡಿದ್ದೇವೆ. ಗ್ಯಾರಂಟಿ ಯೋಜನೆಗಳ ವಿರುದ್ಧ ಅನೇಕರು ಅಪಸ್ವರ ಎತ್ತಿದರೂ ನಮ್ಮ ಸಿಎಂ ಹಾಗೂ ಡಿಸಿಎಂ ಅವರು ಈ ಯೋಜನೆ ರಾಜಕೀಯ ಲಾಭಕ್ಕಾಗಿ ಅಲ್ಲ, ಜನರ ಕಲ್ಯಾಣಕ್ಕೆ ಹೀಗಾಗಿ ಈ ಯೋಜನೆ ಮುಂದುವರಿಯಲಿದೆ ಎಂದು ಹೇಳಿದರು.
ರಾಜ್ಯಪಾಲರು ಯಾವ ಆಧಾರದ ಮೇಲೆ ಖಾಸಗಿ ದೂರಿನ ಆಧಾರದ ಮೇಲೆ ಸಿಎಂ ವಿರುದ್ಧ ತನಿಖೆಗೆ ಅನುಮತಿ ನೀಡಿದ್ದೀರಿ ಎಂದು ಕೇಳಲು ಬಯಸುತ್ತೇನೆ. ದೂರು ಬಂದ 24 ತಾಸಿನಲ್ಲಿ ಆ ದೂರು ಪರಾಮರ್ಶೆ ಮಾಡದೇ ರಾಜ್ಯಪಾಲರು ಸಿಎಂಗೆ ಶೋಕಾಸ್ ನೊಟೀಸ್ ಜಾರಿ ಮಾಡಿದ್ದಾರೆ. ಕುಮಾರಸ್ವಾಮಿ ಅವರ ವಿರುದ್ಧ ತನಿಖೆಗೆ ಲೋಕಾಯುಕ್ತ ಸಂಸ್ಥೆ ಅನುಮತಿ ಕೋರಿದರೂ ಈ ವರೆಗೂ ನೀಡಿಲ್ಲ. ಇಂತಹ ಕುಮಾರಸ್ವಾಮಿ ಅವರು ನಮ್ಮ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಜನಾರ್ದನ್ ರೆಡ್ಡಿ, ಶಶಿಕಲಾ ಜೊಲ್ಲೆ ಸೇರಿದಂತೆ ಬಿಜೆಪಿಯ ನಾಲ್ವರು ಮಾಜಿ ಸಚಿವರ ವಿರುದ್ಧ ತನಿಖೆಗೆ ಮನವಿ ಮಾಡಿದರೆ ರಾಜ್ಯಪಾಲರು ಅನುಮತಿ ನೀಡಿಲ್ಲ. ಇದನ್ನು ಜನ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಹಿಂದುಳಿದ ವರ್ಗದ ನಾಯಕ ರಾಜ್ಯದಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿರುವುದನ್ನು ಸಹಿಸಲಾಗದೇ ವಿರೋಧ ಪಕ್ಷದವರು ಈ ಷಡ್ಯಂತ್ರ ರೂಪಿಸಿದ್ದಾರೆ. ಈ ಪ್ರಕರಣದಲ್ಲಿ ನಾವು ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತೇವೆ. ನಮಗೆ ಅಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ. ಬಿಜೆಪಿ ಹಾಗೂ ಜೆಡಿಎಸ್ ನಮ್ಮ ಮುಖ್ಯಮಂತ್ರಿಯನ್ನು ಅಧಿಕಾರದಿಂದ ಕೆಳಗಿಳಿಸಲು ಸಾಧ್ಯವಿಲ್ಲ. ಪಕ್ಷದ ಹೈಕಮಾಂಡ್ ನಾಯಕರು ಶಾಸಕರು, ಕಾರ್ಯಕರ್ತರು ಹಾಗೂ ರಾಜ್ಯದ ಜನ ಸಿದ್ದರಾಮಯ್ಯ ಅವರ ಪರವಿದ್ದಾರೆ. ರಾಜ್ಯದಲ್ಲಿ ಗಲಭೆ ಸೃಷ್ಟಿಯಾದರೆ ಇದಕ್ಕೆ ರಾಜ್ಯಪಾಲರು ಹೊಣೆಯಾಗುತ್ತಾರೆ ಎಂದು ದೂರಿದ್ದಾರೆ.