ಸರ್ಕಾರಿ ನೌಕರರ ಆರ್ಎಸ್ಎಸ್ ಸದಸ್ಯತ್ವ ನಿಷೇಧವನ್ನು ಹಿಂಪಡೆಯಲಾಗಿದೆ. ಒಂದು ವೇಳೆ ಅದು ಫಲಿಸಿದ್ದೇ ಆದಲ್ಲಿ ಸಮಾಜದಲ್ಲಿ “ವ್ಯಕ್ತಿಗಿಂತ ಸಂಘಪರಿವಾರ ದೊಡ್ಡದು” ಎಂಬ ಸಿದ್ಧಾಂತ ರೂಢಿ ಗೊಳ್ಳುತ್ತದೆ. ಮತ್ತದೇ ಚಾತುರ್ವರ್ಣ ವ್ಯವಸ್ಥೆಗೆ ಮರಳುತ್ತದೆ. ಆರ್ಎಸ್ಎಸ್ ವಿರುದ್ಧ ಧ್ವನಿ ಎತ್ತಿದವರ ಧ್ವನಿಯನ್ನು ಅಡಗಿಸುವ ಕೆಲಸ ನಿರಂತರವಾಗುತ್ತದೆ – ಆಕಾಶ್ ಆರ್ ಎಸ್, ಪತ್ರಕರ್ತರು.
ಆರ್ಎಸ್ಎಸ್ ಇಲ್ಲಿಯವರೆಗೂ ದೇವರು, ಧರ್ಮ ಎಂಬ ಭಾವನಾತ್ಮಕತೆಯಿಂದ ದೇಶದ ಜನರನ್ನು ತಮ್ಮ ವಶಕ್ಕೆ ಪಡೆದು ಕೊಳ್ಳುತ್ತಿದ್ದರು. ಈಗ ಒಂದು ಹೆಜ್ಜೆ ಮುಂದೆ ಹೋಗಿ ಸರ್ಕಾರಿ ನೌಕರರನ್ನು ಅವರತ್ತ ಸೆಳೆಯುವಲ್ಲಿ ಮುಂದಾಗುತ್ತಿದೆ. ಭಾರತೀಯ ಸೇವಾ ನಿಯಮವು 1966 ರಿಂದ ಸರ್ಕಾರಿ ಸಿಬ್ಬಂದಿಗೆ ಆರ್ಎಸ್ಎಸ್ ಮತ್ತು ಜಮಾತ್-ಎ-ಇಸ್ಲಾಮಿಯ ಸದಸ್ಯತ್ವ ಪಡೆಯುವುದನ್ನು ಮತ್ತು ಅವುಗಳು ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸಿತ್ತು. 58 ವರ್ಷದ ಬಳಿಕ ಈಗ ಇದನ್ನು ಎನ್ಡಿಎ ಮೈತ್ರಿಯ ಒಕ್ಕೂಟ ಸರ್ಕಾರವೂ ಕೇವಲ ಆರ್ಎಸ್ಎಸ್ ನಿಷೇಧವನ್ನು ಮಾತ್ರ ಹಿಂತೆಗೆದುಕೊಂಡಿದೆ. ಈ ಮೂಲಕ ಸಂಘ ಪರಿವಾರ ತಾನು ಮತ್ತೆ ರಾಜಕೀಯ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದೇನೆಂದು ದೇಶದ ರಾಜಕೀಯ ವ್ಯವಸ್ಥೆಗೆ ಸಂದೇಶ ರವಾನಿಸಿದೆ. ಇದಕ್ಕೆ ದೇಶದೆಲ್ಲೆಡೆ ಪರ ವಿರೋಧ ಚರ್ಚೆ, ಆಕ್ರೋಶ ಕೇಳಿಬರುತ್ತಿದೆ. ಹಾಗೇ ಆತಂಕವೂ ಮನೆ ಮಾಡಿದೆ.
ಕಳೆದ 10 ವರ್ಷಗಳಿಂದ ಆರ್ಎಸ್ಎಸ್ ನೆರಳಿನ ಬಿಜೆಪಿಯ ಅಧಿಕಾರಕ್ಕೆ ನಲುಗಿದ ಭಾರತ ದೇಶವು ಈಗ ಮತ್ತೆ ಅಂತಹದೇ ಕಾಲದಲ್ಲಿ ಬದುಕಬೇಕೆಂಬುದು ದಿಗಿಲು ಹುಟ್ಟಿಸುತ್ತಿದೆ. ಧರ್ಮ, ಜಾತಿ, ಹಿಂಸೆ, ವ್ಯಾಪಾರ, ಅನ್ನ, ದೇವಸ್ಥಾನ ಯಾವುದನ್ನೂ ಬಿಡದ ಸಂಘ ಪರಿವಾರದ ವಕ್ರದೃಷ್ಟಿ ಈಗ ಸರ್ಕಾರಿ ಸೇವಾ ವಲಯದ ಮೇಲೂ ಬಿದ್ದಿದೆ. ಆರ್ ಎಸ್ ಎಸ್ ಕೇವಲ ಸಾಮಾಜಿಕ ಸಂಯೋಜನೆಯ ಪರಿವಾರವಾಗಿದ್ದರೆ ಈ ದೇಶವು ಇಷ್ಟೊಂದು ವಿರೋಧಿಸುತ್ತಿರಲಿಲ್ಲ. ಹಾಗೂ ಆತಂಕವೂ ಪಡುತ್ತಿರಲಿಲ್ಲ. ಆದರೆ ಅದು ಜನ್ಮತಾಳಿದ್ದೇ ಧರ್ಮದ ನಂಜು ಕುಡಿದು, ಮನುಷ್ಯ ವಿರೋಧಿಯ ಬಟ್ಟೆ ತೊಟ್ಟು, ಜಾತಿಯ ರೂಪ ಪಡೆದು. ಯಾಕೆಂದರೆ ಆರ್ ಎಸ್ ಎಸ್ ಕೇವಲ ಸಂಘಟನೆಯಾಗಿ ರೂಪುಗೊಂಡಿದ್ದಲ್ಲ, ಅದು ಸಿದ್ಧಾಂತದಿಂದ ರೂಪಗೊಂಡಿದೆ.
ಆರ್ ಎಸ್ ಎಸ್, ಮೇಲು-ಕೀಳು ಜೀವಂತ
ಆರ್ ಎಸ್ ಎಸ್ ಆರಂಭದಿಂದಲೂ ಜಾತಿ ಮತ್ತು ಧರ್ಮದ ಆಧಾರ ಮೇಲೆಯೇ ತನ್ನ ಅಧಿಕಾರ ಮತ್ತು ಸ್ಥಾನಮಾನ ಹಂಚಿಕೆಯಲ್ಲಿ ತೊಡಗಿದೆ. ಅದು ಈಗಿನ ಬಿಜೆಪಿಯಲ್ಲೂ ನಡೆಯುತ್ತಿದೆ. ಸರ್ಕಾರಿ ನೌಕರರು ಸಮಾಜದಲ್ಲಿ ಅವಕಾಶದಿಂದ ವಂಚಿತರಾದವರ ಪರವಾಗಿ ಕಾರ್ಯ ಕೈಗೊಳ್ಳಬೇಕು, ಯೋಜನೆಗಳನ್ನು ತಲುಪಿಸಬೇಕಾಗಿರುತ್ತದೆ. ಆದರೆ ಆರ್ಎಸ್ಎಸ್ ಇಂತಹ ಮನಸ್ಥಿತಿಯಿಂದ ದೂರವಿದೆ. ಇದು ಸದಾ ಚಾತುವರ್ಣವನ್ನು ಪೋಷಣೆ ಮಾಡುತ್ತ ಬಂದಿದೆ. ಅದಕ್ಕೆ ಉದಾಹರಣೆ ಎಂಬಂತೆ ದಲಿತ ಸಮುದಾಯಕ್ಕೆ ಸೇರಿದವರುಗಳಾದ ಬಿಜೆಪಿ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಅವರಿಗೆ ನಾಗ್ಪುರ ಆರ್ಎಸ್ಎಸ್ನ ಡಾ.ಹೆಗ್ಡೆವಾರ್ ಸ್ಮಾರಕ ಕಟ್ಟಡದ ಒಳಗೆ ಪ್ರವೇಶ ನಿರಾಕರಿಸಲಾಯಿತು. 2022 ರಲ್ಲಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಎಂಎಲ್ಸಿ ಚಲವಾದಿ ನಾರಾಯಣಸ್ವಾಮಿ ಅವರ ತಲೆ ಮೇಲೆ ಆರ್ಎಸ್ಎಸ್ ಚಡ್ಡಿ ಹೊರೆಸಿ ಪ್ರತಿಭಟನೆ ಮಾಡಿಸಿದ್ದು, ಇತ್ತೀಚಿಗೆ ವಿಜಯಪುರ ಕ್ಷೇತ್ರದಲ್ಲಿ ಸತತ 07 ಬಾರಿ ಗೆದ್ದ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿಯವರು ಮೇಲ್ವರ್ಗದವರು ಕೇಂದ್ರದಲ್ಲಿ ಸಚಿವರಾಗಿದ್ದರೆ ದಲಿತರಿಗೆ ಆ ಅವಕಾಶವಿಲ್ಲ ಎಂದು ಅಸಮಾಧಾನ ಹೊರಹಾಕಿದ್ದನ್ನು ಕಾಣಬಹುದು.
ಆರ್ ಎಸ್ ಎಸ್ ನಿಷೇಧ-ಗಾಂಧಿ ಹತ್ಯೆ
ಆರ್ ಎಸ್ ಎಸ್ ಗಾಂಧಿ ಅವರ ವಿಚಾರಧಾರೆಗಳನ್ನು, ಸಿದ್ಧಾಂತಗಳನ್ನು ವಿರೋಧಿಸುತ್ತಾ ಬಂದವರು. ಅವರ ದೀನದಲಿತ, ಅಲ್ಪಸಂಖ್ಯಾತರ ಓಲೈಕೆ ಎಲ್ಲವೂ ಆರ್ ಎಸ್ ಎಸ್ ನ ಸಿದ್ಧಾಂತಕ್ಕೆ ಅಡ್ಡಿ ಪಡಿಸುತ್ತಿತ್ತು. ಇದನ್ನು ಸಹಿಸಲಾಗದೆ ಗಾಂಧಿಯನ್ನು 1948 ಫೆ 4ರಂದು ಸಾವರ್ಕರ್ ಆಪ್ತನಾದ ಗೋಡ್ಸೆ ಹತ್ಯೆಗೈದ. ಇದರಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ಆರ್ಎಸ್ಎಸ್ ನ್ನು ನಿಷೇಧಿಸಿದರು. ಇದಲ್ಲದೆ ಈ ದೇಶದ ತ್ರಿವರ್ಣ ಧ್ವಜವನ್ನು ಕೂಡ ಒಪ್ಪದ ಆರ್ ಎಸ್ ಎಸ್ ಗೆ ಇದೇ ವಲ್ಲಭಭಾಯಿ ಪಟೇಲ್ ಎಚ್ಚರಿಕೆಯ ಸಂದೇಶವನ್ನು ಕೂಡ ಕೊಟ್ಟಿದ್ದರು. ಕೊನೆಯದಾಗಿ ಆರ್ ಎಸ್ ಎಸ್ ಸಾಮಾಜಿಕ ಸಂಯೋಜನೆಯಾಗಿ ಮುಂದುವರೆಯುತ್ತೇವೆ, ರಾಜಕೀಯ ಉದ್ದೇಶ ಹೊಂದುವುದಿಲ್ಲ ಎನ್ನುವ ಕ್ಷಮಾಪಣ ಪತ್ರದ ಮೂಲಕ ನಿಷೇಧವನ್ನು ಹಿಂಪಡೆಯಿತು.
ಮನುಸ್ಮೃತಿ, ಗೋಲ್ವಾಲ್ಕರ್, ಆರ್ಎಸ್ಎಸ್
ಮನುಸ್ಮೃತಿಯು ಅಸ್ಪೃಶ್ಯತೆ ನಿರ್ಮಾಣ ಮಾಡಿ ಹೆಣ್ಣು, ಹೊನ್ನು, ಅಧಿಕಾರ, ಶಿಕ್ಷಣ ಎಲ್ಲವೂ ಸವರ್ಣಿಯರೇ ಪಡೆಯಬೇಕೆಂದು ಕಾನೂನು ರೂಪಿಸಿತು. ಅದನ್ನೇ ಮುಂದುವರೆಸಿದ ಆರ್ ಎಸ್ ಎಸ್ ಸಂಸ್ಥಾಪಕ ಗೋಲ್ವಾಲ್ಕರ್ ಕೂಡ ತನ್ನ ʼಬಂಚ್ ಆಫ್ ಥಾಟ್ಸ್ʼ ನಲ್ಲಿ “ದಲಿತರಿಗೆ, ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ ಸರಿಸಮಾನ ಅಧಿಕಾರ ಕೊಡುವುದಾದರೆ ಅಂತಹ ಸ್ವಾತಂತ್ರ್ಯ ಬೇಡ”, “ದೇಶದ ನ್ಯಾಯಾಂಗ, ಪತ್ರಿಕಾ ರಂಗ, ರಾಜಕೀಯ ರಂಗದ ಅಧಿಕಾರವೆಲ್ಲಾ ಸವರ್ಣೀಯರ ಕೈಯಲ್ಲೆ ಇರುವಂತೆ ನೋಡಿಕೊಳ್ಳಬೇಕು” ಎಂದಿದ್ದರು. ಈಗ ಅದನ್ನು ಈಡೇರಿಸುವಲ್ಲಿ ಆರ್ ಎಸ್ ಎಸ್ ನಿರಂತರವಾಗಿ ಶ್ರಮಿಸುತ್ತಿದ್ದು, ಸರ್ಕಾರಿ ನೌಕರರ ಸದಸ್ಯತ್ವ ನಿಷೇಧದ ಹಿಂಪಡೆಯೇ ಇದಕ್ಕೆ ಮುನ್ನುಡಿಯಾಗುವಂತಿದೆ.
ಇಷ್ಟೊಂದು ನ್ಯೂನತೆ, ಜಾತಿ, ಅಸೂಯೆ, ಮೇಲರಿಮೆ ತುಂಬಿರುವ ಆರ್ಎಸ್ಎಸ್, ಯಾವತ್ತೂ ಸಮಾಜದ ಹಿತಾಸಕ್ತಿಗೆ ದುಡಿದಿದ್ದಿಲ್ಲ. ಅದು ಯಾವಾಗಲು ಪಕ್ಕದ ಮನೆಯ ಮಕ್ಕಳ ರಕ್ತವೇ ಕೇಳಿದೆ, ಶೋಷಣೆಯ ಅರಿವಿಲ್ಲ, ಹಿಂದೂಗಳೆಂದು ಬೊಬ್ಬೆ ಹೊಡೆಯುವುದನ್ನು ಬಿಟ್ಟು ದೀನದಲಿತರ ಹತ್ಯೆಗಳಿಗೆ ಬೀದಿಗಿಳಿದು ಪ್ರತಿಭಟಿಸಿದ್ದಿಲ್ಲ. ಇದಲ್ಲದೆ ದೇಶದ ಜನರ ಎದುರು ಗೋವಿನ ಮುಖವಾಡ ಹಾಕಿ ಸಂಘ ಪರಿವಾರವನ್ನು ಓಲೈಸಲು ನಮ್ಮದು ಸುಭಾಷ್ ಚಂದ್ರ ಬೋಸ್ ಸಿದ್ಧಾಂತವೆಂದು ಹೇಳಿದ್ದು, ಮುಸ್ಲಿಂರನ್ನು ಸಮರ್ಥಿಸಿ ಕೊಂಡಿದ್ದು, ಅಷ್ಟೇ ಅಲ್ಲ ವಿಶ್ವಗುರುವಿಗೆ ಅಹಂಕಾರದ ಅಧಿಕಾರ ಬೇಡ ಎಂದಿದ್ದು ಹೀಗೆ ಹಲವಾರು ವಿಷಯಗಳನ್ನು ಜನಪ್ರಿಯತೆಗೆ ರೂಪಿಸಿ ಕೊಂಡಿದೆ. ಆದರೆ ಇವೆಲ್ಲವೂ ಕಾಲಕಾಲಕ್ಕೆ ಸುಳ್ಳೆಂದು ಸಾಬೀತು ಕೂಡ ಆಯಿತು. ಇದರಂತೆಯೇ ಈಗ ತಮ್ಮತ್ತ ಸರ್ಕಾರಿ ನೌಕರರನ್ನು ಸೆಳೆಯುವ ಪ್ರಯತ್ನದಲ್ಲಿದೆ. ಹಾಗಂತ ಆರ್ ಎಸ್ ಎಸ್ ಸಿದ್ಧಾಂತವನ್ನು ಒಳಗೊಂಡವರು ಸರ್ಕಾರಿ ನೌಕರಿಯಲ್ಲಿ ಇಲ್ಲವೆಂದಲ್ಲ , ಈಗಲೂ ಇದ್ದಾರೆ. ಅವರು ಆರ್ಎಸ್ಎಸ್ ಹೇಳಿದಂತೆ ಕೆಲಸ ಕೂಡ ಮಾಡುತ್ತಿದ್ದಾರೆ. ಅದು ಬೆರಳೆಣಿಕೆಯಷ್ಟು. ಸಂವಿಧಾನವು ಅವರೆಲ್ಲರನ್ನು ತನ್ನ ಹತೋಟಿಯಲ್ಲಿ ಇಟ್ಟುಕೊಂಡಿದೆ. ಆ ಬೆರಳೆಣಿಕೆ ಪೂರ್ಣವಾಗಿಸಲು ಈ ನಿಷೇಧ ಹಿಂಪಡೆಯುವಿಕೆ ಆದಂತಿದೆ. ಆದರೆ ಇದು ಎಷ್ಟರಮಟ್ಟಿಗೆ ಫಲಿಸುತ್ತದೆಯೋ ತಿಳಿಯದು. ಒಂದು ವೇಳೆ ಅದು ಫಲಿಸಿದ್ದೇ ಆದಲ್ಲಿ ಸಮಾಜದಲ್ಲಿ “ವ್ಯಕ್ತಿಗಿಂತ ಸಂಘಪರಿವಾರ ದೊಡ್ಡದು” ಎಂಬ ಸಿದ್ಧಾಂತ ರೂಢಿ ಗೊಳ್ಳುತ್ತದೆ. ಮತ್ತದೇ ಚಾತುರ್ವರ್ಣ ವ್ಯವಸ್ಥೆಗೆ ಮರಳುತ್ತದೆ. ಆರ್ಎಸ್ಎಸ್ ವಿರುದ್ಧ ಧ್ವನಿ ಎತ್ತಿದವರ ಧ್ವನಿಯನ್ನು ಅಡಗಿಸುವ ಕೆಲಸ ನಿರಂತರವಾಗುತ್ತದೆ. ಇಡೀ ಅಧಿಕಾರ ಕೇಂದ್ರವೇ ನಾಗ್ಪುರದ ಆರ್ಎಸ್ಎಸ್ ಕಚೇರಿಯಲ್ಲಿ ಬೆತ್ತಲಾಗಿ ಕೂರುತ್ತದೆ. ಗಾಂಧಿ, ಅಂಬೇಡ್ಕರ್, ಬಸವಣ್ಣ, ನಾರಾಯಣ ಗುರು, ಬುದ್ಧ, ಕುವೆಂಪು ಅಂಥವರ ಆಶಯಗಳೆಲ್ಲ ಈ ಮಣ್ಣಿನಲ್ಲಿ ಮಾಸಿ ಹೋಗುವ ಸಾಧ್ಯತೆಗಳು ಹೆಚ್ಚಾಗ ತೊಡಗುತ್ತವೆ.
ಆಕಾಶ್.ಆರ್.ಎಸ್
ಪತ್ರಕರ್ತರು
ಇದನ್ನೂ ಓದಿ- ಹಕ್ಕುಗಳಿಗಾಗಿ ಭಾರತೀಯ ಸೊಸೆಯಂದಿರ ನಿರಂತರ ಹೋರಾಟಗಳು