ಯಾವ ಸಂವಿಧಾನವನ್ನು ಸನಾತನಿಗಳು ಹುಟ್ಟುಹಾಕಿದ ಅಸಮಾನತೆಯ ವಿರುದ್ಧ ಡಾ.ಅಂಬೇಡ್ಕರ್ ರವರು ರಚಿಸಿದರೋ, ಯಾವ ಜನವಿರೋಧಿ, ಮಹಿಳಾವಿರೋಧಿಯಾದ ವೈದಿಕರ ಮನುಸ್ಮೃತಿಯನ್ನು ಅಂಬೇಡ್ಕರ್ ರವರು ಸಾರ್ವಜನಿಕವಾಗಿ ಸುಟ್ಟು ಹಾಕಿದರೋ, ಅಂತಹ ಮನುಸ್ಮೃತಿಯನ್ನು ನಿರಾಕರಿಸಿ ಸಂವಿಧಾನವನ್ನು ಕಾಪಾಡಬೇಕಾದ ನ್ಯಾಯಾಧೀಶರು ಅದನ್ನು ಸಮರ್ಥಿಸಿಕೊಳ್ಳುತ್ತಿರುವುದು ಸಂವಿಧಾನಕ್ಕೆ ಮಾಡಿದ ಅಪಚಾರ, ಡಾ.ಅಂಬೇಡ್ಕರ್ ರವರಿಗೆ ಮಾಡುವ ಅಪಮಾನ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು
ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯಾಧೀಶರುಗಳಲ್ಲಿಯೂ ಸನಾತನವಾದಿಗಳು ಇದ್ದಾರಾ? ಗೊತ್ತಿಲ್ಲ. ಗೊತ್ತಿದ್ದರೂ ಹೇಳುವಂತಿಲ್ಲ. ಆದರೆ ಹಿಂದುತ್ವವಾದಿಗಳ ಪರವಾಗಿರುವ ಕೆಲವಾರು ತೀರ್ಪುಗಳು ಹಾಗೂ ನಿವೃತ್ತಿಯ ನಂತರ ಬಿಜೆಪಿ ಪಕ್ಷ ಸೇರ್ಪಡೆಯಾದವರ ಮತ್ತು ಆ ಪಕ್ಷದ ಕೃಪಾಕಟಾಕ್ಷದಿಂದ ಪದವಿಗಳ ಫಲಾನುಭವಿಗಳಾದ ನ್ಯಾಯಾಧೀಶರುಗಳ ಪಟ್ಟಿಯನ್ನು ಗಮನಿಸಿದಾಗ ಅನುಮಾನ ಪಡದೇ ಇರಲು ಸಾಧ್ಯವೇ ಇಲ್ಲ.
ಈ ಮಾತಿಗೆ ಪೂರಕವಾಗಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಸಾರ್ವಜನಿಕ ಸಭೆಯಲ್ಲಿ ಆಡಿದ ಮಾತುಗಳು ಅಚ್ಚರಿಯನ್ನುಂಟು ಮಾಡಿದೆ. ಅದೇನಾಯ್ತು ಅಂದರೆ, ಕರ್ನಾಟಕದ ಹೈಕೋರ್ಟ್ ನ್ಯಾಯಾಧೀಶರಾದ ಕೃಷ್ಣ ಎಸ್ ದೀಕ್ಷಿತ್ ರವರು ಆಗಸ್ಟ್ 15 ರಂದು “ಕಾನೂನು ಮತ್ತು ಧರ್ಮ” ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ” ವರ್ಣಗಳು ಜಾತಿಗಳಲ್ಲ, ಮನು ಬ್ರಾಹ್ಮಣ ಅಲ್ಲ, ಅದೊಂದು ಹುದ್ದೆ. ಮನುಸ್ಮೃತಿ ಅನೇಕ ಹಿರಿದಾದ ತತ್ವಗಳನ್ನು ಒಳಗೊಂಡಿದೆ. ಭಾರತದ ಮಹಾಕಾವ್ಯಗಳು, ವೇದ ಉಪನಿಷತ್ತುಗಳು ಅತೀ ಶೂದ್ರರಿಂದಲೆ ರಚಿತವಾಗಿವೆ. ವಿಶ್ವದ ಬೇರೆಲ್ಲಾ ಧರ್ಮಗಳಿಗಿಂತಲೂ ನಮ್ಮ ಕಾನೂನುಗಳು ರೂಪಗೊಳ್ಳುವಲ್ಲಿ ಹಿಂದೂ ಧರ್ಮದ ಹಿರಿಮೆ ಸದಾ ಗಾಢವಾದ ಪಾತ್ರ ವಹಿಸಿದೆ. ತರತಮಗಳಿಲ್ಲದ ವ್ಯವಸ್ಥೆಯೇ ಧರ್ಮ” ಎಂಬುದು ನ್ಯಾಯಮೂರ್ತಿ ದೀಕ್ಷಿತರವರ ಅಭಿಪ್ರಾಯ.
ನ್ಯಾಯಾಧೀಶರುಗಳು ಸಂವಿಧಾನದ ಬಹುದೊಡ್ಡ ಮೌಲ್ಯವಾದ ಧರ್ಮನಿರಪೇಕ್ಷತೆಯನ್ನು ಕಾಪಾಡಬೇಕು ಎನ್ನುವುದು ಅಪೇಕ್ಷಣೀಯ. ಯಾವುದೇ ಮತ ಧರ್ಮ ಸಿದ್ಧಾಂತಗಳ ಮೋಹಕ್ಕೆ ಒಳಗಾಗದೇ ಸಂವಿಧಾನ ಬದ್ಧವಾಗಿ ಕಾರ್ಯ ನಿರ್ವಹಿಸಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ.
ನ್ಯಾಯಾಂಗ ಎನ್ನುವುದು ಸಂವಿಧಾನದ ಮೌಲ್ಯಾದರ್ಶಗಳನ್ನು ಕಾಪಾಡಿಕೊಂಡು ಸಂವಿಧಾನದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು. ನ್ಯಾಯಾಂಗದ ಘನತೆಯನ್ನು ಎತ್ತಿ ಹಿಡಿಯಬೇಕಾದ ನ್ಯಾಯಾಧೀಶರುಗಳು ನ್ಯಾಯಾಂಗದ ಚೌಕಟ್ಟಿನಲ್ಲಿಯೇ ತೀರ್ಮಾನಗಳನ್ನು ತೆಗೆದುಕೊಳ್ಳಬೇಕೇ ಹೊರತು ಅವರ ‘ಸ್ವಂತ ಯೋಚನೆ ಒಲವು ನಿಲುವು ಸಿದ್ಧಾಂತಗಳನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಬಾರದು, ತೀರ್ಪುಗಳಲ್ಲಿ ಅಭಿವ್ಯಕ್ತಿಸಬಾರದು’ ಎಂಬುದು ಸಾಂವಿಧಾನಿಕ ಕಟ್ಟುಪಾಡು.
ಆದರೆ.. ಹಿಂದುತ್ವವಾದಿ ಆರೆಸ್ಸೆಸ್ ಕೃಪಾಕಟಾಕ್ಷದ ಬಿಜೆಪಿ ಆಡಳಿತದಲ್ಲಿ ಕೆಲವು ಹಿಂದುತ್ವವಾದಿ ಸಿದ್ಧಾಂತದ ಪರವಾಗಿರುವ ನ್ಯಾಯಾಧೀಶರುಗಳು ಬಹಿರಂಗವಾಗಿಯೇ ಸನಾತನ ಧರ್ಮದ ಪರವಾಗಿ ಹೇಳಿಕೆಯನ್ನು ಕೊಡುತ್ತಿದ್ದಾರೆ. ಸಂಘದ ಆಶಯಕ್ಕೆ ಪೂರಕವಾಗಿ ತೀರ್ಪುಗಳನ್ನು ಪ್ರಕಟಿಸುತ್ತಿದ್ದಾರೆ. ಅದಕ್ಕೆ ಪ್ರತಿಫಲವಾಗಿ ನಿವೃತ್ತಿಯ ನಂತರ ಸಂಘಿ ಸರಕಾರದ ಫಲಾನುಭವಿಗಳೂ ಆಗಿ ತಮ್ಮ ನೈತಿಕತೆಯನ್ನೇ ಪ್ರಶ್ನಾರ್ಹವಾಗಿಸಿದ್ದಾರೆ. ಅಯೋಧ್ಯೆಯ ರಾಮಮಂದಿರದ ಕುರಿತ ತೀರ್ಪು ಇದಕ್ಕೊಂದು ಉದಾಹರಣೆಯಾಗಿದೆ. ಬಾಬರಿ ಮಸೀದಿ ಇದ್ದ ಸ್ಥಳವನ್ನು ಉತ್ಖನನ ಮಾಡಿದಾಗ ದೇವಸ್ಥಾನ ಇದ್ದ ಬಗ್ಗೆ ಯಾವುದೇ ಸುಳಿವು ಸಿಗದಿದ್ದರೂ ಬಹುಸಂಖ್ಯಾತ ಹಿಂದೂಗಳ ಭಾವನೆಗಳಿಗೆ ಬೆಲೆಕೊಟ್ಟು ರಾಮಮಂದಿರ ಕಟ್ಟುವ ಪರವಾಗಿ ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟಿತು. ಅಂದರೆ ಸಾಕ್ಷಿ ಆಧಾರಗಳಿಗಿಂತಲೂ ಭಾವನೆಗಳಿಗೆ ಪ್ರಾಮುಖ್ಯತೆ ಕೊಟ್ಟಿದ್ದೇ ನ್ಯಾಯಾಂಗ ವಿರೋಧಿ ನ್ಯಾಯ ನಿರ್ಣಯವಾದಂತಾಯ್ತು.
ಈಗ ಕರ್ನಾಟಕ ಹಾಲಿ ಹೈಕೋರ್ಟ್ ಜಡ್ಜ್ ಸಾಹೇಬರಾದ ದೀಕ್ಷಿತರು ನೇರವಾಗಿಯೇ ಸನಾತನ ಹಿಂದೂ ಧರ್ಮದ ಪರವಾಗಿ ಮಾತಾಡಿದ್ದಾರೆ. ಕಾನೂನು ಎಂದೂ ಯಾವುದೇ ಒಂದು ಧರ್ಮದ ಪರವಾಗಿ ಯಾವಾಗಲೂ ಇರಲೇಬಾರದು. ಆದರೆ ಜಸ್ಟೀಸ್ ದೀಕ್ಷಿತರು ಕಾನೂನು ಮತ್ತು ಧರ್ಮದ ಕುರಿತು ಮಾತಾಡುತ್ತಾ ಮನುಸ್ಮೃತಿಯನ್ನು ಸಮರ್ಥಿಸಿಕೊಂಡಿದ್ದಾರೆ. ” ನಮ್ಮ ದೇಶದ ಸಾಂವಿಧಾನಿಕ ಕಾನೂನುಗಳ ಮೂಲವು ಧರ್ಮವೇ ಆಗಿದೆ’ ಎಂದು ಬೋಧನೆ ಮಾಡಿದ್ದಾರೆ. “ಮನುಸ್ಮೃತಿ ಎಲ್ಲಾ ನಾಗರೀಕರಿಗೂ ಸಮಾನವಾದ ಆಚಾರ, ವ್ಯವಹಾರ ಮತ್ತು ಪ್ರಾಯಶ್ಚಿತ್ತವನ್ನು ಬೋಧಿಸುತ್ತದೆ” ಎಂದು ಉಪನ್ಯಾಸಿಸಿದ್ದಾರೆ.
ಯಾವ ಸಂವಿಧಾನವನ್ನು ಸನಾತನಿಗಳು ಹುಟ್ಟುಹಾಕಿದ ಅಸಮಾನತೆಯ ವಿರುದ್ಧ ಡಾ.ಅಂಬೇಡ್ಕರ್ ರವರು ರಚಿಸಿದರೋ, ಯಾವ ಜನವಿರೋಧಿ, ಮಹಿಳಾವಿರೋಧಿಯಾದ ವೈದಿಕರ ಮನುಸ್ಮೃತಿಯನ್ನು ಅಂಬೇಡ್ಕರ್ ರವರು ಸಾರ್ವಜನಿಕವಾಗಿ ಸುಟ್ಟು ಹಾಕಿದರೋ, ಅಂತಹ ಮನುಸ್ಮೃತಿಯನ್ನು ನಿರಾಕರಿಸಿ ಸಂವಿಧಾನವನ್ನು ಕಾಪಾಡಬೇಕಾದ ನ್ಯಾಯಾಧೀಶರು ಅದನ್ನು ಸಮರ್ಥಿಸಿಕೊಳ್ಳುತ್ತಿರುವುದು ಸಂವಿಧಾನಕ್ಕೆ ಮಾಡಿದ ಅಪಚಾರ, ಡಾ.ಅಂಬೇಡ್ಕರ್ ರವರಿಗೆ ಮಾಡುವ ಅಪಮಾನ.
1927, ಡಿಸೆಂಬರ್ 27 ರಂದೇ ಅಂಬೇಡ್ಕರ್ ರವರು ಮನುಸ್ಮೃತಿಯನ್ನು ಸುಟ್ಟು ಹಾಕುತ್ತಾ” ನಾವು ಅತ್ಯಂತ ಉದ್ದೇಶಪೂರ್ವಕವಾಗಿಯೇ ಮನುಸ್ಮೃತಿಯನ್ನು ಸಾಮೂಹಿಕವಾಗಿ ಸುಟ್ಟುಹಾಕಿದೆವು. ಯಾಕೆಂದರೆ ಮನುಸ್ಮೃತಿಯು ನಮ್ಮನ್ನು ಶತಮಾನಗಳಿಂದ ತುಳಿದಿಟ್ಟ ವ್ಯವಸ್ಥೆಯ ಪ್ರತೀಕವಾಗಿದೆ” ಎಂದು ಹೇಳಿದರು. ಆದರೆ ಭಾರತವು ಒಪ್ಪಿಕೊಂಡು ಆಚರಿಸುತ್ತಿರುವ ಅಂಬೇಡ್ಕರ್ ರವರ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನ್ಯಾಯಾಂಗ ವ್ಯವಸ್ಥೆಯ ಪ್ರಮುಖ ಅಂಗವಾಗಿರುವ ನ್ಯಾಯಾಧೀಶರೊಬ್ಬರು ವೈದಿಕಶಾಹಿ ಸಂಸ್ಕೃತಿಯ ಮನುಸ್ಮೃತಿಯನ್ನು ಸಮರ್ಥಿಸಿಕೊಂಡಿದ್ದು ಸಂವಿಧಾನವಿರೋಧಿ ಕೃತ್ಯವಾಗಿದೆ. ಸಂವಿಧಾನವನ್ನು ಒಪ್ಪದೇ ಇರುವ ಆರೆಸ್ಸೆಸ್ ಪ್ರಣೀತ ನಿಲುವಾಗಿದೆ.
ಅವತ್ತೇ ಅಂದರೆ 1949 ರಲ್ಲಿಯೇ ಆರೆಸ್ಸೆಸ್ ಮುಖಪತ್ರಿಕೆಯಾದ ಆರ್ಗನೈಸರ್ ನಲ್ಲಿ ಸಂಘವು ಸಂವಿಧಾನದ ವಿರುದ್ದ ಅಸಮಾಧಾನವನ್ನು ಪ್ರಕಟಿಸಿತ್ತು. “ಭಾರತದ ಸಂವಿಧಾನದ ಬಗ್ಗೆ ಅತ್ಯಂತ ಹೀನಾಯವಾದದ್ದು ಏನೆಂದರೆ ಅದರಲ್ಲಿ ಭಾರತೀಯವಾದದ್ದು ಏನೂ ಇಲ್ಲ. ವಾಸ್ತವವಾಗಿ ನಮ್ಮ ಮನುಸ್ಮೃತಿ ಅತ್ಯಂತ ಪ್ರಾಚೀನವಾಗಿದ್ದು ಜಗತ್ತಿನ ಜನರೆಲ್ಲಾ ಸ್ವಪ್ರೇರಿತರಾಗಿ ಅದರ ಬಗ್ಗೆ ಅಪಾರ ಆದರವನ್ನು ವ್ಯಕ್ತಪಡಿಸುತ್ತಾರೆ. ಆದರೆ ನಮ್ಮ ಸಂವಿಧಾನ ಪಂಡಿತರಿಗೆ ಅದು ಏನೂ ಅಲ್ಲ” ಎಂದು ಆರೆಸ್ಸೆಸ್ ನಿಲುವನ್ನು ಪ್ರಕಟಿಸಲಾಗಿತ್ತು. ಅವತ್ತಿನಿಂದ ಈಗಲೂ ಆರೆಸ್ಸೆಸ್ ತನ್ನ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡಿಲ್ಲ. ಮನುಸ್ಮೃತಿಯಾಧಾರಿತ ಸಂವಿಧಾನ ರಚಿಸಿ ಈ ದೇಶವನ್ನು ಹಿಂದೂರಾಷ್ಟ್ರವಾಗಿಸುವ ಪ್ರಯತ್ನವನ್ನು ನಿಲ್ಲಿಸಿಲ್ಲ. “ಬಿಜೆಪಿ ಆಡಳಿತಕ್ಕೆ ಬಂದಿರೋದೇ ಸಂವಿಧಾನವನ್ನು ಬದಲಾಯಿಸಲು” ಎಂದು ಬಿಜೆಪಿ ನಾಯಕರೇ ಹೇಳುವುದು ನಿಂತಿಲ್ಲ. ಆದರೆ ಸಂವಿಧಾನದ ಕೃಪೆಯಿಂದಲೇ ಆಯ್ಕೆಯಾದ ನ್ಯಾಯಾಧೀಶರು ಹಿಂದುತ್ವವಾದದ ಪರವಾಗಿ, ಮನುಸ್ಮೃತಿಯ ಪರ ವಕಾಲತ್ತು ವಹಿಸುವುದು ಖಂಡಿತಾ ಸಮರ್ಥನೀಯವಲ್ಲ.
ಬಹುಷಃ ಸನ್ಮಾನ್ಯ ನ್ಯಾಯಮೂರ್ತಿಗಳು ಮನುಸ್ಮೃತಿಯನ್ನೇ ಆಮೂಲಾಗ್ರವಾಗಿ ಓದಿಕೊಂಡಂತಿಲ್ಲ. ಯಾಕೆಂದರೆ ಅಸಮಾನತೆ ಎನ್ನುವುದೇ ಮನುಶಾಸ್ತ್ರದ ತಾಯಿ ಬೇರಾಗಿದೆ. ವರ್ಣವ್ಯವಸ್ಥೆಯನ್ನು ಪ್ರತಿಪಾದಿಸುವ ಮನುಸ್ಮೃತಿ ಎಂಬ ವೈದಿಕರ ಆಕರ ಗ್ರಂಥವು ಬ್ರಾಹ್ಮಣರ ಶ್ರೇಷ್ಟತೆಯನ್ನು ಹಾಗೂ ಶೂದ್ರರ ಅನಿಷ್ಟತೆಯನ್ನು ಖಾಯಂಗೊಳಿಸಲೆಂದೇ ರಚಿತವಾಗಿದೆ. “ನ ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ” ಎನ್ನುವ ಮೂಲಕ ಮನುಸ್ಮೃತಿ ಮಹಿಳಾ ವಿರೋಧಿಯಾಗಿದೆ. “ಅಕ್ಷರ ಕಲಿತ ಶೂದ್ರರ ಕಿವಿಗೆ ಕಾಯ್ದ ಸೀಸವನ್ನು ಹಾಕಬೇಕು” ಎಂದು ಆದೇಶಿಸುವ ಮನುಶಾಸ್ತ್ರ ಬಹುಸಂಖ್ಯಾತ ದುಡಿಯುವ ವರ್ಗವನ್ನು ಶತಮಾನಗಳ ಕಾಲ ಅಕ್ಷರದಿಂದ ವಂಚಿತರನ್ನಾಗಿಸಿದೆ. ಬ್ರಿಟೀಷರು ಬಾರದೇ ಹೋಗಿದ್ದರೆ, ಪುಲೆ ದಂಪತಿಗಳಂತವರು ಶಿಕ್ಷಣ ಕ್ರಾಂತಿ ನಡೆಸದೇ ಇದ್ದಿದ್ದರೆ, ಅಂಬೇಡ್ಕರ್ ರವರು ಶಿಕ್ಷಣ ಹಾಗೂ ಸಮಾನತೆಯನ್ನು ಸಂವಿಧಾನಬದ್ಧ ಹಕ್ಕಾಗಿಸದೇ ಇದ್ದಿದ್ದರೆ ಈಗಲೂ ಈ ದೇಶ ಮನುವಾದಿಗಳ ನಿಯಂತ್ರಣದಲ್ಲೇ ಇರುತ್ತಿತ್ತು. ಮಹಿಳೆಯರು ಪುರುಷರ ಅಡಿಯಾಳಾಗಿಯೇ ಇರುತ್ತಿದ್ದರು. ಬ್ರಾಹ್ಮಣೇತರರು ಅಕ್ಷರ ವಂಚಿತರಾಗಿ ಗುಲಾಮರಾಗಿಯೇ ಬದುಕುತ್ತಿದ್ದರು.
ಇಂತಹ ಜನವಿರೋಧಿ ಮನುಸ್ಮೃತಿಯನ್ನು ವೈದಿಕಶಾಹಿ ಶ್ರೇಷ್ಟತೆಯ ವ್ಯಸನಪೀಡಿತರು ಮಾತ್ರ ಸಮರ್ಥಿಸಿಕೊಳ್ಳಲು ಸಾಧ್ಯ. ಸಂವಿಧಾನಕ್ಕೆ ಮೂಲ ಸನಾತನ ಮನುಧರ್ಮ ಎಂದು ಪ್ರತಿಪಾದಿಸಲು ಸಾಧ್ಯ. ಆದರೆ ಇಂತಹ ಪ್ರತಿಪಾದನೆಯನ್ನು ನ್ಯಾಯಮೂರ್ತಿಗಳು ಮಾಡಬಾರದಿತ್ತು.
ಜಸ್ಟೀಸ್ ದೀಕ್ಷಿತರು ಕೊಟ್ಟ ತೀರ್ಪುಗಳನ್ನು ಅವಲೋಕಿಸಿದರೆ ಅವರ ಹಿಂದುತ್ವವಾದಿ ಮನಸ್ಥಿತಿಯನ್ನು ಅರಿಯಬಹುದಾಗಿದೆ. ಎರಡು ವರ್ಷಗಳ ಹಿಂದೆ ಅತ್ಯಾಚಾರ ಪ್ರಕರಣವೊಂದರಲ್ಲಿ ಆರೋಪಿಗೆ ಜಾಮೀನು ನೀಡಿದ ಮಾನ್ಯ ದೀಕ್ಷಿತರು “ಅತ್ಯಾಚಾರಕ್ಕೆ ಬಲಿಯಾದ ಮಹಿಳೆ ಅತ್ಯಾಚಾರದ ನಂತರ ಭಾರತೀಯ ಸಂಸ್ಕೃತಿಯ ರೀತಿಯಲ್ಲಿ ನಡೆದುಕೊಂಡಿಲ್ಲವಾದ್ದರಿಂದ ರೇಪ್ ಸಾಧ್ಯತೆಯ ಬಗ್ಗೆಯೇ ಅನುಮಾನ ವ್ಯಕ್ತವಾಗುತ್ತದೆ” ಎಂದು ಜಾಮೀನಿಗೆ ಕಾರಣವನ್ನು ಕೊಟ್ಟಿದ್ದರು. ಇದು ಮಹಿಳಾ ವಿರೋಧಿ ನಿಲುವಾಗಿತ್ತು. ಅತ್ಯಾಚಾರವೇ ಘೋರ ದುರಂತ, ಅದರ ಮುಂಚೆ ಹಾಗೂ ನಂತರದ ಘಟನೆಗಳು ಅತ್ಯಾಚಾರದ ತೀವ್ರತೆಯನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ಆದರೆ ಮನುವಾದಿಗಳಿಗೆ ಮಹಿಳೆಯರೇ ತಪ್ಪಿತಸ್ಥರು ಎನ್ನಿಸುವುದು ಅತ್ಯಂತ ಹಳೆಯ ಮನೋವ್ಯಾಧಿ. ಈ ಅವಮಾನಕಾರಿಯಾದ ತೀರ್ಪು ರಾಜ್ಯಾದ್ಯಂತ ಆಕ್ರೋಶವನ್ನು ಹುಟ್ಟುಹಾಕಿತ್ತು. ಕೊನೆಗೆ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರೇ ಮಧ್ಯಪ್ರವೇಶಿಸಿ ದೀಕ್ಷಿತರ ಆದೇಶದಲ್ಲಿದ್ದ ಅಪಸವ್ಯಗಳನ್ನು ನಿವಾರಿಸಬೇಕಾಯ್ತು. ಇಷ್ಟಾದರೂ ಜಸ್ಟೀಸ್ ದೀಕ್ಷಿತರು ಬದಲಾಗಲಿಲ್ಲ. ಅವಕಾಶ ಸಿಕ್ಕಾಗಲೆಲ್ಲಾ ಮನುವಾದದ ಪ್ರತಿಪಾದನೆ ನಿಲ್ಲಿಸಲಿಲ್ಲ. ಹಿಜಾಬ್ ಪ್ರಕರಣದಲ್ಲೂ ಸಹ ಶಾಲೆಗಳಲ್ಲಿ ನಡೆಯುವ ಹಿಂದೂ ಸಂಪ್ರದಾಯಗಳನ್ನು ಸಮರ್ಥಿಸಿಕೊಂಡ ನ್ಯಾ.ದೀಕ್ಷಿತರು ಹಿಜಾಬ್ ಧಾರ್ಮಿಕ ಆಚರಣೆಯೇ ಅಲ್ಲ ಎಂದು ವಾದಿಸಿ ತಮ್ಮ ಮತಾಂಧತೆಯನ್ನು ಪ್ರದರ್ಶಿಸಿದ್ದರು.
ನ್ಯಾಯಮೂರ್ತಿಗಳು ನ್ಯಾಯಾಂಗದ ಕಟ್ಟುಪಾಡುಗಳಿಗೆ, ಸಂವಿಧಾನ ಹಾಕಿಕೊಟ್ಟ ಚೌಕಟ್ಟುಗಳಿಗೆ ಬದ್ಧರಾಗಿರಬೇಕು. ಆದರೆ ಸಂವಿಧಾನಕ್ಕೆ ಹೊರತಾದ ಧಾರ್ಮಿಕ ಮೂಲಗಳಾದ ಹಿಂದು ಪುರಾಣ, ಮನುಸ್ಮೃತಿ ಗಳನ್ನು ಆಧರಿಸಿ ನ್ಯಾಯನಿರ್ಣಯಗಳನ್ನು ಮಾಡುವುದು ಆಕ್ಷೇಪಾರ್ಹ. ಯಾವುದೇ ಧರ್ಮಗಳಾಗಲೀ, ಧರ್ಮಗ್ರಂಥಗಳಾಗಲೀ ಸಂವಿಧಾನಕ್ಕಿಂತ ದೊಡ್ಡದಾಗಲು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಧ್ಯವಿಲ್ಲ. ಆದರೆ.. ಸಂವಿಧಾನದಲ್ಲಿ ವಿಶ್ವಾಸವೇ ಇಲ್ಲದ, ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲದ ಸನಾತನಿಗಳು, ವೈದಿಕಶಾಹಿಗಳು ಮಾತ್ರ ಧರ್ಮಗ್ರಂಥಗಳ ಶ್ರೇಷ್ಟತೆಯ ಭ್ರಮೆಯಲ್ಲಿ ಮಿಂದೇಳುತ್ತಿರುತ್ತಾರೆ. ಸಂವಿಧಾನಕ್ಕೆ ಧರ್ಮವೇ ಮೂಲ ಎನ್ನುವ ಸಂಕಥನವನ್ನು ಸೃಷ್ಟಿಸುತ್ತಿದ್ದಾರೆ. ಮನುಸ್ಮೃತಿ ಹಾಗೂ ಅದರ ಸಾರವಾದ ಭಗವದ್ಗೀತೆಗಳ ಆಧಾರದಲ್ಲಿ ನ್ಯಾಯಾಂಗ ವ್ಯವಸ್ಥೆ ರೂಪಗೊಳ್ಳಬೇಕು ಎಂದು ಬಯಸುತ್ತಿದ್ದಾರೆ.
ಇಂತಹ ಧೋರಣೆಯನ್ನು ಸಂವಿಧಾನ ಪರವಾಗಿರುವ ಈ ದೇಶದ ಸಮಸ್ತ ಪ್ರಜೆಗಳು ವಿರೋಧಿಸಬೇಕಿದೆ. ಪ್ರಜ್ಞಾವಂತ ಸಮಾಜ ಮನುವಾದಿಗಳ ಹುನ್ನಾರಕ್ಕೆ ಪ್ರತಿರೋಧ ವ್ಯಕ್ತಪಡಿಸಬೇಕಿದೆ. ಸರ್ವರಿಗೂ ಸಮಾನತೆಯನ್ನು ಕೊಟ್ಟ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮನುವಾದಿ ಪುರೋಹಿತಶಾಹಿ ಹಿಂದುತ್ವವಾದಿಗಳಿಂದ ಕಾಪಾಡಿಕೊಳ್ಳಬೇಕಿದೆ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು, ಪತ್ರಕರ್ತರು
ಇದನ್ನೂ ಓದಿ- ಒಳ ಮೀಸಲಾತಿಯ ಹೊರ ಲೆಕ್ಕಾಚಾರಗಳು..