ಮಾರ್ಚ್ 12, 2023ರಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯನ್ನು (Bengaluru-Mysuru expressway) ಉದ್ಘಾಟನೆ ಮಾಡಿದ ದಿನದಿಂದಲೂ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಲ್ಲಿರುತ್ತಲೇ ಇದೆ. ಉದ್ಘಾಟನೆಯಾದ ಮೊದಲ ದಿನದಿಂದಲೂ ಮೂಲ ಸೌಕರ್ಯಗಳಿಲ್ಲದೇ ಪ್ರಯಾಣಿಕರು ಪರದಾಡಿದ್ದು ನೋಡಿದ್ದೇವೆ. ಈಗ ಇದಕ್ಕೆಲ್ಲ ಕೊಂಚ ಪರಿಹಾರ ಸಿಕ್ಕಿತ್ತಾಗಿದೆ. ಹೌದು 118 ಕಿಮೀ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಉದ್ದಕ್ಕೂ ಹಲವಾರು ಸೌಕರ್ಯಗಳನ್ನು ಆರಂಭಿಸಲು ಮುಂದಾಗಿದೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಕರ್ನಾಟಕ ಘಟಕವು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಉದ್ದಕ್ಕೂ ಟಾಯ್ಲೆಟ್ ಬ್ಲಾಕ್‌ಗಳು, ಆಹಾರ ಮಳಿಗೆಗಳು ಮತ್ತು ಫುಟ್ ಓವರ್‌ಬ್ರಿಡ್ಜ್‌ಗಳನ್ನು (refreshment outlets, toilet blocks and foot overbridges) ನಿರ್ಮಿಸಲು ಎರಡು ಕಂಪನಿಗಳಿಗೆ 36.5 ಕೋಟಿ ರೂಪಾಯಿ ಮೌಲ್ಯದ ಗುತ್ತಿಗೆಯನ್ನು ನೀಡಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.
ಈ ಹೆದ್ದಾರಿಯಲ್ಲಿ ನಾಲ್ಕು ಟಾಯ್ಲೆಟ್ ಬ್ಲಾಕ್‌ಗಳು, ಕುಡಿಯುವ ನೀರು ಒದಗಿಸಲು ಎರಡು ಘಟಕ ಸೌಲಭ್ಯಗಳು, ಚಹಾ ಮತ್ತು ಕಾಫಿ, ಪ್ಯಾಕ್ ಮಾಡಿದ ಆಹಾರ ಮತ್ತು ವಿಕಲಚೇತನರಿಗೆ ಸೇರಿದಂತೆ ಶೌಚಾಲಯಗಳು, 24 ಅಡಿ ಮೇಲ್ಸೇತುವೆಗಳನ್ನು ಒದಗಿಸಲಾಗುತ್ತದೆ ಎಂದು ಕಳೆದ ತಿಂಗಳು ನೀಡಿದ ಆದೇವವನ್ನು ಉಲ್ಲೇಖಿಸಿ ಎನ್‌ಎಚ್‌ಎಐ ಅಧಿಕಾರಿಗಳು ತಿಳಿಸಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಎನ್‌ಎಚ್‌ಎಐ ಮೈಸೂರು ಮತ್ತು ಬೆಂಗಳೂರು (Mysore and Bengaluru) ನಡುವೆ ಪ್ರಯಾಣಿಸುವ ಪ್ರಯಾಣಿಕರಿಂದ ವಾಶ್‌ರೂಮ್‌ಗಳು, ಪೆಟ್ರೋಲ್ ಬಂಕ್‌ಗಳು ಮತ್ತು ಎಕ್ಸ್‌ಪ್ರೆಸ್‌ವೇ ಉದ್ದಕ್ಕೂ ಪಾದಚಾರಿ ಸ್ನೇಹಿ ಮೂಲಸೌಕರ್ಯಗಳಂತಹ ಮೂಲಭೂತ ಸೌಲಭ್ಯಗಳ ಕೊರತೆಯ ಬಗ್ಗೆ ಸಾಲು ಸಾಲು ದೂರುಗಳು ದಾಖಲಾಗಿದ್ದು, ಈ ಕುರಿತು ಮಾಧ್ಯಮಗಳು ಕೂಡ ಗ್ರೌಂಡ್ ರಿಪೋರ್ಟ್ ವರದಿ ಸಹ ಮಾಡಿತ್ತು. ಈಗ ಇದಕ್ಕೆ ಸಾತ್ವಿಕ ಪರಿಹಾರ ನೀಡಲು NHAI ನಿರ್ಧರಿಸಿದೆ.
ಈ ಕುರಿತು ಮಾತನಾಡಿರುವ ಎನ್‌ಎಚ್‌ಎಐ ಯೋಜನಾ ನಿರ್ದೇಶಕ ರಾಹುಲ್ ಗುಪ್ತಾ, “ರಾಮನಗರ ಜಿಲ್ಲೆಯ ಶೇಷಗಿರಿಹಳ್ಳಿ ಟೋಲ್ ಪ್ಲಾಜಾದಲ್ಲಿ ಮತ್ತು ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರುನಲ್ಲಿ ಕ್ರಮವಾಗಿ ಹೆದ್ದಾರಿಯ ಎರಡೂ ಬದಿಯಲ್ಲಿ ಒಂದು ನೆಸ್ಟ್ (ಮಿನಿ) (Nest (Mini)) ಸೌಲಭ್ಯ ಮತ್ತು ಒಂದು ಶೌಚಾಲಯದ ಬ್ಲಾಕ್ ಅನ್ನು ಸ್ಥಾಪಿಸಲಾಗುವುದು,” ಎಂದು ಮಾಹಿತಿ ನೀಡಿದ್ದಾರೆ. ನೆಸ್ಟ್ (ಮಿನಿ) ಮತ್ತು ಶೌಚಾಲಯ ಬ್ಲಾಕ್‌ಗಳ ಸ್ಥಾಪನೆಗೆ ಗುತ್ತಿಗೆ ಮೌಲ್ಯ 1.5 ಕೋಟಿ ರೂಪಾಯಿಗಳಾಗಿದ್ದು, 24 ಅಡಿ ಮೇಲ್ಸೇತುವೆಗಳ ಸ್ಥಾಪನೆಗೆ 35 ಕೋಟಿ ರೂಪಾಯಿ ಆಗಿದೆ ಎಂದು ಮಾಹಿತಿ ನೀಡಿದ್ದಾರೆ.
ದಿ ಇಂಡಿಯನ್ ಎಕ್ಸ್ಪ್ರೆಸ್ ನೊಂದಿಗೆ ಮಾತನಾಡಿದ ರಾಹುಲ್ ಗುಪ್ತಾ, “ಗುತ್ತಿಗೆಯನ್ನು ಪಡೆದ ಎರಡು ಕಂಪನಿಗಳು ಸೌಲಭ್ಯಗಳನ್ನು ಕಾರ್ಯಗತಗೊಳಿಸುವ ಮತ್ತು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿರುತ್ತವೆ. ಮೇಲ್ಸೇತುವೆಗಳು ಯೋಜನೆಯು ಎಕ್ಸ್‌ಪ್ರೆಸ್‌ವೇ ಉದ್ದಕ್ಕೂ ಇರುವ ಗ್ರಾಮಸ್ಥರ ಬೇಡಿಕೆಯಾಗಿದೆ. ಪಂಚಾಯತ್ ಸದಸ್ಯರು ಮತ್ತು ಇತರ ಪಾಲುದಾರರೊಂದಿಗೆ ಚರ್ಚೆ ನಡೆಸಿದ ನಂತರ ನಾವು ಎಕ್ಸ್‌ಪ್ರೆಸ್‌ವೇಯ ವಿವಿಧ ಸ್ಥಳಗಳಲ್ಲಿ 24 ಅಡಿ ಮೇಲ್ಸೇತುವೆಗಳನ್ನು ಸ್ಥಾಪಿಸಲು ನಿರ್ಧರಿಸಿದ್ದೇವೆ. ಈ ವರ್ಷದ ಡಿಸೆಂಬರ್ ವೇಳೆಗೆ ಫುಟ್ ಓವರ್‌ಬ್ರಿಡ್ಜ್‌ಗಳು ಸಿದ್ಧವಾಗಲಿದೆ ಎಂದು ನಿರೀಕ್ಷೆ ಇದೆ. ಆದರೆ ಟಾಯ್ಲೆಟ್ ಬ್ಲಾಕ್‌ಗಳು ಮತ್ತು ರಿಫ್ರೆಶ್‌ಮೆಂಟ್ ಔಟ್‌ಲೆಟ್‌ಗಳು ಮಾರ್ಚ್‌ನೊಳಗೆ ಸಿದ್ಧವಾಗಬೇಕು ಎಂದು ಹೇಳಿದ್ದಾರೆ.